ಡಾನ್ ಡ್ಯಾನಿ ಹೇಳಿದ ಕೆಲಸವನ್ನು ಮರುಮಾತನಾಡದೇ ಮಾಡಿ ಮುಗಿಸುವುದೇ ರಕ್ಕಿ ಜೀವನದ ಉದ್ದೇಶ. ಡೋಂಟ್ ಕೇರ್ ಸ್ವಭಾವದ ರಕ್ಕಿ ತನಗೆ ಕೆಲಸ ನೀಡಿರುವ ಡಾನ್ ಡ್ಯಾನಿಯ ಮಗಳನ್ನೇ ಪ್ರೀತಿಸುತ್ತಿರುತ್ತಾನೆ. ಈ ವಿಷಯ ಗೊತ್ತಿದ್ದರೂ ಏನೂ ಮಾಡಲಾಗದೆ ನುಂಗಲಾರದ ತುಪ್ಪವಾಗಿರುತ್ತಾನೆ ರಕ್ಕಿ. ಇದಕ್ಕೆ ಒಂದು ಪ್ಲಾನ್ ಮಾಡುವ ಡ್ಯಾನಿ ತನಗೆ ಬರುವ ದೊಡ್ಡ ಡೀಲ್ ಅನ್ನು ರಕ್ಕಿ ಮತ್ತು ಮತ್ತೊಬ್ಬ ಖರ್ತನಾಕ್ ಗಣೇಶ್ ಗೆ ನೀಡುತ್ತಾನೆ. ಡೀಲ್ ಮುಗಿಸಲು ಇಬ್ಬರೂ ಕೆಜಿಎಫ್ ನತ್ತ ತೆರಳುತ್ತಾರೆ. ಇನ್ನೇನು ಡ್ಯಾನಿ ಹೇಳಿರುವ ವ್ಯಕ್ತಿಯನ್ನು ಗಣೇಶ್ ಮುಗಿಸಬೇಕು ಎನ್ನುವಷ್ಟರಲ್ಲಿರಕ್ಕಿಯ ಮಾಜಿ ಪತ್ನಿ ಚಾಂದಿನಿ ಪ್ರತ್ಯಕ್ಷವಾಗುತ್ತಾಳೆ. ಡೀಲ್ ಮುಗಿಸಲು ಬಂದ ರಕ್ಕಿಗೆ ಗೊಂದಲ ಉಂಟಾಗುತ್ತದೆ. ರಕ್ಕಿ ಮುಂದೇನು ಮಾಡುತ್ತಾನೆ, ಡಾನ್ ಗಾಗಿ ಕೆಲಸ ಮಾಡಿ ಪ್ರೀತಿ ಗೆಲ್ಲುತ್ತಾನಾ, ಚಾಂದಿನಿ ಪರವಾಗಿ ಕೆಲಸ ಮಾಡುತ್ತಾನಾ ಎನ್ನುವುದೇ ಸಿನಿಮಾದ ಕಥೆ.ನಿರ್ದೇಶಕ ವೆಂಕಟ್ ಭಾರದ್ವಾಜ್ ರಕ್ಕಿ ಸುರೇಶ್ ಇಂಟ್ರಡಕ್ಷನ್ ಗಾಗಿಯೇ ಮಾಡಿಕೊಂಡಿರುವ ಆ್ಯಕ್ಷನ್ ಪ್ರಧಾನ ಕಥೆಯಲ್ಲಿಆ್ಯಕ್ಷನ್ ಹೇರಳವಾಗಿದೆ, ಆದರೆ ಅದು ಕಥೆಗೆ ಪೂರಕವಾಗಿದೆ. ನಾನ್ ಲೀನಿಯರ್ ಚಿತ್ರಕಥೆ, ನಿರೂಪಣೆ ಆರಂಭದಲ್ಲಿಕುತೂಹಲ ಹೆಚ್ಚಿಸುತ್ತಾ ಹೋಗುತ್ತದೆ. ಪ್ರೇಕ್ಷಕನಿಗೂ ಕಥೆಯಲ್ಲಿನ ಟ್ವಿಸ್ಟ್ ಗಳು ಮಜಾ ಕೊಡುತ್ತವೆ. ಎಲ್ಲಾಲಿಂಕ್ ಗಳನ್ನು ಕ್ಲೈಮ್ಯಾಕ್ಸ್ ಗೆ ಪೋಣಿಸಿಕೊಂಡು ಹೋಗಿರುವ ರೀತಿ ಹೊಸದು. ಇನ್ನು ಚೊಚ್ಚಲ ಸಿನಿಮಾದಲ್ಲೇ ರಕ್ಕಿ ಸುರೇಶ್ ಡಾನ್ಸ್ , ಆ್ಯಕ್ಷನ್ ದೃಶ್ಯಗಳಲ್ಲಿಗಮನ ಸೆಳೆದಿದ್ದಾರೆ, ನಟನೆಯಲ್ಲಿಮಾಗಬೇಕಿದೆ. ಪಲ್ಲವಿ ಮಂಜುನಾಥ್ ಸಿನಿಮಾದ ಗ್ಲಾಮರ್ ಗಷ್ಟೆ ಸೀಮಿತವಾಗಿದ್ದಾರೆ. ಆದರೆ ಆಶಿಕಾ ಸೋಮಶೇಖರ್ ತಮ್ಮ ಪಾತ್ರ, ಪಾತ್ರಕ್ಕೆ ತಕ್ಕ ನಟನೆ ಮೂಲಕ ಗಮನ ಸೆಳೆಯುತ್ತಾರೆ. ಉಳಿದಂತೆ, ಸಂಪತ್ ಮೈತ್ರೇಯ, ಬಿ. ಸುರೇಶ್ , ಬಲ ರಾಜವಾಡಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹಾಡುಗಳು, ಸ್ಟಂಟ್ಸ್ ರಿಚ್ ಆಗಿ ಮೂಡಿಬಂದಿವೆ. ಥ್ರಿಲ್ಲಿಂಗ್ ಅನುಭವ ನೀಡುವ ಮಾಸ್ ಆ್ಯಕ್ಷನ್ ಸಿನಿಮಾ ಪ್ರಿಯರಿಗೆ ಇದು ಬೆಸ್ಟ್ ಆಯ್ಕೆ.
ಸಿನಿಮಾ: ರಕ್ಕಿ
ನಿರ್ದೇಶನ: ವೆಂಕಟ್ ಭಾರದ್ವಾಜ್
ತಾರಾಗಣ: ರಕ್ಕಿ ಸುರೇಶ್ , ಆಶಿಕಾ ಸೋಮಶೇಖರ್ , ಪಲ್ಲವಿ ಮಂಜುನಾಥ್ , ಸಂಪತ್ ಮೈತ್ರೇಯ, ಬಲ ರಾಜ್ವಾಡಿ, ಬಿ ಸುರೇಶ್