ಬೇಲೂರದಲ್ಲಿರೈತರ ಪ್ರತಿಭಟನೆ
ವಿಕ ಸುದ್ದಿಲೋಕ ಬೇಲೂರು
ವಿದ್ಯುತ್ ಸಮಸ್ಯೆ ಬಗೆಹರಿಸುವಲ್ಲಿಸೆಸ್ಕ್ ಎಂಜಿನಿಯರ್ ಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಹಾಗೂ ಕಾಫಿ ಬೆಳೆಗಾರರು ಪ್ರತಿಭಟನೆ ನಡೆಸಿದರು.
ಬಸವೇಶ್ವರ ವೃತ್ತದಲ್ಲಿಮಾನವ ಸರಪಳಿ ರಚಿಸಿ ರಸ್ತೆತಡೆ ನಡೆಸಿದ ನಂತರ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಜಿಲ್ಲಾರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಮಾತನಾಡಿ,‘‘ಬೇಸಿಗೆ ಹಂಗಾಮು ಸಮೀಪಿಸುತ್ತಿದ್ದು, ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಮಲೆನಾಡು ಬಯಲು ಸೀಮೆಯಲ್ಲಿರೈತರು ಪರಿತಪಿಸುತ್ತಿದ್ದಾರೆ.ಅಸಮರ್ಪಕ ವಿದ್ಯುತ್ ಸಮಸ್ಯೆಯಿಂದ ಜಮೀನಿಗೆ ಹೋಗಿ ನೀರು ಹಾಯಿಸುವುದು ಕಷ್ಟವಾಗುತ್ತಿದೆ,’’ಎಂದು ಬೇಸರ ವ್ಯಕ್ತಪಡಿಸಿದರು.
‘‘ಗೆಂಡೇಹಳ್ಳಿ ಫೀಡರ್ ನಲ್ಲಿಸಹ ಇದೇ ಸಮಸ್ಯೆ ಉಂಟಾಗಿದೆ. ದಬ್ಬೆ, ಸಿಂಗಾಪುರ, ತೊಳಲು ಸೇರಿದಂತೆ ಒಂದೇ ಟಿಸಿ ಇರುವುದರಿಂದ ಸಮಸ್ಯೆ ಉಲ್ಭಣಗೊಂಡಿದೆ. ಹೆಚ್ಚುವರಿಯಾಗಿ ಟಿಸಿ ಅಳವಡಿಸಲು ಒಂದು ವರ್ಷದ ಹಿಂದೆಯೇ ಪ್ರತಿಭಟನೆ ಮೂಲಕ ಮನವಿ ಮಾಡಿದರೂ, ಕೇವಲ ಭರವಸೆ ಹೊರತು ಬೇರೇನೂ ಆಗಿಲ್ಲ. ಟಿಸಿ.ಅಳವಡಿಸಲು ಟೆಂಡರ್ ಕರೆದಿದ್ದು, ಒಬ್ಬರೇ ಮಾತ್ರ ಟೆಂಡರ್ ಹಾಕಿರುವುದರಿಂದ ಅದು ಕ್ಯಾನ್ಸಲ್ ಆಗಿದೆ ಎನ್ನಲಾಗಿದೆ,’’ಎಂದು ದೂರಿದರು.
‘‘ಸೆಸ್ಕ್ ಇಲಾಖೆ ನಿರ್ದೇಶಕ ಶರತ್ ಚಂದ್ರ ಅವರನ್ನು ಸಂಪರ್ಕಿಸಿದಾಗ 1 ತಿಂಗಳಲ್ಲಿಸಮಸ್ಯೆ ಬಗೆಹರಿಸಿಕೊಡುವುದಾಗಿ ಹೇಳುತ್ತಾರೆ. ಆದರೆ ಹೆಚ್ಚುವರಿ ಟಿಸಿ ತೆಗೆದುಕೊಂಡು ಕೆಲಸದ ಆದೇಶದೊಂದಿಗೆ ಬರುವವರಗೆ ನಾವು ಕಚೇರಿ ಮುಂಭಾಗ ಧರಣಿ ನಡೆಸುತ್ತೇವೆ. ಇಲ್ಲೇ ಅಡುಗೆ ಮಾಡಿ ಊಟ ಮಾಡಿ ಮಲಗುತ್ತೇವೆ,’’ ಎಂದರು.
ತಾಲೂಕು ರೈತ ಸಂಘದ ಅಧ್ಯಕ್ಷ ಬೋಗಮಲ್ಲೇಶ್ ಮಾತನಾಡಿ,‘‘ಕಳೆದ ವರ್ಷ ಇದೇ ಸಂದರ್ಭ ಸಮಸ್ಯೆ ಉಂಟಾಗಿತ್ತು. ಇದೇ ರೀತಿ ಹೋರಾಟ ಮಾಡಿದಾಗ ಭರವಸೆ ನೀಡಿದರೆ ಹೊರತು ಕೆಲಸ ಮಾಡಲಿಲ್ಲ. ಈ ಬಗ್ಗೆ ಮೀಟಿಂಗ್ ಆದರೂ ಪ್ರಯೋಜನವಾಗಲಿಲ್ಲ. ನೀರು ಇಲ್ಲದಿದ್ದರೆ ಬೆಳೆ ಬೆಳೆಯುವುದಾದರೂ ಹೇಗೆ?. ಒಂದು ಕಡೆ ವನ್ಯಪ್ರಾಣಿಗಳ ಹಾವಳಿ, ಮತ್ತೊಂದು ಕಡೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ತೊಂದರೆಯಾಗಿದೆ,’’ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಮುಖರಾದ ಜಿ.ಕೆ.ಕುಮಾರ್ , ಬಿರಟೆಮನೆ ಸುರೇಶ್ , ತೊಳಲುಮೋಹನ್ , ಸುರೇಶ್ , ವೆಂಕಟೇಶ್ , ರಂಗನಾಥ್ ಮತ್ತಿತರರು ಹಾಜರಿದ್ದರು.
17 ಬಿಎಲ್ ಆರ್ 03 ಪಿ01 ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಬೇಲೂರಿನ ಸೆಸ್ಕ್ ಕಚೇರಿ ಎದುರು ರೈತ ಸಂಘದ ಕಾರ ್ಯಕರ್ತರು, ಕಾಫಿ ಬೆಳೆಗಾರರು ಪ್ರತಿಭಟನೆ ನಡೆಸಿದರು.

