ಕಲ್ಚರ್

Contributed byshubha.hegde@timesgroup.com|Vijaya Karnataka
unique cultural one act play festival with special characters
ವಾರಾಂತ್ಯ ಬಡಾವಣೆ ನಾಟಕೋತ್ಸವದಲ್ಲಿಕೈಲಾಸಂ ವೈಭವ

ಅಂತರಂಗ ತಂಡವು ಕೈಲಾಸಂ ವೈಭವ ಹಾಗೂ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರ ಸಣ್ಣ ಕಥೆ ಆಧರಿತ ಒಳಚರಂಡಿ ಪುರಾಣ ನಾಟಕಗಳನ್ನು ಇತ್ತೀಚೆಗೆ ವಾರಾಂತ್ಯ ಬಡಾವಣೆ ನಾಟಕೋತ್ಸವದ ಸಂದರ್ಭದಲ್ಲಿಬಸವೇಶ್ವರ ನಗರದಲ್ಲಿಯಶಸ್ವಿಯಾಗಿ ಪ್ರದರ್ಶಿಸಿತು.
ಕೈಲಾಸಂ ನಾಟಕ ರಂಗಕ್ಕೆ ನೀಡಿರುವ ಕೊಡುಗೆ ಅಪ್ರತಿಮ. ಅವರ ತೀಕ್ಷ$್ಣ ಸಂಭಾಷಣೆ, ಮೊನಚಾದ ವಿಷಯ ಪ್ರತಿಪಾದನೆ ಹಾಗೂ ಸಮಾಜಕ್ಕೆ ಹಿಡಿಯುವ ಕನ್ನಡಿಯಂತೆ ಇರುವ ಅವರ ನಾಟಕಗಳ ವಸ್ತು ಇಂದಿಗೂ ಪ್ರಸ್ತುತವಾಗಿವೆ. ಇವರ ಹೋಂ ರೂಲ್ ಮತ್ತು ಹುತ್ತದಲ್ಲಿಹುತ್ತ ನಾಟಕಗಳು ಪ್ರೇಕ್ಷಕರ ಮನಸೊರೆಗೊಂಡವು. ಹೋಂ ರೂಲ್ ನಾಟಕಕ್ಕೆ ಪೂರ್ವಭಾವಿಯಾಗಿ ಶ್ರೀಧರ್ ಎಡ್ರಾವಿ ಅವರು ಕನ್ನಡಕ್ಕೊಬ್ಬನೇ ಕೈಲಾಸಂ ಏಕವ್ಯಕ್ತಿ ಪ್ರದರ್ಶನ ನೀಡಿ ಕೈಲಾಸಂ ಅವರ ವ್ಯಕ್ತಿತ್ವ, ಪ್ರತಿಭೆ ಮತ್ತು ಅವರ ಕೃತಿಗಳಿಂದ ಆಯ್ದ ದೃಶ್ಯಗಳನ್ನು ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದರು. ಹೆಂಡತಿ ಮತ್ತು ತಾಯಿಯ ನಡುವೆ ಸಿಲುಕುವ ಬರೀ ಬಡಾಯಿ ಕೊಚ್ಚಿಕೊಳ್ಳುವ ಗಂಡಿನ ಖಾಲಿತನವನ್ನು ಹಾಸ್ಯಮಯವಾಗಿ, ಆಸಕ್ತಿ ಕೆರಳಿಸುವ ರೀತಿಯಲ್ಲಿಕೈಲಾಸಂ ಅವರ ಕೃತಿಗೆ ಸ್ವಲ್ಪವೂ ಅಪಚಾರವಾಗದಂತೆ ಪ್ರದರ್ಶಿಸಿದ ಕಲಾವಿದರು ಮತ್ತು ನಿರ್ವಹಣೆ ಮಾಡಿದ ಅಂಕಲ್ ಶ್ಯಾಮ್ ಅವರು ಪ್ರಶಂಸೆಗೆ ಪಾತ್ರರಾದರು. ಕೈಲಾಸಂ ಅವರ ಇನ್ನೊಂದು ಪ್ರಸಿದ್ಧ ನಾಟಕ ಹುತ್ತದಲ್ಲಿಹುತ್ತ ಇಂದಿಗೂ ಪ್ರಸ್ತುತವಾದ ವಸ್ತುವನ್ನು ಹೊಂದಿದ್ದು ಒಣ ಪ್ರತಿಷ್ಠೆ, ಟೊಳ್ಳುತನ, ಅಹಂ ಗಳಿಂದ ಮೋಸಹೋಗುವ ಕುಟುಂಬದ ಪರಿಪಾಟಲನ್ನು ಅತ್ಯುತ್ತಮ ಅಭಿನಯದ ಮೂಲಕ ಕಲಾವಿದರು ಕಟ್ಟಿಕೊಟ್ಟು ಎಲ್ಲರ ತುಂಬು ಹೃದಯದ ಮೆಚ್ಚುಗೆಗೆ ಪಾತ್ರರಾದರು. ಮುಖ್ಯ ಪಾತ್ರದಲ್ಲಿಅಭಿನಯಿಸಿ ಪರಿಷ್ಕೃತ ನಿರ್ದೇಶನ ಮಾಡಿದ ಅರ್ಚನಾ ಶ್ಯಾಮ್ ಅಭಿನಂದನೆಗೆ ಭಾಜನರು. ಒಳ ಚರಂಡಿ ಪುರಾಣ ನಾಟಕ ರೂಪವನ್ನು ಸಿದ್ಧಪಡಿಸಿದವರು ಡಾ. ಗೌರೀಶ್ ಜೋಶಿ ಮತ್ತು ರಂಗ ವಿನ್ಯಾಸ ಮತ್ತು ನಿರ್ದೇಶನ ಮಾಡಿದವರು ಅರ್ಚನಾ ಶ್ಯಾಮ್ . ಒಳಚರಂಡಿಯ ಕುರಿತಾದ ವಿಷಯ ಹೊಂದಿರುವ ಈ ನಾಟಕದಲ್ಲಿಪರಿಹಾರಕ್ಕಾಗಿ ಹೋರಾಡುವ ಹಿರಿಯ ನಾಗರಿಕ ಮತ್ತು ಸಮಸ್ಯೆಯ ಮೂಲವನ್ನು ಹುಡುಕಲು ಮುಂದಾಗುವ ಯುವಕನ ಸುತ್ತ ನಡೆಯುವ ವಿದ್ಯಮಾನಗಳು ಆಸಕ್ತಿದಾಯಕವಾಗಿ ಪ್ರೇಕ್ಷಕರನ್ನು ಸೆಳೆದವು.

///////////////

ಕೊಳಕು ಗೋಡೆಗಳನ್ನು ಶಾಲೆಯಾಗಿ ಪರಿವರ್ತಿಸಿದ ಶಿಕ್ಷಕಿ

ಇಂಟ್ರೊ: ಕೊಳಚೆ ಪ್ರದೇಶಗಳ ಚಿತ್ರಣವನ್ನೇ ಬದಲಾಯಿಸಿ, ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ವೃತ್ತಿಪರ ತರಬೇತಿ ನೀಡುತ್ತಿರುವ ರೂಬಲ್ ನಾಗಿ ಅವರ ಮಿಸಾಲ್ ಇಂಡಿಯಾ ಕಾರ್ಯಕ್ರಮದ ಯಶಸ್ಸು ಮತ್ತು ಅವರ ಕಲಾತ್ಮಕ ಶಿಕ್ಷಣ ಕ್ರಾಂತಿಯೇ ರೋಚಕ.

ಯತಿರಾಜ್ ವೀರಾಂಬುಧಿ

ನಿಮ್ಮ ಕೈಯಲ್ಲಿರುವ ಆ ಕೋಲನ್ನು ಏನೆನ್ನುತ್ತಾರೆ? ಎಂದು ಕೇಳಿತು ಒಂದು ಮಗು. ಆ ಪ್ರಶ್ನೆ ಅರ್ಥವಾಗದೇ, ಆಕೆ ತನ್ನ ಕೈಯಲ್ಲಿದ್ದ ವಸ್ತುವನ್ನು ನೋಡಿಕೊಂಡು ‘ಇದನ್ನು ಪೆನ್ಸಿಲ್ ’ ಎನ್ನುತ್ತಾರೆ ಎಂದಳು.

‘ಅದರಿಂದ ಏನು ಮಾಡುತ್ತಾರೆ?’ ಎಂದು ಮುಗ್ಧವಾಗಿ ಪ್ರಶ್ನಿಸಿತು ಆ ಮಗು. ಆ ಪ್ರಶ್ನೆ ಆಕೆಯನ್ನು ಕ್ಷಣಕಾಲ ಮೂಕವಿಸ್ಮಿತಳನ್ನಾಗಿ ಮಾಡಿತು. ಪ್ರಪಂಚದಲ್ಲೇ ಅತ್ಯಂತ ಸಾಮಾನ್ಯವಾದ ಪೆನ್ಸಿಲ್ ಸಹ ತಿಳಿಯದ ಸ್ಥಿತಿಯಲ್ಲಿಕೆಲವು ಮಕ್ಕಳು ಈ ಲೋಕದಲ್ಲಿದ್ದಾರೆ ಎಂಬ ನಿಜ ಆಕೆಯ ಮನಸ್ಸನ್ನು ಕಲಕಿತು. ಪ್ರತಿ ಮಗುವಿನ ಕೈಯಲ್ಲೂಪೆನ್ಸಿಲ್ ಇರಬೇಕು ಎಂಬ ಸಂಕಲ್ಪಕ್ಕೆ ಆ ಕ್ಷಣದಲ್ಲೇ ನಾಂದಿ ಹಾಡಲಾಯಿತು.

ಆ ಸಂಕಲ್ಪದೊಂದಿಗೆ ಆಕೆ ಕೊಳಚೆ ಪ್ರದೇಶಗಳಿಗೆ ಹೋದಾಗ ಅಲ್ಲಿಶಾಲೆಗಳಿರಲಿಲ್ಲ, ಕೇವಲ ಶಿಥಿಲಗೊಂಡ ಗೋಡೆಗಳು ಮಾತ್ರ ಇದ್ದವು. ಆ ಗೋಡೆಗಳನ್ನು ನೋಡಿ ಆಕೆಗೆ ಒಂದು ಅದ್ಭುತವಾದ ಆಲೋಚನೆ ಬಂದಿತು..!

ಶಾಲೆ ಎಂದರೆ ನಾಲ್ಕು ಗೋಡೆಗಳು, ಒಂದು ಕಪ್ಪು ಹಲಗೆ, ಎದುರಿಗೆ ಮಕ್ಕಳು, ಅವರಿಗೆ ಪಾಠ ಹೇಳಿಕೊಡುವ ಶಿಕ್ಷಕರು.ಇದು ನಮ್ಮೆಲ್ಲರಿಗೂ ತಿಳಿದಿರುವ ವ್ಯಾಖ್ಯಾನ. ಆದರೆ ಈ ರೂಬಲ್ ನಾಗಿ ಎಂಬ ಮಹಿಳೆಗೆ ಶಾಲೆಯ ಬಗ್ಗೆ ಮತ್ತೊಂದು ಆಲೋಚನೆ ಇತ್ತು. ‘ಮಕ್ಕಳು ಶಾಲೆಗೆ ಬರಲು ಸಾಧ್ಯವಾಗದಿದ್ದರೆ, ಶಾಲೆಯನ್ನೇ ಅವರ ಬಳಿಗೆ ಕೊಂಡೊಯ್ಯಬೇಕು ಎಂಬ ಆಲೋಚನೆ ಅದು..! ಒಂದು ಮಗುವಿಗೆ ಶಿಕ್ಷಣ ನೀಡುವುದು ಎಂದರೆ ಅದರ ಕೈಯಲ್ಲಿಪುಸ್ತಕ ಇಡುವುದಲ್ಲ, ಬದಲಿಗೆ ಅದರ ಭವಿಷ್ಯಕ್ಕೊಂದು ಬಾಗಿಲನ್ನು ತೆರೆಯುವುದು ಎಂದು ಆಕೆ ನಂಬಿದ್ದಳು.

ರೂಬಲ್ ನಾಗಿ ಒಬ್ಬ ಚಿತ್ರ ಕಲಾವಿದೆ. ಸಾಮಾನ್ಯ ಚಿತ್ರಕಾರ ತನ್ನ ಚಿತ್ರಗಳಿಗಾಗಿ ಅತ್ಯುತ್ತಮ ಕ್ಯಾನ್ವಾಸ್ ಹುಡುಕುತ್ತಾನೆ. ಆದರೆ ಆಕೆ ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು ಹುಡುಕಿದಳು. ನಿನ್ನೆ ದಿನದವರೆಗೂ ನಿರ್ಲಕ್ಷ್ಯದ ಸಂಕೇತವಾಗಿ ನಿಂತಿದ್ದ ಗೋಡೆಗಳು, ಮಕ್ಕಳಿಗೆ ಪಾಠ ಕಲಿಸುವ ಜೀವಂತ ಪುಸ್ತಕಗಳಾಗಿ ಬದಲಾದವು. ಒಂದು ಗೋಡೆಯ ಮೇಲೆ ಅಕ್ಷರಗಳು, ಮತ್ತೊಂದು ಗೋಡೆಯ ಮೇಲೆ ಅಂಕಿಗಳು, ಮಗದೊಂದು ಗೋಡೆಯ ಮೇಲೆ ವಿಜ್ಞಾನ, ಆರೋಗ್ಯ, ನೈರ್ಮಲ್ಯ ಹಾಗೂ ಪರಿಸರಕ್ಕೆ ಸಂಬಂಧಿಸಿದ ರಂಗುರಂಗಿನ ಚಿತ್ರಗಳು ಪ್ರತ್ಯಕ್ಷವಾದವು. ಐಷಾರಾಮಿ ಅರ್ಬನ್ ಆಡಿಟೋರಿಯಂಗಳಲ್ಲಿನ ದುಬಾರಿ ಕಲಾ ಪ್ರದರ್ಶನಗಳಿಗಿಂತ, ಕೊಳಚೆ ಪ್ರದೇಶಗಳ ಗೋಡೆಗಳ ಮೇಲಿನ ತನ್ನ ಚಿತ್ರಕಲೆಗೆ ಹೆಚ್ಚಿನ ಸಾರ್ಥಕತೆ ಇದೆ ಎಂದು ಆಕೆ ನಂಬಿದಳು.

ಕೇವಲ ಮೂವತ್ತು ಮಕ್ಕಳೊಂದಿಗೆ ಪ್ರಾರಂಭವಾದ ಆಕೆಯ ಪ್ರಯತ್ನ ಕ್ರಮೇಣ ನೂರಾರು ಪ್ರದೇಶಗಳಿಗೆ ವಿಸ್ತರಿಸಿತು. ಶಾಲೆಯ ಮುಖವನ್ನೇ ನೋಡದ ಮಕ್ಕಳನ್ನು ಶಿಕ್ಷಣದತ್ತ ಮುಖ ಮಾಡುವಂತೆ ಮಾಡುವುದು, ಕಲಿಕೆಯಲ್ಲಿಹಿಂದುಳಿದವರಿಗೆ ಸಹಾಯ ಮಾಡುವುದು ಮತ್ತು ಅವರಲ್ಲಿ‘ನಾನೂ ಕಲಿಯಬಲ್ಲೆ’ ಎಂಬ ನಂಬಿಕೆಯನ್ನು ಮೂಡಿಸುವುದು ಆಕೆಯ ಗುರಿಯಾಯಿತು. ಆಕೆಯ ತರಬೇತಿ ಕೇಂದ್ರಗಳಲ್ಲಿಓದಿದ ಕೆಲವು ವಿದ್ಯಾರ್ಥಿಗಳು ಬ್ಯಾಚುಲರ್ ಆಫ್ ಫೈನ್ ಆಟ್ಸ…ರ್ ಪದವಿ ಪಡೆದಿದ್ದರೆ, ಇನ್ನು ಕೆಲವರು ಸಿವಿಲ್ ಸರ್ವಿಸಸ್ ಪರೀಕ್ಷೆಗಳಿಗೆ ಸಿದ್ಧರಾಗುತ್ತಿದ್ದಾರೆ. ಮತ್ತೂ ಕೆಲವರು ಭಾರತೀಯ ಸೇನೆಯಲ್ಲಿಅಧಿಕಾರಿಗಳಾಗಿ ಸೇರಲು ತರಬೇತಿ ಪಡೆಯುತ್ತಿದ್ದಾರೆ. ಕೊಳಚೆ ಪ್ರದೇಶದಲ್ಲಿಆರಂಭವಾದ ಅವರ ಪ್ರಯಾಣ, ಉನ್ನತ ಶಿಕ್ಷಣ ಸಂಸ್ಥೆಗಳವರೆಗೆ ತಲುಪಿದೆ.

ಒಂದು ಹುಡುಗನಿಗೆ ಅಕ್ಷರ ಕಲಿಸುವುದು ನಮಗೆ ಸಣ್ಣ ವಿಷಯವಾಗಿ ಕಾಣಿಸಬಹುದು. ಆದರೆ ಆತನ ಕುಟುಂಬದಲ್ಲಿಶಿಕ್ಷಣ ಪಡೆದ ಮೊದಲ ವ್ಯಕ್ತಿ ಆತನೇ ಆಗಿದ್ದರೆ, ಅದು ಕೇವಲ ಒಂದು ಅಕ್ಷರವಲ್ಲ, ಆ ಕುಟುಂಬದ ಇತಿಹಾಸದಲ್ಲಿಪ್ರಾರಂಭವಾದ ಹೊಸ ಅಧ್ಯಾಯ. ಒಂದು ಹೆಣ್ಣುಮಗುವಿಗೆ ಲೆಕ್ಕ ಕಲಿಸುವುದು ಸಾಮಾನ್ಯವೆನಿಸಬಹುದು. ಆದರೆ ನಾಳೆ ಆಕೆ ತನ್ನ ಸಂಪಾದನೆಯನ್ನು ತಾನೇ ಲೆಕ್ಕಹಾಕಿಕೊಂಡು, ಯಾರೂ ತನ್ನನ್ನು ವಂಚಿಸದಂತೆ ಎದ್ದು ನಿಲ್ಲಬಲ್ಲವಳಾದರೆ, ಅದು ಕೇವಲ ಗಣಿತವಲ್ಲ, ಅದು ಆತ್ಮಗೌರವ.

‘ನೀನು ಹುಟ್ಟಿರುವುದು ಕೊಳಚೆ ಪ್ರದೇಶದಲ್ಲಾಗಿರಬಹುದು, ಆದರೆ ನಿನ್ನ ಕನಸುಗಳು ಅಲ್ಲಿಯೇ ಕೊನೆಗೊಳ್ಳಬೇಕಾಗಿಲ್ಲ’ ಎನ್ನುತ್ತಾರೆ ರೂಬಲ್ ನಾಗಿ.

ಒಬ್ಬ ಶಿಕ್ಷಣ ತಜ್ಞ ಕಟ್ಟಡವನ್ನು ಕಟ್ಟಿ ಶಾಲೆಯನ್ನು ನಿರ್ಮಿಸಬಹುದು. ಆದರೆ ಶಿಕ್ಷಣ ಪಡೆಯದ ಮಗುವಿನ ಮನಸ್ಸಿನಲ್ಲಿ‘ನನಗೂ ಒಂದು ಭವಿಷ್ಯವಿದೆ!’ ಎಂಬ ನಂಬಿಕೆಯನ್ನು ಮೂಡಿಸುವವನೇ ನಿಜವಾದ ಶಿಕ್ಷಕ.

ರೂಬಲ್ ನಾಗಿ ಗೋಡೆಗಳ ಮೇಲೆ ಬಣ್ಣ ಹಚ್ಚಿದ್ದಲ್ಲ; ಮಕ್ಕಳ ಜೀವನದಲ್ಲಿಬಣ್ಣಗಳನ್ನು ತುಂಬುವ ಭವಿಷ್ಯವನ್ನು ಬರೆದದ್ದು. ಈ ಅದ್ಭುತ ಸಾಧನೆಗಾಗಿ ಆಕೆಗೆ ಮಿಲಿಯನ್ ಡಾಲರ್ ಮೌಲ್ಯದ ‘ಗ್ಲೋಬಲ್ ಟೀಚರ್ ಪ್ರೈಜ್ ’ ಲಭಿಸಿದೆ. ಅಷ್ಟು ದೊಡ್ಡ ಮೊತ್ತದ ಪ್ರಶಸ್ತಿ (ಸುಮಾರು ಒಂದು ಕೋಟಿ ರೂಪಾಯಿಗಳು) ಬಂದ ನಂತರವೂ ಆಕೆ ತನ್ನ ವೈಯಕ್ತಿಕ ಸೌಕರ್ಯಗಳ ಬಗ್ಗೆ ಯೋಚಿಸಲಿಲ್ಲ; ಬದಲಿಗೆ ಬಡ ಮಕ್ಕಳಿಗೆ ಉಚಿತವಾಗಿ ವೃತ್ತಿಪರ ಶಿಕ್ಷಣ ನೀಡುವ ಸಂಸ್ಥೆಯನ್ನು ನಿರ್ಮಿಸುವ ಬಗ್ಗೆ ಯೋಚಿಸಿದಳು. ಅದಕ್ಕಾಗಿಯೇ ಆಕೆಗೆ ಪ್ರಶಸ್ತಿ ಬಂದಿದೆ ಎಂದು ಹೇಳುವುದಕ್ಕಿಂತ, ಆಕೆ ಮಾಡುತ್ತಿರುವ ಕೆಲಸವನ್ನು ಹುಡುಕಿಕೊಂಡು ಪ್ರಶಸ್ತಿಯೇ ಬಂದಿದೆ ಎಂದು ಹೇಳುವುದು ಸೂಕ್ತ.

(ಮೂಲ: ಯಂಡಮೂರಿ ವೀರೇಂದ್ರನಾಥ್ )