ವಿಕ ಸುದ್ದಿಲೋಕ ಕಲಬುರಗಿ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿನಡೆದಿರುವ ಎನ್ನಲಾದ ಹಣಕಾಸು ಅವ್ಯವಹಾರದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗುಲ್ಬರ್ಗ ವಿವಿ ಉಳಿಸಿ ಹೋರಾಟ ಸಮಿತಿ ಸಂಚಾಲಕ ಎಂ.ಬಿ.ಸಜ್ಜನ್ ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿಬುಧವಾರ ಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿದರು. ನಾಲ್ಕು ತಿಂಗಳ ಹಿಂದೆ ವಿಶ್ವವಿದ್ಯಾಲಯದ ಕುಲಸಚಿವರು, ಹಣಕಾಸು ವಿಭಾಗದಲ್ಲಿವೇತನ ಬಟವಾಡೆ ಮಾರ್ಗವಾಗಿ ಸುಮಾರು 1 ಕೋಟಿ ಅವ್ಯವಹಾರವಾಗಿದೆ ಎಂದು ಹೇಳಿಕೆ ನೀಡಿದ್ದರು. ಅದಾದ ಒಂದು ತಿಂಗಳ ಬಳಿಕ ನಮ್ಮ ಸಮಿತಿಯು ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ಎಫ್ ಐಆರ್ ದಾಖಲಿಸಿ ಬಂಧಿಸಲು ಪ್ರಕ್ರಿಯೆ ಪ್ರಾರಂಭಿಸುವಂತೆ ಒತ್ತಾಯಿಸಲಾಗಿತ್ತು ಎಂದು ಹೇಳಿದರು. ಈವರೆಗೂ ತಪ್ಪಿತಸ್ಥನ ವಿರುದ್ಧ ವಿವಿಯಿಂದ ಯಾವುದೇ ಕ್ರಮವಾಗಿಲ್ಲ. ಬಲ್ಲಮೂಲಗಳ ಪ್ರಕಾರ, ವಿವಿ ಸಿಂಡಿಕೇಟ್ ತನಿಖಾ ಸಮಿತಿ ರಚಿಸಿದಾಗ ಆರೋಪಿಯು ಅವ್ಯವಹಾರ ನಡೆಸಿರುವುದು ಕಂಡುಬಂದಿದೆ. ಆದರೆ ತಪ್ಪಿತಸ್ಥನ ವಿರುದ್ಧ ಪೊಲೀಸ್ ಠಾಣೆಯಲ್ಲಿಎಫ್ ಐಆರ್ ದಾಖಲಿಸಲು ವಿವಿಯು ವಿಫಲವಾಗಿದೆ ಎಂದು ಆರೋಪಿಸಿದರು. ಈ ಹಣಕಾಸು ಅವ್ಯವಹಾರದಲ್ಲಿಹಲವಾರು ಪ್ರಭಾವಿ ವ್ಯಕ್ತಿಗಳು, ವಿವಿಯ ನಿವೃತ್ತ ಅಧಿಕಾರಿಗಳು ಕೂಡ ಭಾಗಿ ಆಗಿರುವ ವದಂತಿಯಿದೆ. ಆದ್ದರಿಂದ ಈ ಹಗರಣದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ ಎಂದು ತಿಳಿಸಿದರು. ಡಾ.ಅನೀಲ ಟೆಂಗಳಿ, ಪ್ರದೀಪ, ನಾಗಯ್ಯಸ್ವಾಮಿ, ಶೇಖಮ್ಮ ಕುರಿ ಇದ್ದರು.

