ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕೌಶಲಕ್ಕೆ ಸಂಬಂಧಿಸಿದ ಮೂರು, ಆರು ತಿಂಗಳ ಅವಧಿಯ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಶೀಘ್ರದಲ್ಲೇ ಆರಂಭಿಸಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜ್ಞಾನಪ್ರಕಾಶ್ ತಿಳಿಸಿದರು.ಕರ್ನಾಟಕ ಮುಕ್ತ ವಿವಿ ಮೂರು ದಶಕಗಳನ್ನು ಪೂರೈಸಿದ ಹಿನ್ನೆಲೆಯಲ್ಲಿಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ‘‘ ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಎಂಬ ಧ್ಯೇಯ ವಾಕ್ಯದೊಂದಿಗೆ ವಿವಿ ಕಾರ್ಯನಿರ್ವಹಿಸುತ್ತಿದೆ. 2026-27ನೇ ಸಾಲಿನ ಪ್ರವೇಶ ಪ್ರಕ್ರಿಯೆ ಶುರುವಾಗಿದ್ದು, 65 ವಿವಿಧ ಕೋರ್ಸ್ ಗಳಿಗೆ ಆಸಕ್ತರು ಸೆಪ್ಟೆಂಬರ್ ವರೆಗೂ ಪ್ರವೇಶ ಪಡೆಯಬಹುದು,’’ ಎಂದರು.
‘‘ಉನ್ನತ ಶಿಕ್ಷಣ ಪಡೆಯಲು ಮೈಸೂರಿಗೆ ಬರಬೇಕಿಲ್ಲ. ಆಯಾ ಪ್ರಾದೇಶಿಕ ಕೇಂದ್ರಗಳಲ್ಲೇ ಆನ್ ಲೈನ್ ಮೂಲಕ ಪ್ರವೇಶ ಪಡೆದು ವ್ಯಾಸಂಗ ಮಾಡಬಹುದು. ತೃತೀಯ ಲಿಂಗಿಗಳು, ಶೇ.50ರಷ್ಟು ದೃಷ್ಟಿದೋಷ ಹೊಂದಿರುವ ವಿದ್ಯಾರ್ಥಿಗಳು ಹಾಗೂ ಕೋವಿಡ್ ವೇಳೆ ಪೋಷಕರನ್ನು ಕಳೆದುಕೊಂಡವರಿಗೆ ಪೂರ್ಣ ಪ್ರಮಾಣದಲ್ಲಿಶುಲ್ಕ ವಿನಾಯಿತಿ ನೀಡಲಾಗಿದೆ,’’ ಎಂದು ಅವರು ವಿವರಿಸಿದರು.
‘‘1993ರಲ್ಲಿಸ್ಥಾಪನೆಗೊಂಡ ಕರಾಮುವಿ ಮೂರು ದಶಕಗಳನ್ನು ಪೂರೈಸಿದೆ. ನ್ಯಾಕ್ ನಿಂದ ಎ+ ಮಾನ್ಯತೆ ಪಡೆದಿರುವ ವಿವಿಯಲ್ಲಿ10 ಆನ್ ಲೈನ್ ಕೋರ್ಸ್ ಗಳನ್ನು ಕೂಡ ಹೊಸದಾಗಿ ಪರಿಚಯಿಸಲಾಗಿದೆ. ಎಲ್ಲಾವಿಶ್ವವಿದ್ಯಾಲಯಗಳಂತೆ ಪ್ರತಿ ವರ್ಷವೂ ಯುಜಿಸಿ ನಿಯಮಗಳಂತೆ ಸಂಶೋಧನೆಗೆ ಅವಕಾಶ ನೀಡಲಾಗುತ್ತಿದೆ,’’ ಎಂದರು.
‘‘2026-27ನೇ ಸಾಲಿಗೆ ಪ್ರವೇಶ ಆರಂಭವಾಗಿದ್ದು, ಯುಜಿಸಿ ಅನುಮೋದಿತ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳನ್ನು ನೀಡಲಾಗುತ್ತಿದೆ. ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್ ಡಬ್ಲ್ಯೂ, ಬಿಎಲ್ ಐಎಸ್ಸಿ, ಎಂಎ, ಎಂಸಿಜೆ, ಎಂಕಾಂ, ಎಂಎಲ್ ಐಎಸ್ಸಿ, ಎಂಸಿಎ, ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಪ್ರೋಗ್ರಾಂಗಳಿಗೆ ಎಲ್ಲಾಪ್ರಾದೇಶಿಕ ಕೇಂದ್ರಗಳಲ್ಲಿಪ್ರವೇಶಾತಿಗೆ ಅವಕಾಶವಿದೆ,’’ ಎಂದು ತಿಳಿಸಿದರು.
ಡೀನ್ ಗಳಾದ ಡಾ.ಎನ್ .ಆನಂದಗೌಡ, ಎಂ.ರಾಮಾನಾಥಮ್ ನಾಯ್ಡು ಪತ್ರಿಕಾಗೋಷ್ಠಿಯಲ್ಲಿಉಪಸ್ಥಿತರಿದ್ದರು.
ಬಾಕ್ಸ್
ಆನ್ ಲೈನ್ ನಲ್ಲೂಪರೀಕ್ಷೆ
ಕಳೆದ ವರ್ಷ 10 ವಿಷಯಗಳಲ್ಲಿಆನ್ ಲೈನ್ ಕೋರ್ಸ್ ಆರಂಭಿಸಿದ್ದ ಮುಕ್ತ ವಿಶ್ವವಿದ್ಯಾಲಯ, ಈ ಬಾರಿ 30 ಸಾವಿರ ಅಭ್ಯರ್ಥಿಗಳಿಗೆ ಪ್ರವೇಶ ನೀಡುವ ಗುರಿ ಹೊಂದಿದೆ. ಆನ್ ಲೈನ್ ಮೂಲಕ ಪರೀಕ್ಷೆ ನಡೆಸಲು ಕೂಡ ಸಿದ್ಧತೆ ನಡೆಸಲಾಗುತ್ತಿದ್ದು, ತಂತ್ರಾಂಶ ಅಭಿವೃದ್ಧಿಗೆ ಹೊರಗುತ್ತಿಗೆ ನೀಡಲಾಗಿದೆ ಎಂದು ಪ್ರೊ. ಜ್ಞಾನಪ್ರಕಾಶ್ ತಿಳಿಸಿದರು.
ಬಾಕ್ಸ್
ಏಕಕಾಲದಲ್ಲಿಎರಡು ಪದವಿ
ದೂರಶಿಕ್ಷಣದ ಮೂಲಕ ಏಕಕಾಲದಲ್ಲಿಎರಡು ಪದವಿ ಪಡೆಯಲು ಹಾಗೂ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿದ್ದರೆ ಲ್ಯಾಟರಲ್ ಪ್ರವೇಶದ ಮೂಲಕ ಮುಂದುವರಿಸಲು ಮುಕ್ತ ವಿಶ್ವವಿದ್ಯಾಲಯ ಅವಕಾಶ ನೀಡಿದೆ.