ಇಂಟ್ರೊನಟಿ ಕೃತಿ ಸನನ್ ಇತ್ತೀಚೆಗೆ ತಾವು ಎಗ್ ಫ್ರೀಜ್ ಮಾಡಿಸಿಕೊಂಡಿರುವುದನ್ನು ಮುಕ್ತವಾಗಿ ಹಂಚಿಕೊಂಡ ಬೆನ್ನಲ್ಲೇ ಈ ಹಾದಿ ಹಿಡಿದ ಭಾರತದ ಜನಪ್ರಿಯ ನಟಿಯರ ಹೆಸರುಗಳು ಮುನ್ನೆಲೆಗೆ ಬಂದಿವೆ.
ಲವಲವಿಕೆ ಸುದ್ದಿಲೋಕ
ಸಹಜವಾಗಿ ಮಗುವನ್ನು ಪಡೆಯಲಾಗದೆ ಐವಿಎಫ್ ವಿಧಾನಕ್ಕೆ ಮೊರೆ ಹೋಗುವವರು ಕೆಲಸವರಾದರೆ ಇನ್ನೂ ಕೆಲವರು ಈಗ ಮಗುವನ್ನು ಪಡೆಯಲು ಸಮಯವಿಲ್ಲಎಂದೇ ಮುಂದಿನ ದಿನಗಳಿಗೆ ತಾಯ್ತನದ ಕನಸನ್ನು ನನಸಾಗಿಸಿಕೊಳ್ಳಲು ಈಗ ಏಗ್ ಫ್ರೀಜಿಂಗ್ ನತ್ತ ಗಮನ ಹರಿಸಿದ್ದಾರೆ.
ಆಧುನಿಕ ಜಗತ್ತಿನಲ್ಲಿಮಹಿಳೆಯರು ವೃತ್ತಿಜೀವನ ಮತ್ತು ವೈಯಕ್ತಿಕ ಆಯ್ಕೆಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ಏಗ್ ಫ್ರೀಜಿಂಗ್ ಕಲ್ಪನೆ ಇವರನ್ನು ವ್ಯಾಪಕವಾಗಿ ಸೆಳೆದಿದೆ. ಸೆಲೆಬ್ರಿಟಿಗಳು ಕೂಡ ಇತ್ತೀಚೆಗೆ ಈ ವಿಧಾನದತ್ತ ಹೆಚ್ಚು ಗಮನ ನೀಡುತ್ತಿದ್ದಾರೆ. ಬಾಲಿವುಡ್ ನ ಹಲವು ಪ್ರಮುಖ ನಟಿಯರು ವಯಸ್ಸಿನ ಅಥವಾ ಜೈವಿಕ ಗಡಿಯಾರದ ಒತ್ತಡವಿಲ್ಲದೆ, ಭವಿಷ್ಯದಲ್ಲಿತಾಯ್ತನವನ್ನು ಅನುಭವಿಸಲು ಎಗ್ ಫ್ರೀಜಿಂಗ್ ಅಥವಾ ಅಂಡಾಣು ಸಂರಕ್ಷಣೆ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಕೃತಿ ಸನನ್ ತಾವು ‘ಮಿಮಿ’ ಚಿತ್ರದ ಚಿತ್ರೀಕರಣದ ಸಮಯದಲ್ಲಿತಮ್ಮ ಅಂಡಾಣುಗಳನ್ನು ಫ್ರೀಜ್ ಮಾಡಿಸಿದ್ದಾಗಿ ಇತ್ತೀಚೆಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಈ ಹಿಂದೆ ಕೂಡ ಈ ಮಾರ್ಗ ಅನುಸರಿಸಿದ ಕೆಲ ಖ್ಯಾತ ನಟಿಯರು ಮತ್ತು ಅವರ ನಿರ್ಧಾರದ ಹಿಂದಿನ ಆಸಕ್ತಿದಾಯಕ ಕಾರಣಗಳ ಕುರಿತ ಮಾಹಿತಿ ಇಲ್ಲಿದೆ.
1. ಕೃತಿ ಸನನ್ : ‘ಮಿಮಿ’ ಚಿತ್ರಕ್ಕಾಗಿ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬೇಕಾದ ಸಂದರ್ಭದಲ್ಲಿಕೃತಿ ಅವರು ತಮ್ಮ ಅಂಡಾಣುಗಳನ್ನು ಫ್ರೀಜ್ ಮಾಡಲು ನಿರ್ಧರಿಸಿದರು. ಎಗ್ ಫ್ರೀಜಿಂಗ್ ಪ್ರಕ್ರಿಯೆಯಿಂದಾಗಿ ದೇಹದಲ್ಲಿತಾತ್ಕಾಲಿಕವಾಗಿ ಉಬ್ಬರ ಕಾಣಿಸಿಕೊಳ್ಳುವುದರಿಂದ, ತೂಕ ಹೆಚ್ಚಿಸಿಕೊಳ್ಳುವ ಸಮಯವೇ ಇದಕ್ಕೆ ಸೂಕ್ತ ಎಂದು ಅವರು ಭಾವಿಸಿದ್ದರು. ‘ಹ್ಯೂಮನ್ಸ್ ಆಫ್ ಬಾಂಬೆ’ ಪಾಡ್ ಕಾಸ್ಟ್ ನಲ್ಲಿಮಾತನಾಡಿದ ಅವರು, ‘ಇದು ಮಹಿಳೆಯರು ತಮಗೆ ತಾವೇ ನೀಡಬಹುದಾದ ಅತ್ಯುತ್ತಮ ಉಡುಗೊರೆ’ ಎಂದು ಹೇಳುತ್ತಾ, ಇತರ ಮಹಿಳೆಯರಿಗೂ ಈ ಬಗ್ಗೆ ಯೋಚಿಸಲು ಪ್ರೋತ್ಸಾಹಿಸಿದ್ದಾರೆ.
2. ಪ್ರಿಯಾಂಕಾ ಚೋಪ್ರಾ: ಪ್ರಿಯಾಂಕಾ ಅವರಿಗೆ 30ರ ಹರೆಯದಲ್ಲಿದ್ದಾಗ ಅವರ ತಾಯಿ ಹಾಗೂ ಸ್ತ್ರೀರೋಗ ತಜ್ಞೆ ಎಗ್ ಫ್ರೀಜ್ ಮಾಡುವಂತೆ ಸಲಹೆ ನೀಡಿದ್ದರಂತೆ. ಈ ಪ್ರಕ್ರಿಯೆಯು ತಮ್ಮ ಜೈವಿಕ ಗಡಿಯಾರದ ಆತಂಕವಿಲ್ಲದೆ ವೃತ್ತಿಜೀವನದ ಕಡೆಗೆ ಗಮನ ಹರಿಸಲು ಸ್ವಾತಂತ್ರ್ಯ ನೀಡಿತು ಎಂದು ಪ್ರಿಯಾಂಕಾ ಹೇಳಿದ್ದಾರೆ. ನಂತರ ಜನವರಿ 2022ರಲ್ಲಿಅವರು ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಸ್ವಾಗತಿಸಿದರು.
3. ರಿಚಾ ಚಡ್ಡಾ: ಎಗ್ ಫ್ರೀಜಿಂಗ್ ನಿರ್ಧಾರವು ರಿಚಾ ಚಡ್ಡಾ ಅವರಿಗೆ ಮಾನಸಿಕ ನೆಮ್ಮದಿ ನೀಡಿದೆಯಂತೆ. ಸಮಾಜ ಅಥವಾ ವಯಸ್ಸಿನ ಒತ್ತಡಕ್ಕೆ ಮಣಿಯದೆ, ತಮ್ಮ ವೃತ್ತಿಪರ ಬೆಳವಣಿಗೆಗೆ ಧಕ್ಕೆ ಬಾರದಂತೆ, ತಮಗೆ ಇಷ್ಟಬಂದ ಸಮಯದಲ್ಲಿತಾಯ್ತನವನ್ನು ಯೋಜಿಸಲು ಈ ಆಯ್ಕೆ ತಮಗೆ ಸಹಾಯ ಮಾಡಿತು ಎಂದು ಅವರು ಹೇಳಿಕೊಂಡಿದ್ದಾರೆ.
4. ಇಶಾ ಗುಪ್ತಾ: ಇಶಾ ಅವರು 2019ರಲ್ಲಿತಮ್ಮ ಬಾಯ್ ಫ್ರೆಂಡ್ ಮ್ಯಾನುಯೆಲ್ ಕ್ಯಾಂಪೋಸ್ ಗ್ವಾಲರ್ ಅವರನ್ನು ಭೇಟಿಯಾಗುವುದಕ್ಕಿಂತ ಮುಂಚೆಯೇ, ಅಂದರೆ 2017ರಲ್ಲೇ ತಮ್ಮ ಎಗ್ ಫ್ರೀಜ್ ಮಾಡಿಸಿದ್ದರಂತೆ. ಭವಿಷ್ಯದ ಕುಟುಂಬದ ಯೋಜನೆಗಳನ್ನು ಸುರಕ್ಷಿತವಾಗಿರಿಸಲು ಅವರ ಚಿಕ್ಕಮ್ಮ ನೀಡಿದ ಸಲಹೆ ಇದಕ್ಕೆ ಕಾರಣವಂತೆ. ಈ ದಂಪತಿ ಐವಿಎಫ್ ಅಥವಾ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೊಂದಲು ಯೋಜಿಸಿದ್ದಾರೆ.
5. ಮೋನಾ ಸಿಂಗ್ : ನಟಿ ಮೋನಾ ಸಿಂಗ್ ತಮ್ಮ 34ನೇ ವಯಸ್ಸಿನಲ್ಲಿ, ಅಂದರೆ ಮದುವೆಗೂ ಐದು ವರ್ಷಗಳ ಮುಂಚಿತವಾಗಿ ಈ ಪ್ರಕ್ರಿಯೆಗೆ ಒಳಗಾಗಿದ್ದರು. ಕುಟುಂಬದ ಸ್ತ್ರೀರೋಗ ತಜ್ಞರು ಊಟದ ಸಮಯದಲ್ಲಿಈ ಕಲ್ಪನೆಯನ್ನು ನೀಡಿದಾಗ, ಮೋನಾ ಕೆಲಸದಿಂದ ಕೆಲವು ತಿಂಗಳುಗಳ ವಿರಾಮ ತೆಗೆದುಕೊಂಡು ಎಗ್ ಫ್ರೀಜ್ ಮಾಡಿಸಿದ್ದರಂತೆ. ಈ ನಿರ್ಧಾರವೇನೂ ದೊಡ್ಡ ವಿಷಯವಲ್ಲಎಂದು ಅವರು ಸಹಜವಾಗಿ ಮಾತನಾಡಿದ್ದಾರೆ.
6. ಮಂದಿರಾ ಬೇಡಿ: ಮಂದಿರಾ ಬೇಡಿ ತಮ್ಮ 30ರ ಹರೆಯದ ಮಧ್ಯಭಾಗದಲ್ಲಿಈ ಆಯ್ಕೆಯನ್ನು ಮಾಡಿಕೊಂಡಿದ್ದರಂತೆ. ತಮ್ಮ ವೃತ್ತಿಜೀವನದ ಬದ್ಧತೆ ಮತ್ತು ತಾಯ್ತನದ ನಿರ್ಧಾರಗಳು ತಮ್ಮ ನಿಯಂತ್ರಣದಲ್ಲೇ ಇರಬೇಕೆಂಬ ಉದ್ದೇಶದಿಂದ ಅವರು ಎರಡು ಬಾರಿ ಈ ಪ್ರಕ್ರಿಯೆಗೆ ಒಳಗಾಗಿದ್ದರು. ಇದು ಯಾವುದೇ ಬಾಹ್ಯ ಒತ್ತಡವಿಲ್ಲದೆ ತಾಯ್ತನವನ್ನು ಯೋಜಿಸುವ ಸ್ವಾತಂತ್ರ್ಯವನ್ನು ನೀಡಿತು ಎಂದು ಅವರು ಬಹಿರಂಗವಾಗಿ ಹೇಳಿಕೊಂಡಿದ್ದರು.