ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿಕೆಲವೊಮ್ಮೆ ಕಟ್ಟಡದ ವಿನ್ಯಾಸಕ್ಕಿಂತ ಗ್ರಾಹಕರ ಮನಸ್ಥಿತಿಯೇ ದೊಡ್ಡ ಪಾತ್ರ ವಹಿಸುತ್ತದೆ ಎಂಬುದನ್ನು 13ನೇ ಮಹಡಿಯ ಕಥೆ ಸ್ಪಷ್ಟವಾಗಿ ತೋರಿಸುತ್ತದೆ.
ಸ್ಟೀವನ್ ರೇಗೊ
ಖಠಿಛಿva್ಞ.್ಟಛಿಜಟಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಬಹುಮಹಡಿ ಕಟ್ಟಡದ ಲಿಫ್ಟ್ ಗೆ ಕಾಲಿಟ್ಟಾಗ ಫ್ಲೋರ್ ಗಳ ಪಟ್ಟಿಯಲ್ಲಿ11, 12ರ ನಂತರ ನೇರವಾಗಿ 14 ಸಂಖ್ಯೆ ಕಾಣಿಸಿಕೊಂಡರೆ ಅಚ್ಚರಿಯಾಗುವುದು ಸಹಜ. ‘13ನೇ ಮಹಡಿ ಎಲ್ಲಿಗೆ ಹೋಯಿತು?’ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿಮೂಡುತ್ತದೆ. ವಾಸ್ತವದಲ್ಲಿ13ನೇ ಮಹಡಿ ಮಾಯವಾಗಿರುವುದಿಲ್ಲ, ಅದು ಕಟ್ಟಡದಲ್ಲೇ ಇರುತ್ತದೆ. ಆದರೆ ಅದರ ಸಂಖ್ಯೆಯನ್ನು ಮಾತ್ರ ಬದಲಾಯಿಸಲಾಗುತ್ತದೆ. ಈ ಪದ್ಧತಿಯ ಹಿಂದೆ ತಾಂತ್ರಿಕ ಕಾರಣಗಳಿಗಿಂತ ಮೂಢನಂಬಿಕೆ, ಖರೀದಿದಾರರ ಮನೋಭಾವ ಮತ್ತು ರಿಯಲ್ ಎಸ್ಟೇಟ್ ಮಾರುಕಟ್ಟೆಯ ಲೆಕ್ಕಾಚಾರವೇ ಪ್ರಮುಖ ಕಾರಣ ಎನ್ನಲಾಗಿದೆ.
ಟ್ರಿಸ್ಕೈಡೆಕಾಫೋಬಿಯಾ
ಪಾಶ್ಚಾತ್ಯ ದೇಶಗಳಲ್ಲಿ13 ಸಂಖ್ಯೆಯನ್ನು ಅಶುಭವೆಂದು ನಂಬುವ ಸಂಪ್ರದಾಯ ಶತಮಾನಗಳಿಂದಲೂ ಇದೆ. ಕೆಲವು ಸಮುದಾಯಗಳ ನಂಬಿಕೆಗಳು ಹಾಗೂ ಐತಿಹಾಸಿಕ ಘಟನೆಗಳಿಂದ ಈ ಭಾವನೆ ಬಲಗೊಂಡಿದೆ ಎಂದು ತಜ್ಞರು ಹೇಳುತ್ತಾರೆ. ಈ ಕಾರಣದಿಂದ ಅನೇಕ ಜನರು 13 ಸಂಖ್ಯೆ ಹೊಂದಿರುವ ಮನೆ, ಕೊಠಡಿ ಅಥವಾ ಮಹಡಿಯನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ. 13 ಸಂಖ್ಯೆಯ ಮೇಲಿನ ಈ ಅತಿ ಭಯವನ್ನು ಮನೋವಿಜ್ಞಾನದಲ್ಲಿಟ್ರಿಸ್ಕೈಡೆಕಾಫೋಬಿಯಾ ಎನ್ನಲಾಗುತ್ತದೆ. ಈ ಮನೋಭಾವವನ್ನು ಗಮನದಲ್ಲಿರಿ ಅನೇಕ ಕಟ್ಟಡ ನಿರ್ಮಾಣ ಸಂಸ್ಥೆಗಳು 13ನೇ ಮಹಡಿಯನ್ನು ಸಂಖ್ಯೆಯಲ್ಲಿತೋರಿಸುವುದಿಲ್ಲಹಾಗೂ ಲಿಫ್ಟ್ ಫಲಕದಲ್ಲಿ12ರ ನಂತರ ನೇರವಾಗಿ 14 ಎಂದು ನಮೂದಿಸುತ್ತಾರೆ. ಕೆಲವೆಡೆ 13ನೇ ಮಹಡಿಯನ್ನು 12ಎ, 12ಬಿ ಅಥವಾ ಸಿ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ. ಆದರೆ ಕಟ್ಟಡದ ಒಟ್ಟು ಮಹಡಿಗಳ ಸಂಖ್ಯೆಯಲ್ಲಿಯಾವುದೇ ಬದಲಾವಣೆ ಇರುವುದಿಲ್ಲ. ಕೇವಲ ಸಂಖ್ಯೆಯ ಲೇಬಲ್ ಮಾತ್ರ ಬದಲಾಗಿರುತ್ತದೆ.
ಬಿಲ್ಡರ್ ಗಳ ಸಂಖ್ಯೆಯಾಟ
ರಿಯಲ್ ಎಸ್ಟೇಟ್ ಕ್ಷೇತ್ರದ ತಜ್ಞರ ಪ್ರಕಾರ, ದುಬಾರಿ ಅಪಾರ್ಟ್ ಮೆಂಟ್ ಮತ್ತು ಐಷಾರಾಮಿ ವಸತಿ ಯೋಜನೆಗಳಲ್ಲಿ13ನೇ ಮಹಡಿಯ ಫ್ಲ್ಯಾಟ್ ಗಳನ್ನು ಮಾರಾಟ ಮಾಡಲು ಹೆಚ್ಚು ಸಮಯ ಬೇಕಾಗಬಹುದು ಎಂಬ ಕಾರಣದಿಂದ ಡೆವಲಪರ್ ಗಳು ಈ ಸಂಖ್ಯೆ ತಪ್ಪಿಸಲು ಮುಂದಾಗುತ್ತಾರೆ. ಗ್ರಾಹಕರ ಮನೋಭಾವಕ್ಕೆ ಅನುಗುಣವಾಗಿ ಯೋಜನೆ ರೂಪಿಸಿದರೆ ಮಾರಾಟ ಸುಲಭವಾಗುತ್ತದೆ ಎಂಬುದು ಅವರ ವಾದ. ಈ ಟ್ರೆಂಡ್ ಪಾಶ್ಚಾತ್ಯ ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿಲ್ಲ, ಭಾರತದಲ್ಲಿಯೂ ಬೆಂಗಳೂರು, ಮುಂಬಯಿ, ಹೊಸದಿಲ್ಲಿ, ಗುರುಗ್ರಾಮ್ , ಪುಣೆ ಸೇರಿದಂತೆ ಹಲವು ಮಹಾನಗರಗಳ ಕೆಲವು ಬಹುಮಹಡಿ ಕಟ್ಟಡಗಳಲ್ಲಿ13ನೇ ಮಹಡಿಯನ್ನು ಸಂಖ್ಯೆಯಲ್ಲಿಬಿಟ್ಟು 14 ಎಂದು ಗುರುತಿಸುವ ಪದ್ಧತಿ ಕಂಡುಬರುತ್ತಿದೆ. ಅಂತಾರಾಷ್ಟ್ರೀಯ ಗ್ರಾಹಕರನ್ನು ಗುರಿಯಾಗಿಸಿಕೊಂಡಿರುವ ಕೆಲವು ವಸತಿ ಯೋಜನೆಗಳಲ್ಲಿಈ ವಿಧಾನ ಹೆಚ್ಚಾಗಿ ಅನುಸರಿಸಲಾಗುತ್ತಿದೆ.
ಭಾವನೆಯ ಪರಿಣಾಮವಷ್ಟೇ
ಕುತೂಹಲಕಾರಿ ಸಂಗತಿಯೆಂದರೆ, ಜಗತ್ತಿನ ಕೆಲವು ವಿಮಾನಯಾನ ಸಂಸ್ಥೆಗಳು 13ನೇ ಸಾಲಿನ ಆಸನ ಸಂಖ್ಯೆಯನ್ನೂ ಬಳಸುವುದಿಲ್ಲ. ಕೆಲವು ಹೋಟೆಲ್ ಗಳಲ್ಲಿ13ನೇ ಕೊಠಡಿ ಸಂಖ್ಯೆಯನ್ನು ತಪ್ಪಿಸಲಾಗುತ್ತದೆ. ಇದೇ ರೀತಿಯ ಸಂಪ್ರದಾಯ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೂ ವಿಸ್ತರಿಸಿದೆ. ಸಂಖ್ಯೆಗಳ ಕುರಿತ ನಂಬಿಕೆಗಳು ಸಮಾಜದಲ್ಲಿಇನ್ನೂ ಬಲವಾಗಿ ಉಳಿದಿರುವುದರಿಂದ ರಿಯಾಲ್ಟಿ ಮಾರುಕಟ್ಟೆಯೂ ಅದಕ್ಕೆ ತಕ್ಕಂತೆ ಹೊಂದಿಕೊಂಡಿದೆ. ಆದರೂ, ಕಟ್ಟಡದಲ್ಲಿ13ನೇ ಮಹಡಿ ಇಲ್ಲಎನ್ನುವುದು ತಪ್ಪು ಕಲ್ಪನೆ, ಅದು ಇದ್ದೇ ಇರುತ್ತದೆ ಬದಲಾಗುವುದು ಅದರ ಹೆಸರಷ್ಟೇ. ಈ ಬಗ್ಗೆ ವಿಜ್ಞಾನಿಗಳು ಮತ್ತು ಮನೋವಿಜ್ಞಾನ ತಜ್ಞರು, 13 ಸಂಖ್ಯೆಯು ಅಶುಭ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ ್ಯವಿಲ್ಲಎಂದು ಸ್ಪಷ್ಟಪಡಿಸಿದ್ದಾರೆ. ಇದು ಸಂಪೂರ್ಣ ಸಾಂಸ್ಕೃತಿಕ ನಂಬಿಕೆ ಮತ್ತು ಮಾನಸಿಕ ಭಾವನೆಯ ಪರಿಣಾಮ. ಕಟ್ಟಡದ ಸುರಕ್ಷತೆ, ನಿರ್ಮಾಣದ ಗುಣಮಟ್ಟ ಅಥವಾ ವಾಸಿಸುವವರ ಜೀವನದ ಮೇಲೆ ಮಹಡಿಯ ಸಂಖ್ಯೆಯು ಯಾವುದೇ ಪರಿಣಾಮ ಬೀರುವುದಿಲ್ಲಎಂದು ಅವರು ಹೇಳಿದ್ದಾರೆ.
ಬಾಕ್ಸ್
ಗ್ರಾಹಕರ ಭಾವನೆಗೆ ಆದ್ಯತೆ
ಈಗಿನ ಯುವ ಪೀಳಿಗೆ ವೈಜ್ಞಾನಿಕ ಚಿಂತನೆಯತ್ತ ಹೆಚ್ಚು ಒಲವು ತೋರುತ್ತಿದ್ದರೂ, ದುಬಾರಿ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿಗ್ರಾಹಕರ ಭಾವನೆಗಳನ್ನು ನಿರ್ಲಕ್ಷಿಸುವುದು ಡೆವಲಪರ್ ಗಳಿಗೆ ಸುಲಭವಲ್ಲ. ಆದ್ದರಿಂದ ಬೇಡಿಕೆ ಇರುವವರೆಗೆ 13ನೇ ಮಹಡಿಯನ್ನು ಸಂಖ್ಯೆಯಲ್ಲಿತಪ್ಪಿಸುವ ಪದ್ಧತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.