ಶಾಲೆ ಕಸ ಗುಡಿಸಲು, ಶೌಚಾಲಯ ಸ್ವಚ್ಛಗೊಳಿಸಲು ಸಿಬ್ಬಂದಿ ಇಲ್ಲ, ಕಿರು ಪರೀಕ್ಷೆ-ಅರ್ಧವಾರ್ಷಿಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ಪ್ರತಿಗಳಿಗೆ ಹಣ ಕೊಡುವುದಿಲ್ಲ, ಕ್ರೀಡೆ ಮತ್ತು ಸಾಂಸ್ಕೃತಿಕ ಅನುದಾನ ಪ್ರಾತಿನಿಧಿಕ ಶುಲ್ಕಕ್ಕೂ ಸಾಲುವುದಿಲ್ಲ, ವಾರ್ಷಿಕೋತ್ಸವ, ಕ್ರೀಡಾಕೂಟಕ್ಕೂ ಹಣ ಇಲ್ಲ, ಸಭೆ, ಸಮಾರಂಭ, ಗೋಷ್ಠಿಗಳಿಗೂ ಅನುದಾನ ಇಲ್ಲ.
ಹೀಗಿದ್ದರೂ ಶಾಲೆಗಳಲ್ಲಿಶಿಕ್ಷಣದ ಗುಣಮಟ್ಟ ಕಾಪಾಡಬೇಕು, ಶಾಲೆ ಆವರಣವನ್ನು ಸುಂದರಗೊಳಿಸಬೇಕು, ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿಸಾಧನೆ ಮಾಡಬೇಕು, ಶೇ.100 ಫಲಿತಾಂಶ ತರಬೇಕು.
150 ಮಕ್ಕಳ ಸರಕಾರಿ ಪ್ರೌಢಶಾಲೆಯಲ್ಲಿಎಲ್ಲರೀತಿಯ ಚಟುವಟಿಕೆ ನಡೆಸಿಕೊಂಡು ಹೋಗಲು ವಾರ್ಷಿಕ 75 ಸಾವಿರದಿಂದ 1 ಲಕ್ಷ ರೂ. ವೆಚ್ಚ ಬರುತ್ತದೆ. ಎಲ್ಲಮೂಲಗಳಿಂದಲೂ ಸರಕಾರದಿಂದ ಶಾಲೆಗಳಿಗೆ ಬರುವ ವಾರ್ಷಿಕ ಅನುದಾನ 20 ಸಾವಿರ ರೂ.ಗಳಿಗಿಂತ ಕಡಿಮೆ. ಹೀಗಿರುವಾಗ ಸರಕಾರಿ ಶಾಲೆಗಳನ್ನು ಸುಂದರಗೊಳಿಸುವುದು, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿಸಾಧನೆ ಮಾಡುವುದು, ಯಾವುದೇ ಗೋಷ್ಠಿಗಳನ್ನು ಆಯೋಜಿಸದೆ ಮಕ್ಕಳನ್ನು ಹೊಸ ದಿಕ್ಕಿಗೆ ತೆರೆದುಕೊಳ್ಳುವಂತೆ ಮಾಡುವುದು ಹೇಗೆ? ಇದು ಸರಕಾರಿ ಶಾಲೆಗಳ ಮುಖ್ಯ ಶಿಕ್ಷಕರ ಅಳಲು.
ಸರಕಾರ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಶೂ, ಮಧ್ಯಾಹ್ನದ ಬಿಸಿಯೂಟ, ಪೌಷ್ಟಿಕ ಆಹಾರವನ್ನು ಒದಗಿಸುತ್ತಿದೆ. ಆದರೆ, ಶಾಲೆಗಳ ಸಮಗ್ರ ನಿರ್ವಹಣೆಗೆ ಬೇಕಾದ ಅನುದಾನವನ್ನೇ ಕೊಡುತ್ತಿಲ್ಲ. ಮಕ್ಕಳು ಕಸ ಗುಡಿಸಿದರೆ, ಶಾಲೆ ಆವರಣದಲ್ಲಿಕೆಲಸ ಮಾಡಿಸಿದರೆ ಮುಖ್ಯ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಕಸ ಗುಡಿಸಲು ಮತ್ತು ಶೌಚಾಲಯ ಸ್ವಚ್ಛಗೊಳಿಸಲು ಸ್ಥಳೀಯವಾಗಿ ನೇಮಕ ಮಾಡಿಕೊಂಡು ವೇತನ ಕೊಡಬೇಕು. ಮಕ್ಕಳನ್ನು ವಿವಿಧ ಮಟ್ಟದ ಕ್ರೀಡಾಕೂಟ, ಪ್ರತಿಭಾ ಕಾರಂಜಿ ಸ್ಪರ್ಧೆಗಳಿಗೆ ಕರೆದೊಯ್ಯಬೇಕು. ವರ್ಷಕ್ಕೊಮ್ಮೆ ಕ್ರೀಡಾ ಮತ್ತು ವಾರ್ಷಿಕೋತ್ಸವ ನಡೆಸಬೇಕು. ಕಿರು ಪರೀಕ್ಷೆ, ಅರ್ಧವಾರ್ಷಿಕ ಮತ್ತು ವಾರ್ಷಿಕ ಪರೀಕ್ಷೆಗಳನ್ನು ನಡೆಸಬೇಕು.
ಈ ಎಲ್ಲವೆಚ್ಚವನ್ನು ದಾನಿಗಳಿಂದ ಭರಿಸಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಎಲ್ಲದಕ್ಕೂ ದಾನಿಗಳ ಬಳಿ ಹೇಗೆ ಹೋಗುವುದೆಂದು ಸ್ವಲ್ಪಮಟ್ಟಿನ ವೆಚ್ಚ ಭರಿಸುವ ಸಲುವಾಗಿ ಬಹಳಷ್ಟು ಶಾಲಾಭಿವೃದ್ಧಿ ಸಮಿತಿಗಳು ವಿದ್ಯಾರ್ಥಿಗಳಿಂದ ವಾರ್ಷಿಕ 300ರಿಂದ 500 ರೂ. ಶುಲ್ಕ ಸಂಗ್ರಹಿಸುತ್ತಿವೆ. ಅದರಲ್ಲೂಬಹಳಷ್ಟು ಮಕ್ಕಳ ಪೋಷಕರಿಗೆ ಈ ಶುಲ್ಕವನ್ನೂ ಪಾವತಿಸುವ ಸಾಮರ್ಥ್ಯ ಇರುವುದಿಲ್ಲ. 100 ಮಕ್ಕಳ ಶಾಲೆಯಲ್ಲಿ50 ಮಕ್ಕಳು ಶುಲ್ಕ ಪಾವತಿಸಿದರೆ ಹೆಚ್ಚು. ನಿಯಮಬಾಹಿರವೆಂಬ ನೆಪವೊಡ್ಡಿ ಕೆಲವರು ಮುಖ್ಯ ಶಿಕ್ಷಕರ ವಿರುದ್ಧ ದೂರು ನೀಡುವ, ಅಧಿಕಾರಿಗಳು ಮುಖ್ಯ ಶಿಕ್ಷಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ, ಸುಲಿಗೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ.
ಶಾಲೆಗಳ ನಿರ್ವಹಣೆಗೆ ಶಾಲಾಭಿವೃದ್ಧಿ ಸಮಿತಿಯು ಶುಲ್ಕ ಸಂಗ್ರಹಿಸಲು ಅವಕಾಶ ನೀಡಬೇಕು. ಇಲ್ಲವಾದಲ್ಲಿಸರಕಾರವೆ ಶಾಲೆಯ ಎಲ್ಲವೆಚ್ಚಗಳನ್ನು ಭರಿಸುವಂತಾಗಬೇಕು ಎಂಬುದು ಶಾಲಾಭಿವೃದ್ಧಿ ಸಮಿತಿಗಳ ಒತ್ತಾಯ. ಮಟ್ಟದ ಕ್ರೀಡಾಕೂಟ ಮತ್ತು ಪ್ರತಿಭಾ ಕಾರಂಜಿಗೆ ಇಲಾಖೆ ನೀಡುವ ಅನುದಾನ ಪ್ರಾತಿನಿಧಿಕ ಶುಲ್ಕಕ್ಕೂ ಸಾಲುವುದಿಲ್ಲ. ಇನ್ನು ಮಕ್ಕಳ ಸಾರಿಗೆ, ಮಧ್ಯಾಹ್ನದ ಊಟ, ಸಮವಸ್ತ್ರ, ಕಾಸ್ಟ್ಯೂಮ್ಸ್ , ಕ್ಲೇ ಮಾಡೆಲಿಂಗ್ , ಡ್ರಾಯಿಂಗ್ ಶೀಟ್ ಮತ್ತು ಇತರೆ ಪರಿಕರಗಳ ವೆಚ್ಚವನ್ನು ಭರಿಸುವುದು ಯಾರು? ಇನ್ನು 4 ಕಿರು ಪರೀಕ್ಷೆಗಳು, ಅರ್ಧವಾರ್ಷಿಕ ಮತ್ತು ವಾರ್ಷಿಕ ಕಿರು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಪ್ರಿಂಟ್ ತೆಗೆಯಲು ಮತ್ತು ಉತ್ತರ ಪತ್ರಿಕೆಗಳಿಗೆ ಒಬ್ಬ ವಿದ್ಯಾರ್ಥಿಗೆ ಕನಿಷ್ಠ 200 ರೂ.ನಂತೆ 100 ವಿದ್ಯಾರ್ಥಿಗಳಿಗೆ ವಾರ್ಷಿಕ 20ಸಾವಿರ ರೂ. ವೆಚ್ಚ ಬರುತ್ತದೆ.
-----------
ಪ್ರೌಢಶಾಲೆಗಳಲ್ಲಿಪ್ರವೇಶ ಶುಲ್ಕ
ಕ್ರೀಡಾ ನಿಧಿ- 20 ರೂ.
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ- 15 ರೂ.
ಶಿಕ್ಷಕರ ಕಲ್ಯಾಣ ನಿಧಿ- 15 ರೂ.
ಶಿಕ್ಷಕರ ದಿನಾಚರಣೆ ಬಾವುಟ- 10 ರೂ.
---------------
ಶಾಲೆಗಳಿಗೆ ಇಲಾಖೆ ನೀಡುವ ಅನುದಾನ
ಕ್ರೀಡೆ- ಪ್ರತಿ ವಿದ್ಯಾರ್ಥಿಗೆ 20 ರೂ.
ಸಾಂಸ್ಕೃತಿಕ ಕಾರ್ಯಕ್ರಮಗಳು- ಪ್ರತಿ ವಿದ್ಯಾರ್ಥಿಗೆ 15 ರೂ.
ಶೌಚಾಲಯ ನಿರ್ವಹಣೆಗೆ ವಾರ್ಷಿಕ- 10 ಸಾವಿರ ರೂ.
-----------
ಶಾಲೆಯಲ್ಲಿನ ವೆಚ್ಚಗಳು(100 ವಿದ್ಯಾರ್ಥಿಗಳಿಗೆ)
ಕ್ರೀಡಾಕೂಟ- 10 ಸಾವಿರ ರೂ.
ಪ್ರತಿಭಾ ಕಾರಂಜಿ- 10 ಸಾವಿರ ರೂ.
ಪರೀಕ್ಷೆ ಪರಿಕರ- 20 ಸಾವಿರ ರೂ.
ವಾರ್ಷಿಕೋತ್ಸವ- 25 ಸಾವಿರ ರೂ.
ಇತರೆ ವೆಚ್ಚಗಳು- 20ಸಾವಿರ ರೂ.
-----------------
ಶಾಲಾಭಿವೃದ್ಧಿ ಸಮಿತಿಗಳ ಮೂಲಕ ಶುಲ್ಕ ವಸೂಲಿಗೆ ನಿಯಮದಲ್ಲಿಅವಕಾಶ ಇಲ್ಲ. ಪ್ರತಿಯೊಂದು ವೆಚ್ಚಕ್ಕೂ ದಾನಿಗಳನ್ನೇ ಕೇಳುವುದು ಕಷ್ಟದ ಸಂಗತಿ ಎಂಬುದು ಗೊತ್ತು. ಬಹಳಷ್ಟು ಎಸ್ ಡಿಎಂಸಿಗಳು ಅತ್ಯುತ್ತಮ ಕಾರ್ಯನಿರ್ವಹಣೆ ಮಾಡುತ್ತಿವೆ. ಶಾಲೆಗಳಲ್ಲಿನ ವೆಚ್ಚಕ್ಕೆ ಅನುಗುಣವಾಗಿ ಕಡ್ಡಾಯವಲ್ಲದ ಅಲ್ಪ ಮೊತ್ತದ ಶುಲ್ಕ ಸಂಗ್ರಹಕ್ಕೆ ಅವಕಾಶ ಮಾಡಿಕೊಡುವ ನಿಯಮ ರಚನೆ ಒಳ್ಳೆಯದು. ಇದರ ಬಗ್ಗೆ ಸರಕಾರದ ಮಟ್ಟದಲ್ಲಿಚರ್ಚಿಸಲಾಗುವುದು.