----------------ಇಂಟ್ರೊ: ಸಿಲಿಕಾನ್ ಸಿಟಿಯ ಬಂಪರ್ -ಟು-ಬಂಪರ್ ಟ್ರಾಫಿಕ್ ನಿಂದಾಗಿ ಮ್ಯಾನುಯಲ್ ಕಾರುಗಳನ್ನು ಬಿಟ್ಟು ಆಟೋಮ್ಯಾಟಿಕ್ ಕಾರುಗಳ ಕಡೆಗೆ ಬೆಂಗಳೂರಿಗರು ಮುಖ ಮಾಡಿದ್ದಾರೆ. ಮುಂದಿನ ದಶಕದ ಆರಂಭದ ವೇಳೆಗೆ ಶೇ.50ರಿಂದ 70ರಷ್ಟು ಕಾರುಗಳು ಆಟೋಮ್ಯಾಟಿಕ್ ಆಗಿರಲಿವೆ ಎನ್ನಲಾಗಿದೆ.
---
ಸುಶಾಂತ್ ಬನಾರಿ
---
ಒಂದು ಕಾಲದಲ್ಲಿಆಟೋಮ್ಯಾಟಿಕ್ ಕಾರುಗಳೆಂದರೆ ಅದು ಸಿರಿವಂತರಿಗೆ ಮಾತ್ರ ಸೀಮಿತ. ಆಟೋಮ್ಯಾಟಿಕ್ ಎಂದರೆ ಮೈಲೇಜ್ ಕಡಿಮೆ, ಅಧಿಕ ಬೆಲೆಯ ಜತೆಗೆ ಹೆಚ್ಚಿನ ನಿರ್ವಹಣಾ ವೆಚ್ಚವೂ ಇತ್ತು. ನಮ್ಮಲ್ಲಿ1987ರಲ್ಲಿಬಂದ ಮೊದಲ ಆಟೋಮ್ಯಾಟಿಕ್ ಸ್ಕೂಟರ್ ಕೈನೆಟಿಕ್ ಹೋಂಡಾ ಕೂಡ ಬಹು ವರ್ಷಗಳ ಕಾಲ ನಿರ್ದಿಷ್ಟ ವರ್ಗಕ್ಕೆ ಮಾತ್ರವೇ ಸೀಮಿತ ಎಂಬಂತಿತ್ತು. ಆದರೆ ಈಗ ಸ್ಕೂಟರ್ ಎಂದರೇ ಅಟೋಗೇರ್ ಸಹಿತ ಎಂಬಂತೆ ಆಗಿದೆ. ಕಾರುಗಳ ವಿಚಾರದಲ್ಲಿಯೂ ಅದೇ ಆಗುತ್ತಿದೆ.
ಹೆಚ್ಚೇನಿಲ್ಲ, 2011ರವರೆಗೂ ಅಟೋ ಗೇರ್ ಕಾರುಗಳು ಎಂದರೆ ದುಬಾರಿ ಬೆಲೆಯ ಹೈ ಎಂಡ್ ಕಾರುಗಳು ಮಾತ್ರ, ಅವುಗಳ ಮಾರುಕಟ್ಟೆ ಪಾಲು ಇದ್ದದ್ದು ಶೇಕಡ 1.4 ಮಾತ್ರ. 2015ರ ಹೊತ್ತಿಗೆ ಸುಮಾರು ಶೇಕಡ ಏಳಕ್ಕೆ ತಲುಪಿದ ಇದು, 2020ಕ್ಕೆ ಆಗುವಾಗ ಶೇಕಡ 17ರವರೆಗೆ ಬಂದಿತ್ತು. ಈಗಂತೂ ಮಾರಾಟವಾಗುತ್ತಿರುವ ಪ್ರತಿ ಮೂರು ಕಾರುಗಳಲ್ಲಿಒಂದು ಆಟೋಮ್ಯಾಟಿಕ್ .
ಮಹಾ ನಗರಗಳಲ್ಲಿನ ವಿಪರೀತ ಟ್ರಾಫಿಕ್ ನಲ್ಲಿಬಂಪರ್ -ಟು-ಬಂಪರ್ ಚಾಲನೆ ಮಾಡಬೇಕಾದ ಸಂದರ್ಭ ಬರುವುದೇ ಹೆಚ್ಚು. ಪದೇ ಪದೆ ಕ್ಲಚ್ ಒತ್ತಿ ಗೇರ್ ಬದಲಾಯಿಸುವುದು ಚಾಲಕರಿಗೆ ತೀವ್ರ ದೈಹಿಕ ಮತ್ತು ಮಾನಸಿಕ ಆಯಾಸ ತರುತ್ತದೆ. ಆಟೋಮ್ಯಾಟಿಕ್ ಕಾರುಗಳು ಕೇವಲ ಬ್ರೇಕ್ ಮತ್ತು ಆಕ್ಸಿಲರೇಟರ್ ಪೆಡಲ್ ಮೂಲಕ ಈ ಆಯಾಸವನ್ನು ಸಂಪೂರ್ಣವಾಗಿ ನಿವಾರಿಸುತ್ತವೆ. ಹಾಗಾಗಿ ಆಟೋಮೆಟಿಕ್ ಕಾರುಗಳ ಮಾರಾಟ ಹೆಚ್ಚಳಕ್ಕೆ ಒಂದು ಕೊಡುಗೆ ಟ್ರಾಫಿಕ್ ಆದರೆ ಇನ್ನೊಂದು ಮುಖ್ಯವಾದ ಕೊಡುಗೆಯೇ ತಂತ್ರಜ್ಞಾನ.
ತಂತ್ರಜ್ಞಾನ ತಂದ ಕ್ರಾಂತಿ
1935ರಿಂದಲೇ ಆಟೋಮೆಟಿಕ್ ವಾಹನಗಳ ವಾಣಿಜ್ಯ ಬಳಕೆ ಆರಂಭವಾಗಿತ್ತಾದರೂ ಬಳಕೆಯಲ್ಲಿಇದ್ದದ್ದು ಸಿವಿಟಿ ತಂತ್ರಜ್ಞಾನದ ಗೇರ್ ಬಾಕ್ಸ್ ಮಾತ್ರ. ಇದರಲ್ಲಿಫಸ್ಟ್ ಗೇರ್ , ಸೆಕೆಂಡ್ ಗೇರ್ ಎಂದು ನಿರ್ದಿಷ್ಟ ಗೇರ್ ಗಳಿರುವುದಿಲ್ಲ. ಬದಲಾಗಿ ಎರಡು ರಾಟೆ ಮತ್ತು ಒಂದು ಸ್ಟೀಲ್ ಬೆಲ್ಟ್ ವ್ಯವಸ್ಥೆ ಇರುತ್ತದೆ. ಇದು ಎಂಜಿನ್ ವೇಗಕ್ಕೆ ತಕ್ಕಂತೆ ನಿರಂತರವಾಗಿ ಹೊಂದಿಕೊಳ್ಳುತ್ತಾ ಅತ್ಯಂತ ಸುಗಮವಾದ ಚಾಲನಾ ಅನುಭವವನ್ನು ನೀಡುತ್ತದೆ. ಆದರೆ ಇದರಲ್ಲಿಇಂಧನ ಬಳಕೆ ಅಧಿಕದ ಹೊರತಾಗಿ ನಿಯಮಿತವಾಗಿ ಬೆಲ್ಟ್ ಬದಲಾವಣೆ ಕೇಳುತ್ತದೆ.
ಇದಕ್ಕಿಂತ ಉತ್ತಮ ತಂತ್ರಜ್ಞಾನ ಎಂದರೆ ಟಾರ್ಕ್ ಕನ್ವರ್ಟರ್ ಗೇರ್ ಬಾಕ್ಸ್ . ಇದರಲ್ಲಿಎಂಜಿನ್ ಇಂದ ಗೇರ್ ಬಾಕ್ಸ್ ಗೆ ನೇರವಾದ ಸಂಪರ್ಕವಿಲ್ಲದೆ ಹೈಡ್ರಾಲಿಕ್ ಆಯಿಲ್ ನ ಶಕ್ತಿ ಬಳಸಿ ಸಂಪರ್ಕ ಸಾಧಿಸುತ್ತದೆ. ತಂತ್ರಜ್ಞಾನವೇನೋ ಉತ್ತಮ, ಆದರೆ ಭಾರಿ ದುಬಾರಿ.
2015ರಿಂದ ಆಟೋಮ್ಯಾಟಿಕ್ ಕಾರುಗಳ ಮಾರಾಟ ಹೆಚ್ಚಳ ಆರಂಭವಾಯಿತಲ್ಲ, ಆ ವರ್ಷ ಧುತ್ತೆಂದು ಟ್ರಾಫಿಕ್ ಜಾಸ್ತಿಯಾಯಿತು ಎಂದಲ್ಲ, ಬದಲಾಗಿ 2014ರಲ್ಲಿಬಂದ ಪುಟ್ಟ ಕಾರು ಕಾರು ಮಾರುಕಟ್ಟೆಯಲ್ಲಿವಿಶೇಷ ಬದಲಾವಣೆ ತಂದಿತು. ಆ ವರ್ಷ ಮೊದಲ ಬಾರಿಗೆ ಮಾರುತಿ ಸುಝುಕಿ ತನ್ನ ಸೆಲೆರಿಯೋ ಕಾರಿನಲ್ಲಿಎಎಂಟಿ ಗೇರ್ ಬಾಕ್ಸ್ ಪರಿಚಯಿಸಿತು. ಎಎಂಟಿ ಎಂದರೆ ಆಟೋಮೇಟೆಡ್ ಮ್ಯಾನುಯೆಲ್ ಟ್ರಾನ್ಸ್ಮಿಷನ್ ಎಂಬ ಹೊಸ ತಂತ್ರಜ್ಞಾನ. ಮೂಲತಃ ಇದು ಮಾಮೂಲಿ ಗೇರ್ ಬಾಕ್ಸೇ. ಆದರೆ ಕಾರಿನ ವೇಗ, ಒತ್ತಡ ಲೆಕ್ಕಾಚಾರ ಹಾಕಿ ಸರಿಯಾದ ಸಮಯಕ್ಕೆ ಕ್ಲಚ್ ಅದುಮಿ ಗೇರ್ ಬದಲಿಸುವ ಕೆಲಸ ಮಾಡುವುದು ಅಲ್ಲಿರುವ ಪುಟ್ಟ ಕಂಪ್ಯೂಟರ್ . ಅಂಗೈ ಅಗಲದ ಚಿಪ್ ಆ ಎಲ್ಲಾಕೆಲಸ ಮಾಡುತ್ತದೆ.
ಇದರ ತಯಾರಿಗೆ ಇತರೆ ಆಟೋ ತಂತ್ರಜ್ಞಾನದಷ್ಟು ಕಷ್ಟವಿಲ್ಲ. ಹಾಗಾಗಿ ಹೆಚ್ಚುವರಿ 40-50 ಸಾವಿರ ರೂಪಾಯಿಗಳಲ್ಲಿವ್ಯವಹಾರ ಮುಗಿಯುತ್ತದೆ. ಇದರಿಂದಾಗಿ ಸಣ್ಣ ಕಾರುಗಳಿಗೂ ಅಳವಡಿಸಲು ಸಾಧ್ಯವಾಯಿತು. ಇಲ್ಲವಾದಲ್ಲಿಅಲ್ಟೋ, ವ್ಯಾಗನ್ ಆರ್ ನಂಥ ಸಣ್ಣ ಕಾರುಗಳಿಗೆ ಮ್ಯಾನ್ಯುಯಲ್ ಅವತರಣಿಕೆಗಿಂತ ಮೂರು-ನಾಲ್ಕು ಲಕ್ಷ ರೂಪಾಯಿ ಹೆಚ್ಚು ಕೊಡುವುದು ವ್ಯಾವಹಾರಿಕ ದೃಷ್ಟಿಯಿಂದ ತರ್ಕಬದ್ಧವಲ್ಲ. ಹಾಗಾಗಿ ಎಎಂಟಿ ಭಾರಿ ಯಶಸ್ಸು ಕಂಡಿತು.
ಸುರಕ್ಷಿತ ಚಾಲನೆಗೆ ಸಹಾಯ
ಸಿಟಿ ಬಸ್ಸುಗಳಲ್ಲಿ, ಮೈನಿಂಗ್ ಕ್ಷೇತ್ರದ ಡಂಪರ್ ಲಾರಿಗಳಲ್ಲಿಅಟೋ ಗೇರ್ ಬಳಕೆ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ಚಾಲಕರಿಗೆ ಅನಗತ್ಯ ಕೆಲಸದಿಂದ ಮುಕ್ತಿ ಸಿಗುವ ಕಾರಣ ಸುರಕ್ಷಿತ ಚಾಲನೆಗೆ ಸಹಕಾರಿ.
ಇಲೆಕ್ಟ್ರಿಕ್ ವಾಹನಗಳಲ್ಲಂತೂ ಗೇರ್ ಬಾಕ್ಸ್ ಪ್ರಶ್ನೆಯೇ ಇಲ್ಲ. ಮ್ಯಾನ್ಯುಯಲ್ ಗೇರ್ ವಾಹನ ಓಡಿಸಲು ಗೊತ್ತಿಲ್ಲದವರಿಗೆ ಮಾತ್ರವೇ ಅಟೋಗೇರ್ ಎಂಬ ಭ್ರಮೆ ಈಗ ನಿಧಾನವಾಗಿ ಹೋಗುತ್ತಿದೆ. ಕೈನೇಟಿಕ್ ಹೋಂಡಾ ಅಂದರೆ ಹೆಂಗಸರಿಗೆ ಮಾತ್ರ ಎಂದು ನಂಬಿದ್ದ ಗಂಡಸರೆಲ್ಲ, ಹೆಚ್ಚಿನ ಟ್ರಾಫಿಕ್ಕಿನಲ್ಲಿಅದು ಕೊಡುವ ಮಾನಸಿಕ ನೆಮ್ಮದಿಗೆ ಮಾರುಹೋಗಿ ಆಟೋಮ್ಯಾಟಿಕ್ ಸ್ಕೂಟರುಗಳಲ್ಲಿಓಡಾಡುತ್ತಿದ್ದಾರೆ.
2030ರ ದಶಕದ ಆರಂಭದ ವೇಳೆಗೆ ಭಾರತದಲ್ಲಿಮಾರಾಟವಾಗುವ ಶೇಕಡಾ 50ರಿಂದ 70ರಷ್ಟು ಕಾರುಗಳು ಆಟೋಮ್ಯಾಟಿಕ್ ಆಗಿರಲಿವೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.