ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಬಜೆಟ್ ಪುಸ್ತಕಕ್ಕೆ ಬೆಂಕಿ ಹಚ್ಚುವುದಾಗಿ ಹೇಳಿರುವುದು ನಾಚಿಕೆಗೇಡು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದ ನಾಯಕರು ತಮ್ಮ ಜವಾಬ್ದಾರಿ ನಿರ್ವಹಿಸಲು ವಿಫಲರಾಗಿದ್ದಾರೆ. ಹಿಂದೆ ನಿಯಮಾವಳಿ ಪುಸ್ತಕ ಹರಿದಿದ್ದರು. ಈಗ ಪರಿಶಿಷ್ಟ ಉಪಯೋಜನೆ ಹಣ ದುರುಪಯೋಗದ ನೆಪ ಹೇಳಿ ಬಜೆಟ್ ಪುಸ್ತಕಕ್ಕೆ ಬೆಂಕಿ ಇಡುವುದಾಗಿ ಹೇಳುತ್ತಿದ್ದಾರೆ. ಇದು ಅವರ ಬಟ್ಟೆಗೆ ತಾವೇ ಮಸಿ ಬಳಿದುಕೊಳ್ಳುವ ಕೆಲಸವಾಗಿದೆ ಎಂದು ರಮೇಶ್ ಬಾಬು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು: ವಿರೋಧ ಪಕ್ಷದ ನಾಯಕರಾಗಿ ರಾಜ್ಯದ ಪ್ರಮುಖ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವಲ್ಲಿ ವಿಫಲರಾಗಿರುವ ಛಲವಾದಿ ನಾರಾಯಣಸ್ವಾಮಿ , ಬಜೆಟ್ ಪುಸ್ತಕಕ್ಕೆ ಬೆಂಕಿ ಹಚ್ಚುವುದಾಗಿ ಹೇಳಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ವಿಶೇಷ ಸ್ಥಾನಮಾನವಿದ್ದು, ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲಾಗದೆ ವಿಫಲರಾಗಿದ್ದಾರೆ ಎಂದು ದೂರಿದರು. ಈ ಹಿಂದೆ ವಿಧಾನ ಪರಿಷತ್‌ನಲ್ಲಿ ನಿಯಮಾವಳಿ ಪುಸ್ತಕ ಹರಿದಿದ್ದ ನಾರಾಯಣಸ್ವಾಮಿ, ಈಗ ಪರಿಶಿಷ್ಟ ಉಪಯೋಜನೆ ಹಣ ದುರುಪಯೋಗದ ನೆಪವೊಡ್ಡಿ ಬಜೆಟ್ ಪುಸ್ತಕಕ್ಕೆ ಬೆಂಕಿ ಹಚ್ಚುವುದಾಗಿ ಹೇಳುವ ಮೂಲಕ ತಮ್ಮ ಬಟ್ಟೆಗೆ ತಾವೇ ಮಸಿ ಬಳಿದುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಮೇಶ್ ಬಾಬು ಅವರು, ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್‌ನಿಂದ ಎಲ್ಲ ರೀತಿಯ ಸೌಲಭ್ಯಗಳನ್ನು ಪಡೆದುಕೊಂಡು, ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬವನ್ನು ಟೀಕಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಅಲ್ಲದೆ, ಬಿಜೆಪಿ ಮತ್ತು ಸಂಘ ಪರಿವಾರದ ಭಟ್ಟಂಗಿತನ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ದೀಪಕ್ ತಿಮ್ಮಯ್ಯ ಕೂಡ ಉಪಸ್ಥಿತರಿದ್ದರು.