ರಾಜ್ಯ ರಾಜಕಾರಣದ ಹಿರಿಯ ಮುತ್ಸದ್ದಿ, ಮಾಜಿ ಸಚಿವ ಹಾಗೂ ವಿಧಾನಸಭೆಯ ಮಾಜಿ ಉಪಸಭಾಪತಿ ಸಿ. ವೀರಣ್ಣ (89) ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾದರು.ಕೊರಟಗೆರೆ ತಾಲೂಕಿನ ಸ್ವಗ್ರಾಮ ಬುಕ್ಕಾಪಟ್ಟಣದ ತಮ್ಮ ನಿವಾಸದಲ್ಲಿಶುಕ್ರವಾರ ರಾತ್ರಿ 11.30ಕ್ಕೆ ವಿಧಿವಶರಾದರು. ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆದ ಬಳಿಕ ತೋಟದ ಮನೆಯಲ್ಲಿವಿಶ್ರಾಂತಿ ಪಡೆಯುತ್ತಿದ್ದರು.
ಸಿ. ವೀರಣ್ಣ ಅವರು 1983 ಹಾಗೂ 1985ರ ವಿಧಾನಸಭೆ ಚುನಾವಣೆಯಲ್ಲಿಜನತಾ ಪಕ್ಷದಿಂದ ಸ್ಪರ್ಧಿಸಿ ಕೊರಟಗೆರೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ರಾಮಕೃಷ್ಣ ಹೆಗಡೆ ಹಾಗೂ ಎಸ್ .ಆರ್ . ಬೊಮ್ಮಾಯಿ ಅವರ ಸಚಿವ ಸಂಪುಟಗಳಲ್ಲಿಸಣ್ಣ ಉಳಿತಾಯ, ಲಾಟರಿ, ಬಂದೀಖಾನೆ, ವಾಣಿಜ್ಯ ಮತ್ತು ಕೈಗಾರಿಕೆ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದರು. 1983ರಲ್ಲಿಉಪಸಭಾಪತಿ ಆಗಿದ್ದರು.
ಸಣ್ಣ ಉಳಿತಾಯ ಸಚಿವರಾಗಿದ್ದ ಅವಧಿಯಲ್ಲಿಕರ್ನಾಟಕವನ್ನು ದೇಶದಲ್ಲೇ ಸಣ್ಣ ಉಳಿತಾಯ ಸಂಗ್ರಹದಲ್ಲಿಮೊದಲ ಸ್ಥಾನಕ್ಕೆ ಕೊಂಡೊಯ್ಯುವಲ್ಲಿಮಹತ್ವದ ಪಾತ್ರ ವಹಿಸಿದ್ದರು. ಆಡಳಿತಾತ್ಮಕ ದಕ್ಷತೆ, ಪ್ರಾಮಾಣಿಕತೆ ಮತ್ತು ಅಭಿವೃದ್ಧಿ ಪರ ಚಿಂತನೆಗಾಗಿ ಗುರುತಿಸಿಕೊಂಡಿದ್ದರು.
ಇವರಿಗೆ ಪತ್ನಿ ಕಾವಲಮ್ಮ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಅಳಿಯ ಮಾಜಿ ಸಂಸದ ವಿ.ಎಸ್ .ಉಗ್ರಪ್ಪ ಸೇರಿದಂತೆ ಅಪಾರ ಬಂಧು-ಬಳಗ ಇದ್ದಾರೆ. ಶನಿವಾರ ಸಂಜೆ ಸ್ವ ಗ್ರಾಮದಲ್ಲಿಅಂತ್ಯಕ್ರಿಯೆ ನೆರವೇರಿತು. ಸಿಎಂ ಡಿ.ಕೆ.ಶಿವಕುಮಾರ್ , ಡಿಸಿಎಂ ಡಾ.ಜಿ.ಪರಮೇಶ್ವರ್ , ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.