ವಿಕ ಸುದ್ದಿಲೋಕ ಕೆ.ಆರ್ .ಪೇಟೆ 2028ಕ್ಕೆ ಚುನಾವಣಾ ರಾಜಕೀಯದಿಂದ ದೂರ ಉಳಿಯುತ್ತೇನೆ. ಆದರೆ, ಸಕ್ರಿಯ ರಾಜಕಾರಣದಲ್ಲಿರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಟ್ಟಣದಲ್ಲಿಕೃಷ್ಣ ಪ್ರತಿಷ್ಠಾನ ವತಿಯಿಂದ ಮಾಜಿ ಸ್ಪೀಕರ್ ಕೃಷ್ಣ ಅವರ 86ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಶನಿವಾರ ಆಯೋಜಿಸಿದ್ದ ‘ಕೃಷ್ಣ ಪುರಸ್ಕಾರ’ ಕಾರ್ಯಕ್ರಮದಲ್ಲಿಮಾತನಾಡಿದ ಅವರು,‘‘ಇಂದಿನ ರಾಜಕೀಯ ವ್ಯವಸ್ಥೆ ಕಲುಷಿತವಾಗಿದೆ. ಕೃಷ್ಣ ಮತ್ತು ನಾನು ಸಮಕಾಲೀನ ರಾಜಕಾರಣಿಗಳು. ಹಿಂದೆ ನಾವು ಚುನಾವಣೆಗೆ ನಿಂತರೆ ಜನರೆ ದುಡ್ಡು ಕೊಟ್ಟು ಗೆಲ್ಲಿಸುತ್ತಿದ್ದರು. ಕೃಷ್ಣ ಕೂಡ ಎಂದಿಗೂ ಕಾಸು ಕೊಟ್ಟು ರಾಜಕೀಯ ಮಾಡಿದವರಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ಜನರಿಗೆ ನಾವೇ ದುಡ್ಡುಕೊಟ್ಟು ಚುನಾವಣೆ ನಡೆಸಬೇಕು. ಈ ವ್ಯವಸ್ಥೆಯಿಂದ ಬೇಸತ್ತು ಕೃಷ್ಣ ಬಹಳ ಹಿಂದೆಯೇ ರಾಜಕೀಯ ನಿವೃತ್ತಿ ಪಡೆದಿದ್ದರು. ಆದರೆ, ಪರಿಸ್ಥಿತಿಯ ಒತ್ತಡದಲ್ಲಿ ನಾನಿನ್ನೂ ರಾಜಕಾರಣದಲ್ಲಿದ್ದೇನೆ. 2028ಕ್ಕೆ ನಾನೂ ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುತ್ತೇನೆ. ಇಂದಿನ ವ್ಯವಸ್ಥೆಗೆ ಯಾರನ್ನು ದೂರಿದರೂ ಪ್ರಯೋಜನವಿಲ್ಲ,’’ಎಂದು ಅಭಿಪ್ರಾಯಪಟ್ಟರು. ‘‘ಮಹಾತ್ಮಗಾಂಧಿ ಚಿಂತನೆಗಳನ್ನು ಕೃಷ್ಣ ಅವರು ಯಾವಾಗಲು ಹೇಳುತ್ತಿದ್ದರು. ಜತೆಗೆ ಬದುಕಿನಲ್ಲಿಯೂ ಅಳವಡಿಸಿಕೊಂಡಿದ್ದರು. ಶಾಸಕರಾಗಿ, ಸಂಸದರಾಗಿ, ಮಂತ್ರಿಯಾಗಿ, ಸ್ಪೀಕರ್ ಆಗಿ ಜವಾಬ್ದಾರಿಯನ್ನು ನಿರ್ವಹಿಸಿದರೂ ತಮ್ಮ ಸರಳತೆಯನ್ನು ಬಿಟ್ಟುಕೊಡಲಿಲ್ಲ. ಕೆ.ಅರ್ .ಪೇಟೆಯ ಅಭಿವೃದ್ಧಿಗೆ ಬಹಳಷ್ಟು ದುಡಿದಿದ್ದು, ಅವರನ್ನು ಸ್ಮರಿಸುವ ಕೆಲಸ ಆಗಬೇಕು,’’ ಎಂದರು. ‘‘ಕೃಷ್ಣ ಪ್ರತಿಷ್ಠಾನವು ಅತ್ಯುತ್ತಮ ಕೆಲಸವನ್ನು ಮಾಡುತ್ತಿದೆ. ಪ್ರತಿಷ್ಠಾನಕ್ಕೆ ಬೇಕಾದ ಎಲ್ಲಾರೀತಿಯ ನೆರವನ್ನು ಸರಕಾರದಿಂದ ದೊರಕಿಸಿಕೊಡಲು ಪ್ರಯತ್ನ ಮಾಡುತ್ತೇನೆ. ಎಲ್ಲರೂ ಕೃಷ್ಣ ಅವರ ಆದರ್ಶವನ್ನು ಪಾಲಿಸೋಣ,’’ ಎಂದರು. ಸಾಧಕರಿಗೆ ಪುರಸ್ಕಾರ: ಪದ್ಮಪ್ರಶಸ್ತಿ ಪುರಸ್ಕೃತ ಪುಸ್ತಕ ಮನೆ ಅಂಕೇಗೌಡ, ಹಿರಿಯ ಕಾರ್ಮಿಕ ಹೋರಾಟಗಾರ ಬಿ.ಆರ್ .ರಾಮೇಗೌಡ, ಐಎಎಸ್ ಉತ್ತೀರ್ಣರಾಗಿರುವ ಡಾ.ಮುತ್ತೇಶ್ ಗೌಡ ಪೋಷಕರು, ರೈತ ಮಹಿಳೆ ಪವಿತ್ರಾ ಅವರಿಗೆ ‘ಕೃಷ್ಣ ಪುರಸ್ಕಾರ’ ನೀಡಲಾಯಿತು.