ವಿಕ ಸುದ್ದಿಲೋಕ ಕಾಗವಾಡ ಮಾಜಿ ಸಚಿವ ಶ್ರೀಮಂತ ಪಾಟೀಲ ಅವರ 71ನೇ ಜನ್ಮದಿನ ನಿಮಿತ್ತ ಮಹಾರಾಷ್ಟ್ರದ ಸಾಂಗ್ಲಿಜಿಲ್ಲೆಯ ನಂದಾದೀಪ ನೇತ್ರಾಲಯ, ಸೇವಾಸದನ, ಉಷಾಕಾಲ ಆಸ್ಪತ್ರೆಗಳ ಸಹಕಾರದೊಂದಿಗೆ ಕೆಂಪವಾಡದ ಅಥಣಿ ಫಾರ್ಮರ್ಸ್ ಸಕ್ಕರೆ ಕಾರ್ಖಾನೆಯಲ್ಲಿಶನಿವಾರ ನಾಲ್ಕು ಸಾವಿರಕ್ಕೂ ಅಧಿಕ ಜನರ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಮಾಜಿ ಶಾಸಕ ಮಹೇಶ ಕುಮಠಳ್ಳಿ ಸೇರಿದಂತೆ ಅನೇಕ ಗಣ್ಯರು, ಅಪಾರ ಅಭಿಮಾನಿಗಳು, ಹಿತೈಷಿಗಳು, ಕಾರ್ಯಕರ್ತರಿಂದ ಜನ್ಮದಿನದ ಶುಭಾಶಯ ಸ್ವೀಕರಿಸಿ ಮಾತನಾಡಿದ ಶ್ರೀಮಂತ ಪಾಟೀಲ, ‘‘ವಿಧಾಯಕ ಕಾರ್ಯಕ್ರಮಗಳೊಂದಿಗೆ ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ಸಮಾಧಾನ ತಂದಿದೆ,’’ ಎಂದರು. ಶ್ರೀಮಂತ ಪಾಟೀಲ ಅವರ ಪುತ್ರರಾದ ಶ್ರೀನಿವಾಸ ಹಾಗೂ ಯೋಗೇಶ ಮಾತನಾಡಿ, ‘‘20 ವರ್ಷಗಳಿಂದ ನಿರಂತರವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡು ಅನೇಕ ಕುಟುಂಬಗಳಿಗೆ ನೆರವಾಗಿದ್ದು, ಕೆಲ ಕುಟುಂಬಗಳಿಗೆ ನಾವೇ ಹಣ ಭರಿಸಿ ಉಪಚಾರ ಕೊಡಿಸಿದ್ದೇವೆ. ಇದು ನಮಗೆ ಅಪಾರ ಸಂತೋಷ ತಂದಿದೆ,’’ ಎಂದರು. ಸೇವಾ ಸದನ ಆಸ್ಪತ್ರೆ ಮುಖ್ಯಸ್ಥೆ ಶೈಲಜಾ ಪಾಟೀಲ, ಗೋವಿಂದ ಜೋಶಿ, ಕಿಶೋರ್ ಬಿರಾದಾರ ಮಾರ್ಗದರ್ಶನದಲ್ಲಿ40 ಸಿಬ್ಬಂದಿ, ತಜ್ಞ ವೈದ್ಯರಾದ ಡಾ. ಉಮೇಶ ಬಿರಾದಾರ, ಕೌಸ್ತುಭ ವೈದ್ಯ, ಸಂದೀಪ್ ಹಿಡನ್ ಅವರು ನಾನಾ ಭಾಗಗಳಿಂದ ಆಗಮಿಸಿದವರ ನೇತ್ರ, ಹೃದಯ, ಕ್ಯಾನ್ಸರ್ ಸಹಿತ ಸಾಮಾನ್ಯ ಆರೋಗ್ಯದ ತಪಾಸಣೆ ನಡೆಸಿದರು. ತಜ್ಞ ವೈದ್ಯರು, ಅಗತ್ಯ ಇರುವವರಿಗೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಲು ಸಲಹೆ ನೀಡಲಾಯಿತು. ಬೆಳಗ್ಗೆ ಸಕ್ಕರೆ ಕಾರ್ಖಾನೆ ಹಿರಿಯ ಅಧಿಕಾರಿ ಎಲ್ .ಆರ್ .ಲಟಕೆ ನೇತೃತ್ವದಲ್ಲಿಕೇಕ್ ಕತ್ತರಿಸಿ ಶ್ರೀನಿವಾಸ, ಯೋಗೇಶ, ಸುಶಾಂತ ಪಾಟೀಲ ಮತ್ತು ಹಿರಿಯ ಅಧಿಕಾರಿಗಳು ಶ್ರೀಮಂತ ಪಾಟೀಲರನ್ನು ಸನ್ಮಾನಿಸಿದರು. ಶ್ರೀಮಂತ ಪಾಟೀಲರ ಜನ್ಮದಿನದ ಅಂಗವಾಗಿ ಶೇಡಬಾಳದ ಕಾರ್ಯಕರ್ತ ರವಿ ಬಡಿಗೇರ್ ಅವರು ತಾವೇ ತಯಾರಿಸಿದ ತೂಗು ಮಂಚ ಕಾಣಿಕೆಯಾಗಿ ನೀಡಿದರು. ಗಣ್ಯರಾದ ದಾದಾ ಪಾಟೀಲ್ , ರಾಜೇಂದ್ರ ಪೋತದಾರ್ , ಅಪ್ಪಾಸಾಬ ಅವತಾಡೆ, ನಾನಾಸಾಬ್ ಅವತಾಡೆ, ನ್ಯಾಯವಾದಿ ಅಭಯಕುಮಾರ್ ಅಕಿವಾಟೆ, ಶಿವಾನಂದ ಪಾಟೀಲ್ , ಉತ್ಕರ್ಷ ಪಾಟೀಲ್ , ಆರ್ .ಎಂ.ಪಾಟೀಲ್ , ಮೆಹಬೂಬ್ ಮುಲ್ಲಾ, ಸುಧಾಕರ ಭಗತ್ , ತಮ್ಮಣ್ಣಾ ಪಾರಶೆಟ್ಟಿ, ಅರುಣ ಗಣೇಶವಾಡಿ, ಬೊಮ್ಮಣ್ಣ ಚೌಗುಲೆ, ಪ್ರಮೋದ ಹೊಸೂರೆ, ಸತ್ಯಪ್ಪಾ ಬಾಗೆನ್ನವರ, ದರೆಯಪ್ಪಾ ಟಕ್ಕನ್ನವರ ಮತ್ತಿತರರಿದ್ದರು.

