ಯುವಶಕ್ತಿಗೆ ತಲೆಬಾಗಿದ ಕೇಂದ್ರ ಸರಕಾರ

Contributed byanil.kumar2@timesgroup.com|Vijaya Karnataka
sufficient response to youth protests resignation and achievements of the central government
ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ರಾಜೀನಾಮೆ | ಕಾಕ್ರೋಚ್ ಗಳ 3 ಬೇಡಿಕೆಗಳಿಗೂ ಸರಕಾರ ಸಮ್ಮತಿ | ಜೆನ್ ಝಿ ಹೋರಾಟ ಸುಖಾಂತ್ಯ | ದೇಶವಿರೋಧಿ ಶಕ್ತಿಗಳಿಂದ ಪ್ರತಿಭಟನೆ ಹೈಜಾಕ್ ತಡೆಯಲು ಪದತ್ಯಾಗ: ಧಮೇಂದ್ರ ಪ್ರಧಾನ್ | 3ನೇ ಸುತ್ತಿನ ಸಂಧಾನ ಸಭೆ ಫಲಪ್ರದ | ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಕ್ಕೆ ನೆರವಿನ ಭರವಸೆ | ಹೋರಾಟಗಾರರ ವಿರುದ್ಧ ಎಫ್ ಐಆರ್ ಗೆ ಕೊಕ್ | ಸಿಹಿ ಹಂಚಿ ಸಂಭ್ರಮಿಸಿದ ಪ್ರತಿಭಟನಾಕಾರರು | ಪ್ರಲ್ಹಾದ್ ಜೋಷಿಗೆ ಹೆಚ್ಚುವರಿ ಹೊಣೆ

ಹೊಸದಿಲ್ಲಿ: ಕಳೆದ ಹಲವು ವಾರಗಳಿಂದ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿಕೇಂದ್ರ ಸರಕಾರದ ವಿರುದ್ಧ ದೇಶಾದ್ಯಂತ ನಡೆಯುತ್ತಿದ್ದ ‘ಜೆನ್ ಜಿ’ ಹೋರಾಟ ಯಶಸ್ವಿಯಾಗಿದೆ. ಯುವಶಕ್ತಿಯ ಪ್ರತಿಭಟನೆಗಳ ಒತ್ತಡಕ್ಕೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮತ್ತೊಂದೆಡೆ, ಕೇಂದ್ರದ ಸಚಿವರ ಜತೆ ಶನಿವಾರ ನಡೆದ ಮೂರನೇ ಸುತ್ತಿನ ಸಂಧಾನ ಸಭೆಯಲ್ಲಿಸಿಜೆಪಿ ಮುಂದಿಟ್ಟ ಮೂರೂ ಬೇಡಿಕೆಗಳಿಗೆ ಸರಕಾರ ಸಮ್ಮತಿಸಿದ್ದು, ಹೋರಾಟವನ್ನು ಅಂತ್ಯಗೊಳಿಸಿರುವುದಾಗಿ ಪ್ರತಿಭಟನಾಕಾರರು ಘೋಷಿಸಿದ್ದಾರೆ.

ಇದರೊಂದಿಗೆ ‘ನೀಟ್ ’ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧ ಯುವಜನರ ಚಳವಳಿಯು ತಾರ್ಕಿಕ ಅಂತ್ಯ ಕಂಡಿದೆ. ಭಾರತದ ‘ಜೆನ್ ಝಿ’ ಪ್ರತಿಭಟನಾಕಾರರಿಗೆ ಅಭೂತಪೂರ್ವ ರಾಜಕೀಯ ವಿಜಯ ಸಂದಿದೆ. ಪ್ರತಿಭಟನೆಯ ಕೇಂದ್ರಬಿಂದುವಾಗಿದ್ದ ದಿಲ್ಲಿಯ ಜಂತರ್ ಮಂತರ್ ನಲ್ಲಿಸಂಭ್ರಮಾಚರಣೆ ಮುಗಿಲು ಮುಟ್ಟಿದ್ದು, ಪ್ರತಿಭಟನಾಕಾರರು ಸ್ಥಳದಿಂದ ನಿರ್ಗಮಿಸಿದ್ದಾರೆ.

ರಾಜೀನಾಮೆಯಲ್ಲಿಪ್ರಧಾನ್ ಹೇಳಿದ್ದೇನು?

ಧಮೇಂದ್ರ ಪ್ರಧಾನ್ ಅವರು ಪ್ರಧಾನಿ ಮೋದಿಗೆ ಬರೆದ ಎರಡು ಪುಟಗಳ ರಾಜೀನಾಮೆ ಪತ್ರದಲ್ಲಿಪ್ರತಿಭಟನಾಕಾರರನ್ನು ‘ಯುವ ಸ್ನೇಹಿತರು’ ಎಂದು ಕರೆದಿದ್ದಾರೆ. ಭಾರತೀಯ ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸಲು ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಸಮರ್ಥಿಸಿಕೊಂಡಿರುವ ಅವರು, ಮೊದಲ ದಿನದಿಂದಲೇ ಪ್ರಶ್ನೆಪತ್ರಿಕೆ ಸೋರಿಕೆ ಬಿಕ್ಕಟ್ಟಿನ ನೈತಿಕ ಹೊಣೆಗಾರಿಕೆಯನ್ನು ತಾವು ಹೊತ್ತಿರುವುದಾಗಿ ಒತ್ತಿಹೇಳಿದ್ದಾರೆ.

ದೇಶವಿರೋಧಿ ಶಕ್ತಿಗಳ ತಡೆಗೆ ರಾಜೀನಾಮೆ: ಆದರೆ, ದಿಲ್ಲಿಯ ಜಂತರ್ ಮಂತರ್ ನಲ್ಲಿನಡೆಯುತ್ತಿರುವ ಆಂದೋಲನ ಮತ್ತು ಈ ಬಿಕ್ಕಟ್ಟಿನ ರಾಜಕೀಯ ಲಾಭ ಪಡೆಯುತ್ತಿರುವ ಶಕ್ತಿಗಳ ಬಗ್ಗೆ ಸಚಿವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

‘‘ಜಂತರ್ ಮಂತರ್ ಮತ್ತು ದೇಶಾದ್ಯಂತ ನಿರ್ಮಾಣವಾಗಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೇಶ ವಿರೋಧಿ ಶಕ್ತಿಗಳು ಈ ಪರಿಸ್ಥಿತಿಯ ಲಾಭ ಪಡೆಯದಂತೆ ತಡೆಯಲು ರಾಜೀನಾಮೆ ನೀಡಿದ್ದೇನೆ. ದೇಶದ ಏಕತೆಯನ್ನು ಕಾಪಾಡುವುದು, ಯಾವೊಬ್ಬ ವಿದ್ಯಾರ್ಥಿಯ ಭವಿಷ್ಯವೂ ಕಾನೂನು ತೊಡಕುಗಳಲ್ಲಿಸಿಲುಕಿಕೊಳ್ಳದಂತೆ ತಡೆಯುವುದೂ ಸಹ ರಾಜೀನಾಮೆಯ ಉದ್ದೇಶವಾಗಿದೆ,’’ ಎಂದು ಪ್ರಧಾನ್ ಬರೆದಿದ್ದಾರೆ.

=============

ಸಭೆಗೆ ಮೊದಲೇ ರಾಜೀನಾಮೆ

ಶಿಕ್ಷಣ ಸಚಿವರ ರಾಜೀನಾಮೆಗೆ ಸಿಜೆಪಿ ಬಿಗಿ ಪಟ್ಟು ಮುಂದುವರಿಸಿದ ಹಿನ್ನೆಲೆಯಲ್ಲಿ, ಶುಕ್ರವಾರ ಅತಂತ್ರವಾಗಿ ಅಂತ್ಯಗೊಂಡಿದ್ದ ಮಾತುಕತೆ ಶನಿವಾರ ಮತ್ತೆ ನಡೆಯಿತು. ಆದರೆ, ಅದಕ್ಕೂ ಸಭೆಗೂ ಮೊದಲೇ ಪ್ರಧಾನ್ ರಾಜೀನಾಮೆ ಘೋಷಿಸಿದರು. ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು ಸಿಜೆಪಿ ವಕ್ತಾರರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರೊಂದಿಗೆ ಸಭೆ ನಡೆಸಿದರು. ಈ ವೇಳೆ ಬೇಡಿಕೆಗಳಿಗೆ ಸರಕಾರ ಸಮ್ಮತಿಸಿತು. ಬಳಿಕ ಜಂಟಿ ಸುದ್ದಿಗೊಷ್ಠಿಯಲ್ಲಿಸಿಜೆಪಿ ಮುಖಂಡರು ಪ್ರತಿಭಟನೆ ಕೈಬಿಡುವ ನಿರ್ಧಾರ ಪ್ರಕಟಿಸಿದರು.

==============

ಬೇಡಿಕೆಗಳೇನು?

1. ಮೊದಲನೆಯದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ,

2. ಪ್ರತಿಭಟನಾಕಾರರು ಹಾಗೂ ಸಂಘಟಕರ ವಿರುದ್ಧ ಎಲ್ಲಾರಾಜ್ಯಗಳಲ್ಲಿದಾಖಲಿಸಿರುವ ಎಲ್ಲಎಫ್ ಐಆರ್ ಗಳನ್ನು ಹಿಂಪಡೆಯುವುದು; ಭವಿಷ್ಯದಲ್ಲಿಯಾವುದೇ ಪ್ರಕರಣ ದಾಖಲಿಸದಿರುವುದು

3. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡುವುದು.

4. ಈ ಎಲ್ಲಾಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತ ರೂಪದ ಭರವಸೆ ನೀಡುವುದು

=============

ಸರಕಾರದ ಸ್ಪಂದನೆ ಏನು?

* ಧರ್ಮೇಂದ್ರ ಪ್ರಧಾನ್ ಈಗಾಗಲೇ ರಾಜೀನಾಮೆ ನೀಡಿದ್ದಾರೆ.

* ಪ್ರತಿಭಟನಾಕಾರರ ವಿರುದ್ಧ ಎಫ್ ಐಆರ್ ಗಳನ್ನು ಹಿಂಪಡೆಯಲು ಸಂಪೂರ್ಣ ಒಪ್ಪಿಗೆ

* 1 ಕೋಟಿ ರೂ. ಪರಿಹಾರಕ್ಕೆ ಸಂಬಂಧಿಸಿದಂತೆ, ಕಾನೂನು ವ್ಯಾಪ್ತಿಯಲ್ಲಿಅವಕಾಶವಿರುವಷ್ಟು ಗರಿಷ್ಠ ಮೊತ್ತ ನೀಡುವುದಾಗಿ ಸರಕಾರದ ಭರವಸೆ

=================

ಪ್ರತಿಭಟನಾಕಾರರು ಮುಂದಿಟ್ಟ ಬಹುತೇಕ ಎಲ್ಲಬೇಡಿಕೆಗಳನ್ನು ಸರಕಾರ ಸಹಾನುಭೂತಿ ಮತ್ತು ಸಕಾರಾತ್ಮಕ ಮನೋಭಾವದಿಂದ ಒಪ್ಪಿಕೊಂಡಿದೆ. ಪರಿಹಾರದ ವಿಷಯದಲ್ಲಿಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ನಿಯಮಾವಳಿಗಳ ವ್ಯಾಪ್ತಿಯಲ್ಲಿಸಾಧ್ಯವಿರುವ ಗರಿಷ್ಠ ಪರಿಹಾರ ನೀಡಲಾಗುವುದು. ಸಿಜೆಪಿ ಸಲ್ಲಿಸಿರುವ ಐದು ಅಂಶಗಳ ಶಿಕ್ಷಣ ಮತ್ತು ಪರೀಕ್ಷಾ ಸುಧಾರಣೆಯ ಪ್ರಸ್ತಾವನೆ ಕುರಿತು ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸಲಿದೆ. ಪ್ರತಿಭಟನಾಕಾರರ ವಿರುದ್ಧ ಪ್ರತೀಕಾರದ ಕ್ರಮ ಕೈಗೊಳ್ಳುವುದಿಲ್ಲ.

ಜೆ.ಪಿ ನಡ್ಡಾ, ಕೇಂದ್ರ ಸಚಿವ

============

ಜೋಷಿಗೆ ತಾತ್ಕಾಲಿಕವಾಗಿ ಶಿಕ್ಷಣ ಖಾತೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ ಬೆನ್ನಲ್ಲೇ, ಹಾಲಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಪ್ರಲ್ಹಾದ್ ಜೋಷಿ ಅವರಿಗೆ ಹೆಚ್ಚುವರಿಯಾಗಿ ಶಿಕ್ಷಣ ಖಾತೆಯ ಹೊಣೆಗಾರಿಕೆ ನೀಡಲಾಗಿದೆ. ಪ್ರಧಾನಿ ಸೂಚನೆ ಬೆನ್ನಲ್ಲೇ ಈ ಕ್ರಮ ಕೈಗೊಂಡಿರುವುದಾಗಿ ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ. ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರಾದ ಜೋಷಿ ಪ್ರಸ್ತುತ ಗ್ರಾಹಕ ವ್ಯವಹಾರಗಳು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆಯನ್ನೂ ಹೊಂದಿದ್ದಾರೆ.