ಚಾಕುವಿನಿಂದ ಮನಬಂದಂತೆ ದಾಳಿ | ಲಾರಿ ಮೇಲೂ ಕಲ್ಲುತೂರಾಟ
ವಿಕ ಸುದ್ದಿಲೋಕ ಬೆಳಗಾವಿ
ಲಾರಿಯೊಂದನ್ನು ಬೆನ್ನಟ್ಟಿದ ಜನರ ಗುಂಪೊಂದು ಲಾರಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆನಡೆಸಿರುವ ಘಟನೆ ಬೆಳಗಾವಿ ನಗರದ ಕ್ಲಬ್ ರಸ್ತೆಯಲ್ಲಿಮಂಗಳವಾರ ತಡರಾತ್ರಿ ನಡೆದಿದೆ.
ಇಲ್ಲಿನ ರುಕ್ಮಿಣಿ ನಗರದ ನಿವಾಸಿ ಅಯಾಜ್ ಸವಣೂರ (36) ಹಲ್ಲೆಗೊಳಗಾದವರು. ಹಲ್ಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಚಾಲಕ ಅಯಾಜ್ ಹಿಂಡಲಗಾ ಬಳಿ ಕಾರಿಗೆ ಅಪಘಾತ ಪಡಿಸಿದ್ದ ಎನ್ನಲಾಗಿದೆ. ಅಪಘಾತ ಮಾಡಿ ಲಾರಿ ನಿಲ್ಲಿಸದೇ ಹಾಗೇ ಬಂದದ್ದಕ್ಕೆ ಬೆನ್ನಟ್ಟಿ ಬಂದ ಕೆಲವರು ಲಾರಿ ಓವರಟೇಕ್ ಮಾಡಿ ಅಯಾಜ್ ಮೇಲೆ ಮಾರಣಾಂತಿಕ ಹಲ್ಲೆಮಾಡಿದ್ದಾರೆ. ಚಾಲಕನ ತೊಡೆ, ಕಿವಿ, ಬೆನ್ನು, ತಲೆಗೆ ಚಾಕುವಿನಿಂದ ಮನಬಂದಂತೆ ಚುಚ್ಚಿರುವ ದುಷ್ಕರ್ಮಿಗಳು, ಲಾರಿ ಮೇಲೂ ಕಲ್ಲುತೂರಾಟ ನಡೆಸಿ ಗಾಜು ಒಡೆದು ಅಟ್ಟಹಾಸ ಮೆರೆದಿದ್ದಾರೆ. ಗಂಭೀರ ಗಾಯಗೊಂಡ ಅಯಾಜ್ ಗೆ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬೆಳಗಾವಿ ಕ್ಯಾಂಪ್ ಪೊಲೀಸರು ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

