ಜಿ ರಾಮ್ ಜಿ ಚರ್ಚೆಗೆ 22ರಿಂದ ಜಂಟಿ ಅಧಿವೇಶನ

Contributed byKENCHE GOWDA|Vijaya Karnataka

ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಜನವರಿ 22 ರಿಂದ 31 ರವರೆಗೆ ನಡೆಯಲಿದೆ. ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. 'ವಿಬಿ-ಜಿ ರಾಮ್‌ಜಿ' ಯೋಜನೆ ಜಾರಿ ತೀರ್ಮಾನ ಹಿಂಪಡೆದು ಮನರೇಗಾ ಮರು ಜಾರಿಗೊಳಿಸುವ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

joint session for discussion on g ramji from 22nd
ರಾಜ್ಯ ವಿಧಾನಮಂಡಲದ ತುರ್ತು ಜಂಟಿ ಅಧಿವೇಶನ ಜನವರಿ 22 ರಿಂದ 31 ರವರೆಗೆ ನಡೆಯಲಿದೆ. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ಜನವರಿ 22 ರಂದು ಬೆಳಗ್ಗೆ 11 ಗಂಟೆಗೆ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. 'ವಿಬಿ- ಜಿ ರಾಮ್‌ಜಿ' ಯೋಜನೆ ಜಾರಿಗೊಳಿಸುವ ನಿರ್ಧಾರವನ್ನು ಹಿಂಪಡೆದು, ಮನರೇಗಾ ಯೋಜನೆಯನ್ನು ಮರು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಗೊತ್ತುವಳಿ ಸ್ವೀಕರಿಸಲು ಸರ್ಕಾರ ವಿಶೇಷ ಅಧಿವೇಶನ ನಡೆಸಲು ಬಯಸಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಜಂಟಿ ಅಧಿವೇಶನ ನಡೆಸಲು ನಿರ್ಧರಿಸಲಾಗಿದ್ದು, ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಚರ್ಚೆಯ ನಡುವೆಯೇ ಈ ವಿಶೇಷ ಚರ್ಚೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು. ಮನರೇಗಾ ಯೋಜನೆ ಮರು ಜಾರಿಗೆ ಒತ್ತಾಯಿಸಿ ನಿರ್ಣಯ ಅಂಗೀಕರಿಸಲು ವಿಶೇಷ ಅಧಿವೇಶನ ನಡೆಸುವ ಬಗ್ಗೆ ಸಂಪುಟದಲ್ಲಿ ಚರ್ಚಿಸಲಾಯಿತು. ಆದರೆ, ಚುನಾವಣೆ ನಂತರ ಅಥವಾ ಹೊಸ ವರ್ಷದ ಮೊದಲ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದು ಸಂವಿಧಾನಬದ್ಧ ನಿಯಮವಾಗಿದೆ. ಈ ನಿಯಮವನ್ನು ಮೀರಿ ವಿಶೇಷ ಅಧಿವೇಶನ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ, ಜಂಟಿ ಅಧಿವೇಶನದೊಂದಿಗೆ ವಿಶೇಷ ಚರ್ಚೆಗೆ ಅವಕಾಶ ಕಲ್ಪಿಸಲು ಸಂಪುಟ ಸಭೆ ಒಪ್ಪಿಗೆ ನೀಡಿತು. ಈ ಮೂಲಕ, ಸರ್ಕಾರದ ಪ್ರಮುಖ ಬೇಡಿಕೆಯಾದ ಮನರೇಗಾ ಯೋಜನೆಯ ಮರು ಜಾರಿಯ ಬಗ್ಗೆ ವಿಧಾನಮಂಡಲದಲ್ಲಿ ಗಂಭೀರ ಚರ್ಚೆ ನಡೆಯಲಿದೆ.