Kuvempu Has Preserved The Respect For Hinduism Launch Of The Book Nada Hanate
ಕುವೆಂಪು ಹಿಂದೂ ಧರ್ಮದ ಅವಹೇಳನ ಮಾಡಿಲ್ಲ - ವ.ಚ.ಚನ್ನೇಗೌಡರ ‘ನಾಡ ಹಣತೆಗಳು’ ಕೃತಿ ಲೋಕಾರ್ಪಣೆ (ಫೋಟೊ ನ್ಯೂಸ್ ರಾರ ಯಪ್ ನಲ್ಲಿವೆ)
Contributed by: Punith AR|Vijaya Karnataka•
ವ.ಚ.ಚನ್ನೇಗೌಡರ 'ನಾಡ ಹಣತೆಗಳು' ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಕುವೆಂಪು ಅವರ ಬಗ್ಗೆ ಮಾತನಾಡಲಾಯಿತು. ಕುವೆಂಪು ಹಿಂದೂ ಧರ್ಮವನ್ನು ಅವಹೇಳನ ಮಾಡಿಲ್ಲ. ಶೋಷಣೆಯ ವಿರುದ್ಧ ಅವರು ಇದ್ದರು. 'ನಾಡ ಹಣತೆಗಳು' ಪುಸ್ತಕ ಕನ್ನಡ ಭಾಷೆ ಉಳಿಸಲು ಶ್ರಮಿಸಿದವರ ಜೀವನ ಪರಿಚಯ ನೀಡುತ್ತದೆ. ವಾಸ್ತವ ಇತಿಹಾಸ ತಿಳಿಯಲು ಪುಸ್ತಕ ಓದಬೇಕು ಎಂದು ತಿಳಿಸಲಾಯಿತು.
ಬೆಂಗಳೂರು: ಕುವೆಂಪು ಅವರು ಹಿಂದೂ ಧರ್ಮವನ್ನು ಅವಹೇಳನ ಮಾಡಿಲ್ಲ, ಬದಲಿಗೆ ಹಿಂದೂ ಧರ್ಮವನ್ನು ಕೆಲವರು ತಮ್ಮ ಸ್ವತ್ತೆಂದು ಭಾವಿಸಿರುವ ಸಾಮಾಜಿಕ ಸ್ಥಿತಿಯಿಂದ ಮುಕ್ತಗೊಳಿಸುವ ಆಶಯ ಹೊಂದಿದ್ದರು ಎಂದು ನಿವೃತ್ತ ಕುಲಪತಿ ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರು ಹೇಳಿದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಾಂಸ್ಕೃತಿಕ ಕಲಾ ಕುಟೀರವು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ವ.ಚ. ಚನ್ನೇಗೌಡರ ‘ ನಾಡ ಹಣತೆಗಳು ’ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕುವೆಂಪು ಅವರು ದೇವರ ಪೂಜೆಗೆ ಯಾರ ಮಧ್ಯಸ್ಥಿಕೆಯೂ ಬೇಡ ಎಂದಿದ್ದರು. ಆದರೆ, ಅವರು ಎಂದಿಗೂ ಬ್ರಾಹ್ಮಣ ಜಾತಿಯ ವಿರೋಧಿಯಾಗಿರಲಿಲ್ಲ, ಬದಲಿಗೆ ಶೋಷಣೆಯ ವಿರುದ್ಧ ಧ್ವನಿ ಎತ್ತಿದ್ದರು ಎಂದು ಅವರು ಸ್ಪಷ್ಟಪಡಿಸಿದರು.
ಸಾಹಿತಿ ವ.ಚ. ಚನ್ನೇಗೌಡ ಅವರು ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸಲು ಲಕ್ಷಾಂತರ ಹೋರಾಟಗಾರರ ತ್ಯಾಗವಿದೆ. ‘ನಾಡ ಹಣತೆಗಳು’ ಪುಸ್ತಕವು ಕನ್ನಡ ಭಾಷೆ ಉಳಿಸಲು ಶ್ರಮಿಸಿದ ಮಹನೀಯರ ಜೀವನ ಚರಿತ್ರೆಯ ಕಿರು ಪರಿಚಯವಾಗಿದೆ. ಕನ್ನಡಕ್ಕಾಗಿ ಹೋರಾಡಿದವರ ಬದುಕು ನಾಡಿನ ಜನತೆಗೆ ತಿಳಿಯಬೇಕೆಂಬ ಉದ್ದೇಶದಿಂದ ಈ ಕೃತಿ ಹೊರತರಲಾಗಿದೆ ಎಂದರು.ರಾ.ನಂ. ಚಂದ್ರಶೇಖರ್ ಅವರು, ನಿಜವಾದ ಇತಿಹಾಸವನ್ನು ತಿಳಿಯಬೇಕಾದರೆ ಪುಸ್ತಕಗಳನ್ನು ಓದಬೇಕು ಎಂದು ಅಭಿಪ್ರಾಯಪಟ್ಟರು. ತಮಿಳರಿಗೆ ತಿರುವಳ್ಳುವರ್, ಕೇರಳದವರಿಗೆ ನಾರಾಯಣಗುರು ಇದ್ದಂತೆ, ನಮಗೆ ಬಸವಣ್ಣನವರು ಸಾಂಸ್ಕೃತಿಕ ನಾಯಕರು. ಕನ್ನಡಿಗರಲ್ಲಿ ಭಾಷೆಗಿಂತ ಜಾತಿ ದೊಡ್ಡದಾಗಿದೆ. ರಾಜಕಾರಣಿಗಳು ಬಸವೇಶ್ವರರ ಆದರ್ಶಗಳನ್ನು ಪಾಲಿಸಿದರೆ ಸಾಕು, ಸಾಮಾಜಿಕ ಸುಧಾರಣೆ ಆಗುತ್ತದೆ ಎಂದು ಅವರು ತಿಳಿಸಿದರು.
ಸಪ್ನ ಬುಕ್ ಹೌಸ್ ನಿರ್ದೇಶಕ ಆರ್. ದೊಡ್ಡೇಗೌಡ, ಸಾಂಸ್ಕೃತಿಕ ಕಲಾ ಕುಟೀರದ ಗೌರವ ನಿರ್ದೇಶಕ ಬಿ.ಎಂ. ಗಂಗಣ್ಣ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.