*ಎಸ್ ಎಲ್ ವಿ ಮಹಿಳಾ ಮಾರ್ಟ್ , ಮಾರ್ಕೇಟಿಂಗ್ ಸಂಸ್ಥೆ ವಿರುದ್ಧ ಆರೋಪವಿಕ ಸುದ್ದಿಲೋಕ ಹಾವೇರಿ
ಎಸ್ ಎಲ್ ವಿ ಮಹಿಳಾ ಮಾರ್ಟ್ ಮತ್ತು ಮಾರ್ಕೇಟಿಂಗ್ ಸಂಸ್ಥೆಯು ಮನೆಯಲ್ಲೇ ಉದ್ಯೋಗ ನೀಡುವುದಾಗಿ ಮಹಿಳೆಯರಿಂದ ಕೋಟ್ಯಂತರ ರೂ. ಠೇವಣಿ ಸಂಗ್ರಹಿಸಿ ವಂಚನೆ ಮಾಡಿದೆ ಎಂದು ವಂಚನೆಗೊಳಗಾದ ಸಂತ್ರಸ್ತರ ಸಂಘಟನೆಯ ಮುಖ್ಯಸ್ಥ ಮಂಜುನಾಥ ಅರಳಿಕಟ್ಟಿ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘‘ಮಹಿಳೆಯರಿಗೆ ಊದಬತ್ತಿ, ಕರ್ಪೂರ ಪ್ಯಾಕಿಂಗ್ ಕೆಲಸವನ್ನು ಮನೆಯಲ್ಲಿಯೇ ನೀಡುವುದಾಗಿ ನಂಬಿಸಿ, 25 ಸಾವಿರದಿಂದ 10 ಲಕ್ಷದವರೆಗೆ ಠೇವಣಿ ಹಣ ಪಾವತಿಸಲು ಸೂಚಿಸಿದ್ದಾರೆ. ಠೇವಣಿ ಹಣದ ಆಧಾರದಲ್ಲಿಪ್ರತಿ ತಿಂಗಳು ಸಂಬಳ ಮತ್ತು ಲಾಭಾಂಶ ಕೊಡುವುದಾಗಿ ನಂಬಿಸಿದ್ದರಿಂದ ಬಹಳಷ್ಟು ಮಹಿಳೆಯರು ಹಣ ಡೆಪಾಸಿಟ್ ಮಾಡಿದ್ದಾರೆ. ಆರಂಭದಲ್ಲಿಮೂರ್ನಾಲ್ಕು ತಿಂಗಳು ಹಣ ನೀಡಿದ ಸಂಸ್ಥೆಯವರು ಬಳಿಕ ಏಕಾಏಕಿ ನಾಪತ್ತೆಯಾಗಿದ್ದಾರೆ’’ ಎಂದು ದೂರಿದರು.
‘‘ಕೆಲ ಕುಟುಂಬಗಳು 5 ಲಕ್ಷ ಸೇರಿದಂತೆ ಹೆಚ್ಚಿನ ಮೊತ್ತ ಹೂಡಿಕೆ ಮಾಡಿವೆ. ಸುಮಾರು ಒಂಭತ್ತು ತಿಂಗಳಿಂದ ಈ ಯೋಜನೆ ನಡೆಯುತ್ತಿದ್ದು, ಸಾವಿರಕ್ಕೂ ಹೆಚ್ಚು ಮಹಿಳೆಯರು ಸಂತ್ರಸ್ತರಾಗಿದ್ದಾರೆ. 10 ಕೋಟಿಗೂ ಅಧಿಕ ಮೊತ್ತದ ವಂಚನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಕಳೆದ ಜೂ.13ರಂದು ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿದೂರು ದಾಖಲಿಸಲಾಗಿದೆ. ಒಂದು ತಿಂಗಳು ಕಳೆದರೂ ಆರೋಪಿಗಳ ಬಂಧನವಾಗಿಲ್ಲ. ತನಿಖೆಯ ಪ್ರಗತಿ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ’’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘‘ಪ್ರಕರಣಕ್ಕೆ ಸಂಬಂಧಿಸಿ ನೆಲೋಗಲ್ ಮೂಲದ ವಿನಾಯಕ ಆನ್ವೇರಿ, ರಮ್ಯಾ ಜಿ., ವೀರೇಶ ಆನ್ವೇರಿ, ರಮ್ಯಾ ವೀರೇಶ ಆನ್ವೇರಿ, ಜಯಶ್ರೀ ಆನ್ವೇರಿ ಹಾಗೂ ಮಂಜುನಾಥ ಆನ್ವೇರಿ ವಿರುದ್ಧ ಆರೋಪ ಕೇಳಿಬಂದಿದೆ. ಜುಲೈ 7ರಂದು ಹಾನಗಲ್ಲರಸ್ತೆಯಲ್ಲಿಆರೋಪಿಗಳು ನಡೆದುಕೊಂಡು ಹೋಗುತ್ತಿರುವ ಸಿಸಿಟಿವಿ ದೃಶ್ಯಗಳು ಪತ್ತೆಯಾಗಿದ್ದು, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕವೂ ಸೂಕ್ತ ಕ್ರಮ ಕೈಗೊಂಡಿಲ್ಲ. ಪ್ರಕರಣದ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸಬೇಕು’’ ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿಶಾರದಾ, ಮಮತಾ ಮರೆಮ್ಮನವರ, ನವ್ಯಾ ಎಂ., ಭಾಗ್ಯಶ್ರೀ ಪರಸಣ್ಣನವರ, ಲತಾ ಸೂರಣಗಿ, ಹಲವರು ಇದ್ದರು.