ಮಣಿಪುರದಲ್ಲಿ ಹೊಸ ಯುಗ ಆರಂಭವಾಗಿದೆ. ಯುಮ್ನಾಮ್ ಖೇಮ್‌ಚಂದ್ ಸಿಂಗ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಂಡಿದೆ. ನೆಮ್ಚಾ ಕಿಪ್‌ಗೆನ್ ಮತ್ತು ಲೋಸಿ ದಿಖೋ ಉಪಮುಖ್ಯಮಂತ್ರಿಗಳಾಗಿದ್ದಾರೆ. ಕಿಪ್‌ಗೆನ್ ಅವರು ಈ ಹುದ್ದೆ ಅಲಂಕರಿಸಿದ ಮೊದಲ ಮಹಿಳೆ. ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಇಂಫಾಲ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಂಡಿದ್ದು, ಬಿಜೆಪಿಯ ಯುಮ್ನಾಮ್ ಖೇಮ್‌ಚಂದ್ ಸಿಂಗ್ ಅವರು ಬುಧವಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕುಕಿ ಸಮುದಾಯದ ಬಿಜೆಪಿ ನಾಯಕಿ ನೆಮ್ಚಾ ಕಿಪ್‌ಗೆನ್ ಮತ್ತು ನಾಗಾ ಸಮುದಾಯದ ನಾಗಾ ಪೀಪಲ್ಸ್ ಫ್ರಂಟ್ ಶಾಸಕ ಲೋಸಿ ದಿಖೋ ಅವರು ಉಪಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ಮಣಿಪುರದಲ್ಲಿ ನೆಮ್ಚಾ ಕಿಪ್‌ಗೆನ್ ಅವರು ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಕ್ಷಣದಿಂದ ಜಾರಿಗೆ ಬರುವಂತೆ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಗೊಳಿಸಿರುವುದಾಗಿ ಕೇಂದ್ರ ಗೃಹ ಸಚಿವಾಲಯ ಬುಧವಾರ ಅಧಿಸೂಚನೆ ಹೊರಡಿಸಿದೆ.
ರಾಜ್ಯ ಬಿಜೆಪಿ ಮುಖ್ಯಸ್ಥೆ ಎ. ಶಾರದಾ ದೇವಿ ಅವರು ಮಾತನಾಡಿ, "ಎನ್‌ಡಿಎ ಶಾಸಕಾಂಗ ಪಕ್ಷದ ನಾಯಕ ವೈ. ಖೇಮ್‌ಚಂದ್ ಸಿಂಗ್ ಅವರು ಸರಕಾರ ರಚಿಸಲು ಹಕ್ಕು ಮಂಡಿಸಿದರು" ಎಂದು ತಿಳಿಸಿದರು. "ನಮ್ಮ ಶಾಸಕಾಂಗ ಪಕ್ಷದ ಹೊಸ ನಾಯಕ ತರುಣ್ ಚುಗ್ ಅವರ ಸಮ್ಮುಖದಲ್ಲಿ ನಾವು ರಾಜ್ಯಪಾಲರನ್ನು ಭೇಟಿಯಾದೆವು. ರಾಜ್ಯದಲ್ಲಿ ಸರಕಾರ ರಚಿಸಲು ಹಕ್ಕು ಮಂಡಿಸಲಾಯಿತು" ಎಂದು ದೇವಿ ಹೇಳಿದರು. ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಒಟ್ಟು 37 ಬಿಜೆಪಿ ಶಾಸಕರ ಪೈಕಿ 35 ಮಂದಿ ಹಾಜರಿದ್ದರು.ಹೊಸ ಮುಖ್ಯಮಂತ್ರಿ ಖೇಮ್‌ಚಂದ್ ಸಿಂಗ್ ಅವರಿಗೆ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ಅಭಿನಂದನೆ ಸಲ್ಲಿಸಿದರು. ಈ ಪ್ರಮಾಣ ವಚನ ಸ್ವೀಕಾರ ಸಮಾರಂಭದೊಂದಿಗೆ ಮಣಿಪುರದಲ್ಲಿ ಹೊಸ ರಾಜಕೀಯ ಅಧ್ಯಾಯ ಆರಂಭವಾಗಿದೆ.