ಕರ್ನಾಟಕದ ಕರಾವಳಿ ಹಾಗೂ ಕಾಸರಗೋಡು ಜಿಲ್ಲೆಯಲ್ಲಿಪ್ರಸಿದ್ಧವಾಗಿರುವ ನೃತ್ಯ, ಸಂಗೀತ ಮತ್ತು ಅಭಿನಯ ಸಮ್ಮಿಳಿತಗೊಂಡ ತನತು ಕಲಾಪ್ರಕಾರ ಯಕ್ಷಗಾನದ ಸಂರಕ್ಷಣೆಗೆ ಸೂಕ್ತ ಪುನರುಜ್ಜೀವನ ಯೋಜನೆಗಳನ್ನು ಜಾರಿಗೆ ತರಬೇಕೆಂದು ಕುಂಬಳೆಯ ಸ್ಥಳೀಯ ಕಲಾವಿದರು ಮತ್ತು ಸಾಂಸ್ಕೃತಿಕ ಕಾರ್ಯಕರ್ತರು ತೀವ್ರವಾಗಿ ಆಗ್ರಹಿಸಿದ್ದಾರೆ.ಕುಂಬಳೆ ಮುಜುಂಗಾವಿನಲ್ಲಿರುವ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರವನ್ನು (ಅಕಾಡೆಮಿ) 2013ರಲ್ಲಿಆರಂಭಿಸಲಾಯಿತಾದರೂ, ಸೂಕ್ತ ನಿರ್ವಹಣೆ ಮತ್ತು ಅಭಿವೃದ್ಧಿ ಕ್ರಮಗಳಿಲ್ಲದೆ ಈ ಕೇಂದ್ರವು ಸುದೀರ್ಘ ಕಾಲದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಅವಸರದಲ್ಲಿಉದ್ಘಾಟನೆಗೊಂಡಿದ್ದ ಈ ಕೇಂದ್ರಕ್ಕೆ ನಂತರದ ದಿನಗಳಲ್ಲಿಯಾವುದೇ ಅನುದಾನ ಅಥವಾ ಯೋಜನೆಗಳು ಸಿಗಲಿಲ್ಲ. ಪರಿಣಾಮವಾಗಿ ಕುಂಬಳೆಯ ಈ ಸಾಂಸ್ಕೃತಿಕ ಕೇಂದ್ರವು ಅರ್ಧಕ್ಕೆ ಕೈ ಬಿಡಲ್ಪಟ್ಟು, ಪ್ರಸ್ತುತ ಪೊದೆಗಳಿಂದ ಆವೃತವಾಗಿ ನಾಶದ ಅಂಚಿನಲ್ಲಿದೆ. ರಾತ್ರಿ ವೇಳೆ ಇದು ಸಮಾಜಘಾತಕ ಶಕ್ತಿಗಳ ಅಡ್ಡಾವಾಗಿ ಬದಲಾಗುತ್ತಿದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
ಹೊಸ ಸರಕಾರದ ಮೇಲೆ ಕಲಾವಿದರ ನಿರೀಕ್ಷೆ: ಕಳೆದ ಒಂದು ದಶಕದಿಂದ ಯಕ್ಷಗಾನ ಅಕಾಡೆಮಿಯ ಪುನರುಜ್ಜೀವನಕ್ಕಾಗಿ ಕಲಾವಿದರು ಹಾಗೂ ಸಾಂಸ್ಕೃತಿಕ ಕಾರ್ಯಕರ್ತರು ಅಧಿಕಾರಿಗಳಿಗೆ ನಿರಂತರ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಕಳೆದ ಸರಕಾರದ ಅವಧಿಯಲ್ಲಿಮುಖ್ಯಮಂತ್ರಿ ಸೇರಿದಂತೆ ಹಲವರಿಗೆ ಮನವಿ ಸಲ್ಲಿಸಲಾಗಿತ್ತು. ಇದರ ಫಲವಾಗಿ ಹಿಂದಿನ ಸರಕಾರದ ಕೊನೆ ದಿನಗಳಲ್ಲಿಕಲಾ ಕ್ಷೇತ್ರದ ನವೀಕರಣಕ್ಕಾಗಿ 2 ಲಕ್ಷ ರೂ. ಕಾಯ್ದಿರಿಸಲಾಯಿತಾದರೂ, ಆ ಯೋಜನೆಯೂ ಕಾರ್ಯರೂಪಕ್ಕೆ ಬರಲಿಲ್ಲ.
ಇದೀಗ ನೂತನ ಸರಕಾರ ಅಧಿಕಾರಕ್ಕೆ ಬಂದಿದ್ದು, ಸಾಂಸ್ಕೃತಿಕ ವ್ಯವಹಾರಗಳ ಸಚಿವರಾದ ಪಿ.ಸಿ. ಕೃಷ್ಣನಾಥ್ ಅವರಿಗೆ ಕುಂಬಳೆ ಪ್ರದೇಶದೊಂದಿಗೆ ನಿಕಟ ಸಂಪರ್ಕವಿದೆ. ಆದ್ದರಿಂದ ಮಂಜೇಶ್ವರ ಶಾಸಕರಾದ ಎ.ಕೆ.ಎಂ. ಅಶ್ರಫ್ ಅವರು ಕಲಾಕ್ಷೇತ್ರದ ಪುನರುಜ್ಜೀವನಕ್ಕಾಗಿ ಸರಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿದರೆ, ತುಳುನಾಡಿನ ತನತು ಕಲೆಯಾದ ಯಕ್ಷಗಾನ ಹಾಗೂ ಯಕ್ಷಗಾನ ಪಿತಾಮಹ ಪಾರ್ತಿಸುಬ್ಬ ಅವರ ಪರಂಪರೆಯನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಸ್ಥಳೀಯ ಕಲಾವಿದರು ಭರವಸೆ ವ್ಯಕ್ತಪಡಿಸಿದ್ದಾರೆ.