ವಿಕಸುದ್ದಿಲೋಕ ಪಿರಿಯಾಪಟ್ಟಣಕಾರ್ಗಿಲ್ ವಿಜಯ ದಿವಸ್ ದೇಶ ಪ್ರೇಮ ಸಾರುವ ದೇಶದ ಹೆಮ್ಮೆಯ ಸಂಕೇತದ ದಿನವಾಗಿದೆ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ನರಸೇಗೌಡ ತಿಳಿಸಿದರು.
ಪಟ್ಟಣದ ಜಿಜೆಸಿಪಿ ಶಾಲಾ ಆವರಣದಲ್ಲಿಪಿರಿಯಾಪಟ್ಟಣ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಸುಬೇದಾರ್ ಕೆ.ಪಿ ಬೆಳ್ಳಿಯಪ್ಪರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ‘‘ನಮ್ಮ ದೇಶದ ಸೈನಿಕರು ಪಾಕಿಸ್ತಾನದ ವಿರುದ್ಧ ಶೌರ್ಯ ಮೆರೆದ ಈ ದಿನ ಮುಂದಿನ ಪೀಳಿಗೆಗೆ ಪ್ರೇರಣೆಯ ದಿನವಾಗಿದೆ. ನಮ್ಮ ದೇಶದ ಸೈನಿಕರು ಮಳೆ, ಗಾಳಿ, ಬಿಸಿಲು, ಚಳಿ ಎನ್ನದೆ ಹಗಲಿರುಳು ದೇಶಕ್ಕಾಗಿ ದುಡಿಯುತ್ತಿದ್ದಾರೆ. ಕಾರ್ಗಿಲ್ ಯುದ್ದದಲ್ಲಿ527ಕ್ಕೂ ಹೆಚ್ಚು ಯೋಧರು ಹುತಾತ್ಮರಾದರು. ಒಂದು ಸಾವಿರಕ್ಕೂ ಹೆಚ್ಚು ಸೈನಿಕರು ಶಾಶ್ವತ ಅಂಗವೈಕಲ್ಯರಾಗಿದ್ದು, ಅವರ ತ್ಯಾಗ ಬಲಿದಾನ ಸ್ಮರಿಸುತ್ತಾ ಇಂದಿನ ಯುವ ಪೀಳಿಗೆಗೆ ತಲುಪಿಸಲು ಜು.26 ರನ್ನು ಕಾರ್ಗಿಲ್ ವಿಜಯ ದಿವಸ್ ಎಂದು ಆಚರಿಸುತ್ತೇವೆ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನಮ್ಮ ಸೈನಿಕರು ನಡೆಸಿದ ಹೋರಾಟ ರೋಚಕವಾದುದು. ಈ ವಿಜಯೋತ್ಸವ ದೇಶದ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂಕೇತವಾಗಿದೆ,’’ ಎಂದು ಹೇಳಿದರು.
ನಿವೃತ್ತ ಸೈನಿಕ ಸಂಘದ ಗೌರವಾಧ್ಯಕ್ಷ ವಿಕ್ರಂ ರಾಜ್ ಮಾತನಾಡಿ, ‘‘ದೇಶದ ರಕ್ಷಣೆಯಲ್ಲಿಸೈನಿಕರ ಪಾತ್ರ ಅಪಾರವಾದದ್ದು. ಅವರು ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿಹೋರಾಡಿ ಹುತಾತ್ಮರಾದ ಮನೋಜ್ ಕುಮಾರ್ ಪಾಂಡೆ, ಸೌರಭ್ ಕಾಲಿಯ, ಇನ್ನಿತರರ ಜೀವನ ಚರಿತ್ರೆಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು. ಅವರ ದೇಶ ಪ್ರೇಮವನ್ನು ಯುವ ಸಮೂಹ ಮೈಗೂಡಿಸಿಕೊಂಡು ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಬೇಕು,’’ ಎಂದರು.
ಕಾರ್ಯದರ್ಶಿ ರಂಜಿತ್ , ಖಜಾಂಚಿ ಧ್ರುವ ಕುಮಾರ್ , ಸುಬೇದಾರ್ ಭೋಜಪ್ಪ, ಮಸಣಿಕಮ್ಮ ಸೈನಿಕ ಅಕಾಡೆಮಿ ಅಧ್ಯಕ್ಷ ಆರ್ .ಸ್ವಾಮಿ, ಕಾರ್ಯದರ್ಶಿ ಜವರೇಗೌಡ, ಕೆ ಪಿ ಗಣೇಶ್ , ಪ್ರವೀಣ್ ಕೋಗಿಲವಾಡಿ, ರಾಮು ಎಂ, ಯಲ್ಲಪ್ಪ, ಎಸ್ .ಡಿ.ಎಂ.ಸಿ. ಅಧ್ಯಕ್ಷ ಕುಮಾರ್ , ಎಸ್ .ಡಿ.ಎಂ.ಸಿ. ಸದಸ್ಯ ಕೆ.ಪಿ. ವೆಂಕಟೇಶ್ , ಶಂಕರ್ , ಶಿವಪ್ಪ, ಶಾಲಾ ಶಿಕ್ಷಕರಾದ ಪೂರ್ಣಿಮಾ, ಮಣಿಕಂಠ, ಬಸವರಾಜ್ ಹಾಗೂ ಮಾಜಿ ಸೈನಿಕರು ಹಾಗೂ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಸಿಬ್ಬಂದಿ ಇದ್ದರು.
ಫೋಟೋ:
1) ಪಿರಿಯಾಪಟ್ಟಣದ ಜಿಜೆಸಿಪಿ ಶಾಲಾ ಆವರಣದಲ್ಲಿಪಿರಿಯಾಪಟ್ಟಣ ತಾಲ್ಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು. ಎಂವೈಎಸ್ 26ಬಿಟಿಪಿ2