ಅಮೃತಧಾರೆ

Contributed byShridevi Ambekallu|Vijaya Karnataka

Retirement brings worry about passing time. A guru offers four 'tablets' for peace of mind to an elderly man facing neglect. These tablets advise staying active, managing appetite, offering advice only when asked, and speaking less. The guru emphasizes patience and acceptance, comparing old age to deities. The advice helps the man find peace and respect.

four amritadhare pills from a guru to gracefully accept old age with peace

ವೃದ್ಧಾಪ್ಯವನ್ನು ಹೇಗೆ ಸ್ವೀಕರಿಸಬೇಕು?

--------------------

ಎಲ್ಲರಿಗೂ ಒಂದಲ್ಲಒಂದು ದಿನ ನಿವೃತ್ತಿಯಾಗುತ್ತದೆ. ಆಗ ಮನಸ್ಸಿಗೆ ಒಂದು ರೀತಿಯ ಕಳವಳ ಶುರುವಾಗುತ್ತದೆ. ನಾಳೆಯಿಂದ ಸಮಯ ಕಳೆಯುವುದಕ್ಕೆ ಏನು ಮಾಡಲಿ ಎನ್ನುವ ಚಿಂತೆ ತಲೆಹತ್ತುತ್ತದೆ. ಅದಕ್ಕೇನು ಮಾಡಬಹುದು?

----------------------

ಗುರುಗಳೊಬ್ಬರು ಪ್ರವಚನ ನೀಡಲು ಒಂದೂರಿಗೆ ಬರುತ್ತಾರೆ. ಗುರುಗಳ ಪ್ರವಚನದ ಪ್ರಭಾವ ದೊಡ್ಡದು. ಪ್ರವಚನ ಕೇಳುವುದಕ್ಕೆಂದು ತುಂಬಾ ಜನರು ಸೇರುತ್ತಿರುತ್ತಾರೆ. ಅವರು ತಮ್ಮ ಪ್ರವಚನದಲ್ಲಿಬದುಕಿಗೆ ಬೇಕಾದ ಒಳ್ಳೆಯ ಮಾತುಗಳನ್ನು ಹೇಳುತ್ತಿದ್ದರು. ಗುರುಗಳ ಮಾತುಗಳನ್ನು ಕೇಳುತ್ತಲೇ ಅದೆಷ್ಟೋ ಜನಗಳು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳತ್ತಿದ್ದರು.

ಪ್ರವಚನಕ್ಕೆ ಬಂದಿದ್ದ ಸಂದರ್ಭದಲ್ಲಿವೃದ್ಧರೊಬ್ಬರು, ಗುರುಗಳ ಬಳಿ ಬಂದು, ‘ನಿಮ್ಮ ಜತೆ ಏಕಾಂತದಲ್ಲಿಮಾತನಾಡಬೇಕು’ ಎಂದು ಕೇಳಿಕೊಳ್ಳುತ್ತಾರೆ. ಗುರುಗಳು ಸಮ್ಮತಿಸುತ್ತಾರೆ. ಗುರುಗಳ ಬಳಿ ತನ್ನ ದುಗುಡವನ್ನು ಹೇಳಿಕೊಳ್ಳುತ್ತಾರೆ-‘ಪೂಜ್ಯರೇ, ನಾನು ಇದುವರೆಗೆ ಸರಕಾರಿ ಸೇವೆಯಲ್ಲಿದ್ದೆ. ಈಗ ನಿವೃತ್ತನಾಗಿದ್ದೇನೆ. ವೃತ್ತಿಯಲ್ಲಿದ್ದಾಗ ಕೈತುಂಬಾ ಸಂಬಳ ಬರುತ್ತಿತ್ತು. ಈಗ ಕೈಗೆ ಬರುವುದು ಮಾಸಾಶನ ಮಾತ್ರ. ನನಗೆ ಕೆಲಸ ಇದ್ದಾಗ ಮನೆ, ಮಕ್ಕಳು, ಮಕ್ಕಳ ಊಟೋಪಚಾರ, ಪಾಠೋಪಚಾರ ಎಲ್ಲವೂ ಸರಿಯಾಗಿತ್ತು. ಮಗನಿಗೆ ಮದುವೆ ಮಾಡಿಸಿದ್ದೇನೆ. ಸೊಸೆ ಮನೆಗೆ ಬಂದಿದ್ದಾಳೆ. ಹೆಂಡತಿ ಕಾಲವಾಗಿದ್ದಾಳೆ. ನಿವೃತ್ತಿಯ ನಂತರ ನನ್ನ ಮಗ ಮತ್ತು ಸೊಸೆಗೆ ನಮ್ಮ ಮೇಲಿನ ದೃಷ್ಟಿಕೋನ ಬದಲಾಗಿದೆ. ಅವರು ನನ್ನನ್ನು ಉಪೇಕ್ಷೆ ಮಾಡುತ್ತಿದ್ದಾರೆ. ನನ್ನ ಪ್ರಾಥಮಿಕ ಅಗತ್ಯಗಳನ್ನು ಪೂರೈಸಲು ಹತ್ತು ಬಾರಿ ಲೆಕ್ಕಾಚಾರ ಮಾಡುತ್ತಿದ್ದಾರೆ. ಅವರ ನಡವಳಿಕೆ ನನಗೆ ತುಂಬಾ ಬೇಸರವನ್ನು ಉಂಟುಮಾಡಿದೆ. ನಾನು ತುಂಬಾ ನೊಂದಿದ್ದೇನೆ. ನನಗೆ ಸಾಯಬೇಕು ಎನಿಸುತ್ತಿದೆ. ನನಗೆ ಮನೆ ಬಿಟ್ಟು ಬೇರೆ ಕಡೆಗೆ ಹೋಗುವುದಕ್ಕೆ ಆಗುತ್ತಿಲ್ಲ. ಮನೆಯಲ್ಲಿನೆಮ್ಮದಿಯಿಂದ ಇರುವುದಕ್ಕೂ ಆಗುತ್ತಿಲ್ಲ. ನಾನು ನನ್ನ ಮನೆಯಲ್ಲಿಯೇ ಇದ್ದು ಗೌರವದಿಂದ ಬದುಕಬೇಕಾದರೆ ಏನು ಮಾಡಬೇಕು? ಏನಾದರೂ ಉಪಾಯವಿದ್ದರೆ ಹೇಳಿ. ನೀವು ಹೇಳಿದಂತೆ ನಾನು ಕೇಳುತ್ತೇನೆ’ ಎಂದು.

ನೆಮ್ಮದಿಗೆ ನಾಲ್ಕು ಮಾತ್ರೆ

ಗುರುಗಳು ವೃದ್ಧನ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊಳ್ಳುತ್ತಾರೆ. ನಂತರ ಅವರು ಮುಗುಳ್ನಗುತ್ತಾ ಹೇಳುತ್ತಾರೆ, ‘ನಾವು ನಿನಗೆ ನಾಲ್ಕು ನೆಮ್ಮದಿಯ ಮಾತ್ರೆಗಳನ್ನು ಕೊಡುತ್ತೇನೆ. ಈ ಮಾತ್ರೆಗಳನ್ನು ಹೊಟ್ಟೆಗೆ ತೆಗೆದುಕೊಳ್ಳುವುದಲ್ಲ. ಇವುಗಳನ್ನು ತಲೆಗೆ ತೆಗೆದುಕೊಳ್ಳಬೇಕು ಮತ್ತು ಇವುಗಳನ್ನು ಮನಸ್ಸಿಗೆ ತೆಗೆದುಕೊಳ್ಳಬೇಕು. ಈ ನಾಲ್ಕು ಮಾತ್ರೆಗಳು ನೀನು ಮನೆಯಲ್ಲಿದ್ದರೂ ನಿನ್ನನ್ನು ನೆಮ್ಮದಿಯಿಂದ ಇರಿಸುತ್ತವೆ. ಇವು ತುಂಬ ಪರಿಣಾಮಕಾರಿ ಮಾತ್ರೆಗಳು. ಇವು ನೀನು ನಿನ್ನ ಪರಿವಾರದ ಮಧ್ಯದಲ್ಲಿಖುಷಿ ಖುಷಿಯಿಂದ ಇರುವಂತೆ ಮಾಡುತ್ತವೆ. ಅವು-

‘ಸುಮ್ಮನೇ ಕಾಲಕಳೆಯಬೇಡ; ಕರೆಯದೆಯೇ ಊಟಕ್ಕೆ ಹೋಗಬೇಡ. ಕೇಳದೆಯೇ ಏನನ್ನೂ ಹೇಳಬೇಡ; ಸುಮ್ಮನೇ ಅದು ಇದು ಮಾತನಾಡಬೇಡ’ ಇದು ಮೊದಲ ಮಾತ್ರೆ. ನೀನು ಮನೆಯಲ್ಲಿಸುಮ್ಮನೇ ಕುಳಿತುಕೊಳ್ಳಬೇಡ. ನಿನಗೆ ಸಾಧ್ಯವಾಗುವ ಕೆಲಸಗಳನ್ನು ಮಾಡಿಕೊಂಡಿರು. ಯಥಾಶಕ್ತಿ ನಿನ್ನನ್ನು ನೀನು ಚಟುವಟಿಕೆಗಳಲ್ಲಿತೊಡಗಿಸಿಕೊಂಡಿರು. ಸುಮ್ಮನೇ ಅಲ್ಲಿಇಲ್ಲಿಕುಳಿತು ಕಾಲಕಳೆಯುತ್ತಲಿದ್ದರೆ ಇನ್ನೊಬ್ಬರಿಗೆ ತಲೆನೋವು ಬರುತ್ತದೆ. ನಿಮ್ಮ ಮಗನಿಗೆ ಮತ್ತು ಸೊಸೆಗೆ ‘ನನ್ನ ತಂದೆ, ನನ್ನ ಮಾವ ಏನಾದರೂ ಒಂದು ಕೆಲಸವನ್ನು ಮಾಡಿಕೊಂಡಿರುತ್ತಾರೆ. ಅವರು ಖಾಲಿ ಕುಳಿತುಕೊಳ್ಳುವುದಿಲ್ಲ’ ಎಂದು ಅನಿಸಬೇಕು. ಅವರ ಚಿಕ್ಕಪುಟ್ಟ ಕೆಲಸಗಳಲ್ಲಿನೆರವಾಗುವುದನ್ನು ರೂಢಿಸಿಕೋ.

ಎರಡನೆಯ ಮಾತ್ರೆ: ತೀರ ದಣಿಯಬೇಡ ಮತ್ತು ತೀರ ದಣಿಯದಂತೆ ಇರಬೇಡ. ಊಟದತ್ತ ಗಮನ ಕಮ್ಮಿ ಇರಲಿ. ಬಾಯಿಚಪಲಕ್ಕೆ ಕಡಿವಾಣ ಹಾಕಿಕೊಂಡಿರು. ನಿನ್ನ ಮಗ ಮತ್ತು ಸೊಸೆ ಏನೇ ಕೊಟ್ಟರೂ ಅದನ್ನು ಪ್ರಶಂಸಿಸುತ್ತ ಊಟಮಾಡು. ಅಡುಗೆ ಸರಿ ಇರದಿದ್ದರೆ ಹೊಟ್ಟೆ ಸರಿ ಇಲ್ಲವೆಂದು ಹೇಳಿ ಅಲ್ಲಿಂದ ಎದ್ದುಬಿಡು. ಅವರನ್ನು ದೂಷಿಸುವುದಕ್ಕೆ ಹೋಗಬೇಡ.

ಮೂರನೆಯ ಮಾತ್ರೆ ಕೇಳದೆಯೇ ಹೇಳಬೇಡ. ನಿನ್ನ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಉಚಿತವಾಗಿ ಸಲಹೆಯನ್ನು ಕೊಡುವುದಕ್ಕೆ ಹೋಗಬೇಡ. ಅವರೇನಾದರೂ ನಿನ್ನ ಹತ್ತಿರಕ್ಕೆ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಆಗ ಅವರಿಗೆ ಸಲಹೆ ಕೊಡು. ಅವರು ಕೇಳದೆ ನೀನೇ ಫ್ರೀಯಾಗಿ ಸಲಹೆ ಕೊಡಲುಹೋದರೆ ಅವರು ಅದನ್ನು ಕಿರಿಕಿರಿ ಎಂದು ಭಾವಿಸುತ್ತಾರೆ. ಸಲಹೆ ಮಾತ್ರ ನಿನ್ನದು; ನಿರ್ಧಾರ ಅವರದು. ಆ ವಿಷಯದಲ್ಲಿನಿಶ್ಚಿಂತನಾಗಿರು. ನಿನಗಿಷ್ಟವಿಲ್ಲದಿದ್ದರೂ ಅವರ ನಿರ್ಧಾರಕ್ಕೆ ಬದ್ಧನಾಗಿರು.

ನಾಲ್ಕನೆಯ ಮಾತ್ರೆ: ಹೆಚ್ಚು ಮಾತನಾಡಬೇಡ. ಅವರೆಷ್ಟು ಕೇಳುತ್ತಾರೋ ಅಷ್ಟಕ್ಕೆ ಮಾತ್ರ ಉತ್ತರ ಕೊಡು. ಹೆಚ್ಚು ಮಾತನಾಡಿದರೆ ನಿನ್ನ ಶಕ್ತಿ ಹಾಗೂ ನಿನ್ನ ಮಾತುಗಳನ್ನು ಕೇಳಿಸಿಕೊಳ್ಳುವವರ ಆಸಕ್ತಿ, ಎರಡೂ ಕಮ್ಮಿಯಾಗುತ್ತವೆ. ಅವರಿಗಿಷ್ಟವಿಲ್ಲದಿದ್ದರೂ ನಿನ್ನ ಪುರಾಣ ಕಥೆಯನ್ನು ಅವರ ಮುಂದೆ ಮತ್ತೆ ಮತ್ತೆ ಹೇಳಿಕೊಳ್ಳುವುದಕ್ಕೆ ಹೋಗಬೇಡ. ಬಾಯಿ ನಿನ್ನದಾದರೇನಂತೆ? ಕಿವಿ ಅವರದಲ್ಲವೆ? ಮೇಲಿಂದ ಮೇಲೆ ‘ಾನು ಹಾಗಿದ್ದೆ, ನಾನು ಹೀಗಿದ್ದೆ, ನಾನು ಅದನ್ನು ಮಾಡಿದೆ, ನಾನು ಇದನ್ನು ಮಾಡಿದೆ’ ಎಂದು ಹೇಳಿಕೊಳ್ಳಲಿಕ್ಕೆ ಹೋಗಬೇಡ. ನಿನ್ನನ್ನು ಕೇಳಿಸಿಕೊಳ್ಳಲಿಕ್ಕೆ ಅವರ ಬಳಿ ಸಮಯವಿಲ್ಲವೆಂದು ಅವರನ್ನು ದೂಷಿಸಬೇಡ. ನಾನಿನ್ನು ಈ ಜಗತ್ತಿನಲ್ಲಿಕೆಲವೇ ದಿನದ ಅತಿಥಿ ಎಂಬ ವಿಷಯ ನಿನಗೆ ತಿಳಿದಿರಲಿ.

ಯೌವನದಲ್ಲಿದ್ದಾಗ ಎಲ್ಲವೂ ನೀನು, ವೃದ್ಧಾಪ್ಯದಲ್ಲಿಎಲ್ಲರಲ್ಲೂನೀನೊಬ್ಬ ಅಷ್ಟೇ. ಇದನ್ನು ಅರ್ಥಮಾಡಿಕೋ. ವೃದ್ಧಾಪ್ಯದಲ್ಲಿಹೆಚ್ಚು ಹೆಚ್ಚು ಸಹನಶೀಲನಾಗಿರಬೇಕು. ಬೇಗನೇ ತಾಳ್ಮೆಯನ್ನು ಕಳೆದುಕೊಳ್ಳಬೇಡ. ಯಾರ ಮೇಲೂ ಏರಿ ಹೋಗಬೇಡ. ವೃದ್ಧಾಪ್ಯದ ಲಕ್ಷ್ಮಣರೇಖೆಯನ್ನು ದಾಟಿಹೋಗಬೇಡ. ಮನೆಯಲ್ಲಿಹೆಚ್ಚು ಸಮಯವನ್ನು ಕಳೆಯಬೇಡ. ಮನೆಯ ಅಕ್ಕಪಕ್ಕ ದೇವಸ್ಥಾನ ಮತ್ತು ಮಠ-ಮಂದಿರಗಳಿದ್ದರೆ ಅಲ್ಲಿಹೋಗಿ ಕುಳಿತುಕೋ. ಕನಸುಗಳನ್ನು ಕಮ್ಮಿ ಮಾಡಿಕೋ. ಆಸೆ ಎಂಬ ಬಿಸಿಲುಗುದುರೆಯನ್ನೇರಬೇಡ. ಅವರಿವರು ಒಡ್ಡುವ ಆಮಿಷಕ್ಕೆ ಬಲಿಯಾಗಬೇಡ. ಸತ್ಸಂಗ ಮತ್ತು ಭಜನೆಗಳಿಗೆ ಕಿವಿಯಾಗು.

ವೃತ್ತಿಯಲ್ಲಿದ್ದಾಗ ನೀನು ಓದಬೇಕೆಂದು ಅಂದುಕೊಂಡಿರುವ ಗ್ರಂಥಗಳನ್ನು ಮತ್ತು ಸಾಹಿತ್ಯಮಾಲಿಕೆಗಳನ್ನು ಈಗ ಓದಲು ಶುರುಹಚ್ಚಿಕೋ. ಎಷ್ಟಾಗುತ್ತೋ ಅಷ್ಟು ಅಂತರ್ಮುಖಿಯಾಗಿ ಇರಲು ಪ್ರಯತ್ನಿಸು. ವೃದ್ಧರು ಯಮ, ಹರಿ ಚಂದ್ರ ಮತ್ತು ಶಿವರಂತೆ ಜನರಿಗೆ ಒಳ್ಳೆಯದನ್ನು ಮಾಡಿಕೊಂಡಿರಬೇಕು. ಈ ಕುರಿತು ಒಂದು ಸಂಸ್ಕೃತ ಶ್ಲೋಕವಿದೆ, ‘ಯಮಮಿವ ಕರಧೃತದಂಡಂ ಹರಿಮಿವ ಸಗದಂ ಶಶಾಂಕಮಿವವಕ್ರಮ್ | ಶಿವಮಿವ ಚ ವಿರೂಪಾಕ್ಷಂ ಜರಾ ಕರೋತ್ಯಕೃತಪುಣ್ಯಮಪಿ||’ ಎಂದು.

ವೃದ್ಧಾಪ್ಯವಿದು ಯಮನಂತೆ ಕೈಯಲ್ಲಿದಂಡವನ್ನು ಹಿಡಿದುಕೊಂಡಿರುತ್ತದೆ. ವೃದ್ಧಾಪ್ಯವಿದು ವಿಷ್ಣುವಿನಂತೆ ಆರೈಕೆ, ಆಮಯದಲ್ಲಿ(ಗದ = ರೋಗ) ಇರುತ್ತದೆ. ವೃದ್ಧಾಪ್ಯವಿದು ಅರ್ಧಚಂದ್ರನಂತೆ ವಕ್ರವಾಗಿರುತ್ತದೆ (ಬಾಗಿಕೊಂಡಿರುತ್ತದೆ). ವೃದ್ಧಾಪ್ಯವಿದು ಶಿವನಂತೆ ತನ್ನ ಕಣ್ಣುಗಳನ್ನು (ಕನ್ನಡಕ) ಹೆಚ್ಚಿಸಿಕೊಂಡಿರುತ್ತದೆ. ಅದೇನೇ ಇದ್ದರೂ ವೃದ್ಧಾಪ್ಯವು ಯಮ, ವಿಷ್ಣು, ಚಂದ್ರ, ಶಿವರಂತೆ ಜನರಿಗೆ ಒಳ್ಳೆಯದನ್ನು ಮಾಡಿಕೊಂಡಿರುತ್ತದೆ. ಇದು ಕಾರಣ, ವೃದ್ಧಾಪ್ಯದ ಕುರಿತು ಬೇಸರಿಸಿಕೊಳ್ಳದೆ ಅದನ್ನು ಉತ್ಸಾಹದಿಂದ ಸ್ವೀಕರಿಸು ಎಂಬುದಾಗಿ ಗುರುಗಳು ಸಲಹೆ ನೀಡುತ್ತಾರೆ.

ವೃದ್ಧ ವ್ಯಕ್ತಿ ನಿರಾಳರಾಗುತ್ತಾರೆ. ಮನದ ದುಗುಡವನ್ನೆಲ್ಲಾಕಳೆದುಕೊಂಡು ಗುರುಗಳಿಗೆ ವಂದಿಸಿ ಅಲ್ಲಿಂದ ನೆಮ್ಮದಿಯಿಂದ ನಿರ್ಗಮಿಸುತ್ತಾರೆ.

-------

ಡಾ. ಶ್ರೀ ಶಿವಾನಂದ ಶಿವಾಚಾರ್ಯರು

ಸುಕ್ಷೇತ್ರ ಹಿರೇಮಠ, ತಪೋವನ, ತುಮಕೂರು