ಜೆಸಿಐ ಕುಶಾಲನಗರ ಕಾವೇರಿಯಿಂದ ನಾನಾ ಸೌಲಭ್ಯ ವಿತರಣೆ

Contributed byvinu1273@gmail.com|Vijaya Karnataka
jci kushalnagar kaveri new initiatives for education and basic amenities
ವಿಕಸುದ್ದಿಲೋಕ ಕುಶಾಲನಗರ

ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ರಾಷ್ಟ್ರೀಯ ಉಪಾಧ್ಯಕ್ಷ ಜಿತೇಶ್ ಅಡ್ವಾಣಿ ಅವರ ಸಮ್ಮುಖದಲ್ಲಿಹಾಗೂ ವಲಯ ಅಧ್ಯಕ್ಷ ಪ್ರಜ್ವಲ್ ಎಸ್ . ಜೈನ್ ಅವರ ಉಪಸ್ಥಿತಿಯಲ್ಲಿವಿವಿಧ ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಅರ್ಥಪೂರ್ಣವಾಗಿ ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಹಾರಂಗಿ ಸರಕಾರಿ ಶಾಲೆಯಲ್ಲಿಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್ , ಸಿಸಿಟಿವಿ ಭದ್ರತಾ ವ್ಯವಸ್ಥೆ, ಶುದ್ಧ ಕುಡಿಯುವ ನೀರಿಗಾಗಿ ವಾಟರ್ ಪ್ಯೂರಿಫೈಯರ್ ಹಾಗೂ ಕುರ್ಚಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿಗೊಂದಿಬಸವನಹಳ್ಳಿ ಸರಕಾರಿ ಶಾಲೆಗೆ ವಾಟರ್ ಪ್ಯೂರಿಫೈಯರ್ ವಿತರಿಸಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಯಿತು. ಕೂಡಿಗೆ ದೇವಸ್ಥಾನದಲ್ಲಿವಾಟರ್ ಪ್ಯೂರಿಫೈಯರ್ ಅನ್ನು ಲೋಕಾರ್ಪಣೆ ಮಾಡಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಉಪಾಧ್ಯಕ್ಷ ಜೆ.ಎಸ್ .ಜಿತೇಶ್ ಅಡ್ವಾಣಿ, ‘‘ಸಮಾಜದ ಅಭಿವೃದ್ಧಿಗೆ ಶಿಕ್ಷಣ, ಆರೋಗ್ಯ ಹಾಗೂ ಮೂಲ ಸೌಲಭ್ಯಗಳ ವಿಸ್ತರಣೆ ಅತ್ಯಂತ ಅವಶ್ಯಕ. ಜೆಸಿಐ ಕುಶಾಲನಗರ ಕಾವೇರಿ ಕೈಗೊಳ್ಳುತ್ತಿರುವ ಇಂತಹ ಸಮಾಜಮುಖಿ ಸೇವಾ ಕಾರ್ಯಗಳು ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದ್ದು, ಸಮಾಜದ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತಿವೆ,’’ ಎಂದು ಪ್ರಶಂಸಿಸಿದರು.

ಹಾರಂಗಿ ಗ್ರಾಮದ ಮಾಜಿ ಜನಪ್ರತಿನಿಧಿ ಭಾಸ್ಕರ್ ನಾಯಕ್ ಮಾತನಾಡಿ, ‘‘ಜೆಸಿಐ ಕುಶಾಲನಗರ ಕಾವೇರಿಯಂತಹ ಸೇವಾ ಮನೋಭಾವದ ಸಂಘ-ಸಂಸ್ಥೆಗಳ ಸಹಕಾರದಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯವಾದ ಮೂಲ ಸೌಲಭ್ಯಗಳು ದೊರೆಯುತ್ತಿವೆ. ಈ ಯೋಜನೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿಮಹತ್ತರ ಪಾತ್ರವಹಿಸಲಿವೆ. ವಿಶೇಷವಾಗಿ ಈ ಶಾಲೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ವೈಯಕ್ತಿಕ ಆಸಕ್ತಿ ವಹಿಸಿ, ನಿರಂತರ ಮುತುವರ್ಜಿ ವಹಿಸಿ ಕಾರ್ಯಗತಗೊಳಿಸಿದ ಜೆಸಿಐ ಇಂಡಿಯಾ ವಲಯ-14ರ ವಲಯ ಅಧಿಕಾರಿಗಳ ಕಾಳಜಿ ಪ್ರಶಂಸನೀಯ,’’ ಎಂದರು.

ಅಧ್ಯಕ್ಷ ಶ್ರೀನಿವಾಸ್ ಮಾತನಾಡಿದರು. ಜೆಸಿಐ ಇಂಡಿಯಾ ವಲಯ-14ರ ವಲಯ ಅಧಿಕಾರಿ ರಜನಿಕಾಂತ್ .ಎಂ.ಜೆ, ತೇಜಾ ದಿನೇಶ್ , ಪೂರ್ವ ವಲಯ ಉಪಾಧ್ಯಕ್ಷ ಜಗದೀಶ್ ಬಿ, ಕಾರ್ಯದರ್ಶಿ ನಿಶಾಂತ್ ಶೌರ್ಯ, ಜೆಸಿಐ ಸದಸ್ಯರು, ಶನಿವಾರಸಂತೆ ಅಧ್ಯಕ್ಷ ರವಿ.ಸಿ, ಮುಖ್ಯಶಿಕ್ಷಕರು, ಶಿಕ್ಷಕರು, ಗ್ರಾಮಸ್ಥರು, ಭಕ್ತಾದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

14 ಕೆಯುಎಸ್ 04 ಚಿತ್ರದಲ್ಲಿ

ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ವಿವಿಧ ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಯಿತು.