ಅಧಿಕೃತ ಕ್ವಾರಿ-ಕ್ರಷರ್ ಮಾಹಿತಿ ಮುಕ್ತವಾಗಿಲ್ಲ, ಹೆಸರಿಗಷ್ಟೇ ವೆಬ್ ಸೈಟ್ , ಅಗತ್ಯ ಮಾಹಿತಿ ಇಲ್ಲ
ವೆಂ.ಸುನೀಲ್ ಕುಮಾರ್ ಕೋಲಾರ ಘ್ಕಿs್ಠ್ಞಜ್ಝಿ.k್ಠಞa್ಟ14ಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ರಾಜ್ಯಾದ್ಯಂತ ಸಾವಿರಾರು ಕ್ವಾರಿ-ಕ್ರಷರ್ ಗಳಿಗೆ ಅನುಮತಿ ನೀಡಿದೆ. ಆದರೆ, ಇಲಾಖೆಯ ವೆಬ್ ಸೈಟ್ ನಲ್ಲಿಯಾವುದೇ ಮಾಹಿತಿ ಒದಗಿಸದೆ ಪಾರದರ್ಶಕತೆಯಿಂದ ದೂರವಿರುವುದು ಕಂಡುಬಂದಿದೆ.
ರಾಜ್ಯದ ನಾನಾ ಇಲಾಖೆಗಳು ಈಗಾಗಲೇ ಇ-ಕಚೇರಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿದ್ದು, ಹೆಚ್ಚಿನ ಇಲಾಖೆಗಳು ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ವೆಬ್ ಸೈಟ್ ಮೂಲಕ ಸಾರ್ವಜನಿಕರಿಗೆ ನೀಡುತ್ತಿದ್ದಾರೆ. ಆದರೆ, ರಾಜ್ಯದ ಖನಿಜ ಸಂಪತ್ತಿಗೆ ಸಂಬಂಧಿಸಿದಂತೆ ಇಲಾಖೆಯಾದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾತ್ರ ಸಾರ್ವಜನಿಕರಿಗೆ ಪಾರದರ್ಶಕವಾಗಿ ಮಾಹಿತಿ ರವಾನಿಸುವ ಕೆಲಸವನ್ನು ಮಾಡುತ್ತಿಲ್ಲ. ಇದರಿಂದಾಗಿ ಅಕ್ರಮ ಗಣಿಗಾರಿಕೆ ಮಾಡುವವರಿಗೆ ಅನುಕೂಲವಾಗುವಂತಾಗಿದೆ. ಪ್ರತಿಯೊಂದು ಇಲಾಖೆಯೂ ಪ್ರತಿವರ್ಷ ತಮ್ಮ ಇಲಾಖೆಯ ಆಡಿಟ್ ವರದಿಗಳನ್ನು ಇಲಾಖೆಯ ವೆಬ್ ಸೈಟ್ ನಲ್ಲಿಪ್ರದರ್ಶಿಸಬೇಕೆಂಬ ಸರಕಾರದ ನಿಯಮವಿದೆ. ಆದರೆ, ಗಣಿ ಇಲಾಖೆ ವೆಬ್ ಸೈಟ್ ನಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿಲ್ಲ.
ಪ್ರಾಥಮಿಕ ಮಾಹಿತಿಯೇ ಇಲ್ಲ!: ರಾಜ್ಯಾದ್ಯಂತ ಜಿಲ್ಲಾವಾರು ಇಲಾಖೆಯಿಂದ ಅಧಿಕೃತವಾಗಿರುವ ಕ್ವಾರಿಗಳು ಹಾಗೂ ಕ್ರಷರ್ ಗಳ ಮಾಹಿತಿಯೇ ವೆಬ್ ಸೈಟ್ ನಲ್ಲಿಇಲ್ಲ. ಇದರಿಂದಾಗಿ ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಯುತ್ತಿದ್ದರೂ ಜನರು ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯುವಂತಾಗಿದೆ. ಬಹುತೇಕ ಕಡೆಗಳಲ್ಲಿಕಾನೂನುಬದ್ಧವಾಗಿ ಅನುಮತಿ ಪಡೆದಿದ್ದರೂ ಗಣಿ ಮಾಲೀಕರು ಹೆಚ್ಚುವರಿ ಪ್ರದೇಶದಲ್ಲಿಗಣಿಗಾರಿಕೆ ನಡೆಸುತ್ತಿದ್ದಾರೆ. ಸಾರ್ವಜನಿಕರಿಗೆ ಅಧಿಕೃತ ಕ್ವಾರಿ ಕ್ರಷರ್ ಗಳು ಹಾಗೂ ವಿಸ್ತೀರ್ಣ, ರಾಜಸ್ವ ಪಾವತಿ ಸೇರಿದಂತೆ ಇತರೆ ಮಾಹಿತಿಯಿಲ್ಲದ ಕಾರಣ ಕಾನುನು ಬಾಹಿರ ಚಟುವಟಿಕೆಗಳನ್ನು ಪ್ರಶ್ನಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿಯೇ ರಾಮನಗರದಲ್ಲಿಇತ್ತೀಚೆಗೆ ಗಣಿ ದುರಂತ ಸಂಭವಿಸಿ ಅಮಾಯಕ ಪ್ರಾಣಗಳ ಬಲಿಯಾಗಿದೆ. ಇಷ್ಟೆಲ್ಲಾಅನಾಹುತ ನಡೆಯುತ್ತಿದ್ದರೂ, ಗಣಿಗಾರಿಕೆ ವಿಷಯದಲ್ಲಿಪಾರದರ್ಶಕತೆ ಅಳವಡಿಸಿಕೊಳ್ಳಲು ಇಲಾಖೆ ಮುಂದಾಗುತ್ತಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬಾಕ್ಸ್
ಅಕ್ರಮ ಗಣಿಗಾರಿಕೆಗೆ ಕಡಿವಾಣ?
ಗಣಿ ಇಲಾಖೆಯ ವೆಬ್ ಸೈಟ್ ನಲ್ಲಿತಾಲೂಕುವಾರು ಅನುಮತಿ ಪಡೆದಿರುವ ಕ್ವಾರಿ ಹಾಗೂ ಕ್ರಷರ್ ಗಳ ಮಾಹಿತಿ, ಲೀಸ್ ಅವಧಿ, ಮಾಲೀಕರ ವಿವರ, ಸರ್ವೆ ಸಂಖ್ಯೆ, ಗಣಿಗಾರಿಕೆ ನಡೆಯುತ್ತಿರುವ ಸ್ಥಳದ ಜಿಪಿಎಸ್ ಮಾಹಿತಿ ವೆಬ್ ಸೈಟ್ ನಲ್ಲಿಸಾರ್ವಜನಿಕರಿಗೆ ಲಭ್ಯವಾದರೆ, ಸಾಕಷ್ಟು ಪ್ರಮಾಣದಲ್ಲಿಅಕ್ರಮ ಗಣಿಗಾರಿಕೆಗೆ ಕಡಿವಾಣ ಬೀಳುತ್ತದೆ ಎನ್ನುವುದರಲ್ಲಿಸಂಶಯವಿಲ್ಲ.
ಕೋಟ್
ರಾಜ್ಯದ ಪ್ರತಿಯೊಂದು ಜಿಲ್ಲೆಯ ಕ್ವಾರಿ ಹಾಗೂ ಕ್ರಷರ್ ಗಳ ಮಾಹಿತಿಯನ್ನು ವೆಬ್ ಸೈಟ್ ನಲ್ಲಿಅಪ್ ಲೋಡ್ ಮಾಡುವಂತೆ ಸೂಚನೆ ನೀಡಲಾಗಿದ್ದು, ಪ್ರತಿಯೊಂದು ಕ್ವಾರಿ-ಕ್ರಷರ್ ಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಕೆಲಸ ಮಾಡಲಾಗುವುದು.
-ಡಾ.ಸಿ.ವಿ.ರಾಮನ್ , ಜಂಟಿ ನಿರ್ದೇಶಕರು (ಆಡಳಿತ), ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ರಾಜ್ಯಾದ್ಯಂತ ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಯುತ್ತಿದ್ದರೂ ಗಣಿ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಹೆಸರಿಗೆ ಮಾತ್ರವೇ ಇಲಾಖೆ ವೆಬ್ ಸೈಟ್ ಇದ್ದು, ಅಧಿಕೃತ ಕ್ವಾರಿ-ಕ್ರಷರ್ ಗಳ ಮಾಹಿತಿಯೇ ಇಲ್ಲ. ಆ ಮೂಲಕ ಅಕ್ರಮ ಗಣಿಗಾರಿಕೆಗೆ ಅಧಿಕಾರಿಗಳೇ ಪರೋಕ್ಷವಾಗಿ ದಾರಿ ಮಾಡಿಕೊಟ್ಟಿದ್ದಾರೆ.