* ಕಲಬುರಗಿ ಬರಪೀಡಿತ ಪ್ರದೇಶವೆಂದು ಘೋಷಿಸಿಪ್ರತಿ ಎಕರೆಗೆ 50 ಸಾವಿರ ಪರಿಹಾರಕ್ಕೆ ಆಗ್ರಹ
ವಿಕ ಸುದ್ದಿಲೋಕ ಚಿಂಚೋಳಿ
ಈ ವರ್ಷ ಮುಂಗಾರು ಕೈಕೊಟ್ಟ ಪರಿಣಾಮ ಕಲಬುರಗಿ ಜಿಲ್ಲಾದ್ಯಂತ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರಕಾರ ತಕ್ಷಣವೇ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಬೆಳೆ ನಷ್ಟಕ್ಕೊಳಗಾದ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ಪರಿಹಾರ ನೀಡಬೇಕೆಂದು ಬಿಜೆಪಿ ಮುಖಂಡ ಹಾಗೂ ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ಶಿವಶರಣಪ್ಪ ಕುಂಬಾರ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಬಹುತೇಕ ಗ್ರಾಮಗಳಲ್ಲಿನಿರೀಕ್ಷಿತ ಪ್ರಮಾಣದಲ್ಲಿಮಳೆಯಾಗದ ಕಾರಣ ಬಿತ್ತನೆ ಮಾಡಿದ ತೊಗರಿ, ಉದ್ದು, ಹೆಸರು ಸೇರಿ ನಾನಾ ಬೆಳೆಗಳು ಒಣಗುತ್ತಿವೆ. ಹಲವೆಡೆ ಮೊಳಕೆಯಾದ ಬೆಳೆಗಳು ಬೆಳವಣಿಗೆ ಕಾಣದೆ ಒಣಗಿದ್ದು, ಮರುಬಿತ್ತನೆಗೂ ಅವಕಾಶವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರು ಭಾರಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಕೃಷಿ ಕೂಲಿಕಾರರಿಗೂ ಉದ್ಯೋಗದ ಕೊರತೆ ಉಂಟಾಗಿದೆ. ರೈತರು ಈಗಾಗಲೇ ಬೀಜ, ರಸಗೊಬ್ಬರ, ಕೀಟನಾಶಕ ಹಾಗೂ ಕೃಷಿ ಚಟುವಟಿಕೆಗಳಿಗೆ ಲಕ್ಷಾಂತರ ರೂ., ಹೂಡಿಕೆ ಮಾಡಿದ್ದು, ಮಳೆ ಕೊರತೆಯಿಂದ ಆ ಹೂಡಿಕೆಯೆಲ್ಲವೂ ವ್ಯರ್ಥವಾಗುವ ಆತಂಕ ಎದುರಾಗಿದೆ. ಬೆಳೆ ಕೈಕೊಟ್ಟಿರುವುದರಿಂದ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಹಾಗೂ ಸಾಲ ಮರುಪಾವತಿಯೂ ಕಷ್ಟಕರವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿಸರಕಾರ ತಕ್ಷಣವೇ ವಿಶೇಷ ಬೆಳೆ ಹಾನಿ ಸಮೀಕ್ಷೆ ನಡೆಸಿ, ನೈಜ ಸ್ಥಿತಿಗತಿಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಘೋಷಿಸಬೇಕು. ಜತೆಗೆ ರೈತರ ಬೆಳೆ ಸಾಲ ಹಾಗೂ ಸಹಕಾರಿ ಸಾಲಗಳನ್ನು ಮನ್ನಾ ಮಾಡಿ, ಬೆಳೆ ವಿಮೆ ಮೊತ್ತವನ್ನು ವಿಳಂಬವಿಲ್ಲದೆ ರೈತರ ಖಾತೆಗೆ ಜಮಾ ಮಾಡಬೇಕೆಂದು ಒತ್ತಾಯಿಸಲಾಗಿದೆ.