ರೈಲು ಪ್ರಯಾಣದಲ್ಲಿಶಾಪಿಂಗ್ : ಮೊದಲ ಉದ್ಯಮ 28ರಂದು ಆರಂಭ

Contributed bycrastalp19@gmail.com|Vijaya Karnataka
shopping on train journeys first service to launch
ಕಾಸರಗೋಡು: ರೈಲು ಪ್ರಯಾಣ ನಡೆಸುವ ಸಂದರ್ಭ ಅಗತ್ಯ ಸಾಮಗ್ರಿಗಳನ್ನು ಖರೀದಿಸಲಾಗದೆ ನಿರಾಸೆಗೊಳ್ಳುವ ಪ್ರಯಾಣಿಕರ ವ್ಯಥೆ ಇನ್ನು ದೂರವಾಗಲಿದೆ. ರೈಲು ನಿಲುಗಡೆಗೊಂಡಾಗ ಹೊರಗಿನ ಅಂಗಡಿಗಳಿಂದ ಸಾಮಗ್ರಿಗಳನ್ನು ಖರೀದಿಸಿ ಸಮಯ ವ್ಯರ್ಥವಾಗದು. ರೈಲು ಪ್ರಯಾಣದ ಮಧ್ಯೆ ಖರೀದಿಯನ್ನೂ ನಡೆಸಲು ರೈಲ್ವೆ ಅವಕಾಶ ಕಲ್ಪಿಸುತ್ತಿದೆ. ಇದರ ಮೊದಲ ಉದ್ಯಮ ಜು.28ರಂದು ಆರಂಭಗೊಳ್ಳಲಿದೆ ಎಂದು ಉದ್ಯಮಿ ಪಯ್ಯನ್ನೂರಿನ ಹರಿಕೃಷ್ಣನ್ ಹೇಳಿದ್ದಾರೆ. ಜು.28ರಿಂದ ಮಂಗಳೂರು-ಗೋವಾ ವಂದೇ ಭಾರತ್ ನಲ್ಲಿಪರೀಕ್ಷಾರ್ಥ ಮಾರಾಟ ಆರಂಭಗೊಳ್ಳಲಿದೆ. ನಾನಾ ಉತ್ಪನ್ನಗಳನ್ನು ಪ್ರಯಾಣ ಸಮಯದಲ್ಲಿನೀಡಲು ರೈಲ್ವೆಯು ಪ್ರಯತ್ನಿಸುತ್ತಿದೆ. ಉತ್ಪನ್ನಗಳೊಂದಿಗೆ ಕಂಪನಿಗಳ ಮಾರಾಟಗಾರರು ಪ್ರಯಾಣಿಕರನ್ನು ಹುಡುಕಿ ಬರುವರು.ಸಮವಸ್ತ್ರ ಧರಿಸಿ ಗುರುತುಚೀಟಿಯೊಂದಿಗೆ ಅವರು ಆಗಮಿಸಲಿದ್ದಾರೆ. ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಇದ್ದರೆ ಸಾಕು. ಇಷ್ಟ ಸಾಮಗ್ರಿಗಳನ್ನು ಖರೀದಿಸಬಹುದು. ಪ್ರಯಾಣಕ್ಕೆ ಅಡ್ಡಿಯಾಗದಂತೆ ಮಾರಾಟ ನಡೆಯಲಿದೆ.

ಪುಸ್ತಕ, ಆಟಿಕೆಗಳು, ಸರ, ಕಿವಿಯೋಲೆ ಮೊದಲಾದ ಆಭರಣಗಳು, ಸುಗಂಧ ದ್ರವ್ಯ, ಸ್ಟೇಶನರಿ ಸಾಮಗ್ರಿಗಳು ವಂದೇ ಭಾರತ್ ನ ಪ್ರಯಾಣಿಕರಿಗೆ ಖರೀದಿಸಬಹುದಾಗಿದೆ. ಹೊಸದಾಗಿ ಇರುವ ಈ ವ್ಯಾಪಾರವನ್ನು ಮುಂಬೈ ಕೇಂದ್ರೀಕರಿಸಿರುವ ಹದಿನಾರು ರೈಲುಗಳಲ್ಲಿ ರೈಲ್ವೆಯು ಈ ಹಿಂದೆ ಆರಂಭಿಸಿತ್ತು. ವೆಸ್ಟರ್ನ್ ರೈಲ್ವೆಯ ಈ ಯೋಜನೆಯನ್ನು ಇತರ ರೈಲ್ವೆ ವಲಯಗಳಿಗೆ ವಿಸ್ತರಿಸಲು ತೀರ್ಮಾನಿಸಲಾಗಿತ್ತು. ಪ್ರಮುಖ ಕಂಪನಿಗಳ ಉತ್ಪನ್ನಗಳು ಎಫ್ ಎಂಸಿಜಿ (ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ) ಪ್ರಯಾಣಿಕರಿಗೆ ತಲುಪಿಸುವುದು ಯೋಜನೆಯಾಗಿದೆ.
ಈ ವ್ಯವಸ್ಥೆಯ ಮೂಲಕ ಆಕರ್ಷಕವಾದ ಸೌಂದರ್ಯ ವರ್ಧಕ ವಸ್ತುಗಳು, ಅಡುಗೆ ಕೋಣೆ ಸಾಮಗ್ರಿಗಳು, ಫಿಟ್ ನೆಸ್ ಉಪಕರಣಗಳು ಖರೀದಿಗೆ ಲಭಿಸಲಿವೆ. ಕೇರಳ, ಗೋವಾ ರಾಜ್ಯಗಳ ಕರಕುಶಲ ವಸ್ತುಗಳೇ ಮೊದಲಾಗಿ ಮಾರುಕಟ್ಟೆಯ ಬಹುದೊಡ್ಡ ಸಾಧ್ಯತೆಯು ರೈಲ್ವೆಯ ಮುಂದಿದೆ.

ಚಿತ್ರ: 25ಕೆಎಸ್ ಎಲ್ ರೈಲು