ಚಂದದ ಮೆಟ್ಟಿಲುಗಳ ರಕ್ಷಣೆಗೆ ಮೇಲ್ಛಾವಣಿ ಅತ್ಯಗತ್ಯ. ಇದು ಮೆಟ್ಟಿಲುಗಳನ್ನು ಸಂರಕ್ಷಿಸುವುದರ ಜೊತೆಗೆ ಮನೆಯ ಅಂದ ಹೆಚ್ಚಿಸುತ್ತದೆ. ಇದರಲ್ಲಿಅನೇಕ ವಿನ್ಯಾಸಗಳಿವೆ.
-----------------------------------
ಮನೆಯ ಹೊರಭಾಗದಲ್ಲಿಮೆಟ್ಟಿಲುಗಳಿದ್ದರೆ ಅವು ತೀವ್ರ ಬಿಸಿಲು, ಭಾರಿ ಮಳೆ ಮತ್ತು ಗಾಳಿಯಿಂದ ಬೇಗನೆ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈಗ ಬಹುತೇಕರು ಮೆಟ್ಟಿಲುಗಳಿಗೆ ಸುಂದರ ಮತ್ತು ಭದ್ರವಾದ ಮೇಲ್ಛಾವಣಿ ಅಳವಡಿಸುತ್ತಾರೆ.
ಪಾಲಿಕಾರ್ಬೊನೇಟ್ ಮೇಲ್ಛಾವಣಿ: ಮಳೆ ಮತ್ತು ಬಿಸಿಲಿನಿಂದ ಮೆಟ್ಟಿಲುಗಳನ್ನು ರಕ್ಷಿಸಲು ಪಾಲಿಕಾರ್ಬೊನೇಟ್ ಶೀಟ್ ಅತ್ಯಂತ ಜನಪ್ರಿಯ ಹಾಗೂ ಪ್ರಾಯೋಗಿಕ ಆಯ್ಕೆಯಾಗಿದೆ. ಇದು ನೈಸರ್ಗಿಕ ಬೆಳಕನ್ನು ಒಳಗೆ ಬಿಡುತ್ತಲೇ ಮಳೆ ನೀರನ್ನು ಸರಾಗವಾಗಿ ಹರಿದುಹೋಗುವಂತೆ ಮಾಡುತ್ತದೆ. ಇಂಥ ಶೀಟ್ ಬಹುತೇಕ ಒಡೆಯದ ಗಟ್ಟಿ ವಸ್ತು. ಇದು ಅತಿ ಹಗುರವಾಗಿರುವುದರಿಂದ ಅಳವಡಿಸುವುದು ಕೂಡ ಸುಲಭ. ಇದು ತುಕ್ಕು ಹಿಡಿಯುವುದಿಲ್ಲಮತ್ತು ಇದರ ನಿರ್ವಹಣೆ ಕೂಡ ಬಹಳ ಕಡಿಮೆ.
ಆರ್ .ಸಿ.ಸಿ ಕಾಂಕ್ರೀಟ್ ಮೇಲ್ಛಾವಣಿ: ವಿಪರೀತ ಹವಾಮಾನ ವೈಪರೀತ್ಯ ಅಥವಾ ಭಾರಿ ಮಳೆಯಿರುವ ಪ್ರದೇಶದಲ್ಲಿಕಾಂಕ್ರೀಟ್ ಸ್ಪ್ಯಾಬ್ ರೂಫ್ ಅತ್ಯಂತ ಸುರಕ್ಷಿತ ಆಯ್ಕೆಯಾಗಿದೆ. ಗಟ್ಟಿಮುಟ್ಟಾದ ಕಾಂಕ್ರೀಟ್ ಬಿಸಿಲಿನ ತೀವ್ರತೆ ತಡೆದು ಮೆಟ್ಟಿಲುಗಳ ರಚನೆಯನ್ನು ತಂಪಾಗಿರಿಸುತ್ತದೆ. ಇದು ಕಟ್ಟಡಕ್ಕೆ ದೀರ್ಘ ಬಾಳಿಕೆ ಮತ್ತು ವಿಂಟೇಜ್ ಲುಕ್ ನೀಡುತ್ತದೆ.
ಮೆಟಲ್ ಅವಿಂಗ್ : ಮೆಟ್ಟಿಲುಗಳಿಗೆ ಕೈಗೆಟಕುವ ಬೆಲೆಯಲ್ಲಿಅತ್ಯಂತ ಅಂದದ ನೋಟ ನೀಡಲು ಬಯಸುವವರಿಗೆ ಮೆಟಲ್ ಶೇಡ್ ಸೂಕ್ತ. ಮೆಟ್ಟಿಲುಗಳ ಮೇಲ್ಭಾಗದಲ್ಲಿಸ್ವಲ್ಪ ಮುಂದೆ ಬರುವಂತೆ ಇದನ್ನು ಅಳವಡಿಸಬೇಕು. ಇದರಲ್ಲಿರುವ ಪೌಡರ್ ಕೋಟೆಡ್ ಸ್ಟೀಲ್ ಅಥವಾ ಅಲ್ಯುಮಿನಿಯಂ ಹೊರಗಿನ ಹವಾಮಾನವನ್ನು ಸುಲಭವಾಗಿ ತಡೆದುಕೊಳ್ಳುತ್ತದೆ. ಮರದಿಂದ ಬೀಳುವ ಎಲೆ, ಧೂಳು ಮೆಟ್ಟಿಲುಗಳ ಮೇಲೆ ಬೀಳದಂತೆ ಇದು ತಡೆಯುತ್ತದೆ.
ಮಡಚಬಹುದಾದ ಮೇಲ್ಛಾವಣಿ: ಶಾಶ್ವತವಾಗಿ ಮುಚ್ಚಿದ ಮೇಲ್ಛಾವಣಿ ಬೇಡವೆಂದಿದ್ದರೆ ಮೆಟ್ಟಿಲುಗಳ ಮೇಲೆ ಮಡಚಬಹುದಾದ ಕ್ಯಾನೋಪಿ ಉತ್ತಮ. ಆಯಾ ಹವಾಮಾನಕ್ಕೆ ತಕ್ಕಂತೆ ಇದನ್ನು ಯಾವಾಗ ಬೇಕಾದರೂ ತೆರೆಯಬಹುದು ಅಥವಾ ಮುಚ್ಚಬಹುದು. ಇದು ಮೆಟ್ಟಿಲುಗಳ ಮುಕ್ತ ನೋಟವನ್ನು ಹಾಗೆಯೇ ಉಳಿಸುತ್ತದೆ.
ಗಾಜಿನ ಮೇಲ್ಛಾವಣಿ: ಪ್ರಬಲ ಲೋಹದ ಬೆಂಬಲದೊಂದಿಗೆ ಅಳವಡಿಸುವ ಗಾಜಿನ ಮೇಲ್ಛಾವಣಿಯು ಮೆಟ್ಟಿಲುಗಳಿಗೆ ಮತ್ತು ಮನೆಯ ಹೊರಾಂಗಣಕ್ಕೆ ಅತ್ಯಂತ ಆಕರ್ಷಕ ಮತ್ತು ಮಾಡರ್ನ್ ನೋಟ ನೀಡುತ್ತದೆ. ಇದು ಮೇಲ್ಛಾವಣಿಯ ಅನುಭವವನ್ನೂ ನೀಡುತ್ತಾ, ಇಡೀ ದಿನ ಸ್ವಾಭಾವಿಕ ಬೆಳಕು ಮೆಟ್ಟಿಲುಗಳ ಮೇಲೆ ಬೀಳುವಂತೆ ಮಾಡುತ್ತದೆ.
ಮರದ ವಿನ್ಯಾಸದ ಲೋವರ್ಡ್ : ಹೊರಾಂಗಣಕ್ಕೆ ಸಾಂಪ್ರದಾಯಿಕ ಮತ್ತು ಶ್ರೀಮಂತ ಲುಕ್ ನೀಡಲು ವುಡನ್ ಫಿನಿಶಿಂಗ್ ಇರುವ ಅಲ್ಯುಮಿನಿಯಂ ಲೋವರ್ಡ್ ಬಳಸುವುದು ಉತ್ತಮ. ಇದು ಗಾಳಿಯಾಡಲು ಮುಕ್ತ ಅವಕಾಶ ನೀಡುವುದರ ಜೊತೆಗೆ ಬಿಸಿಲನ್ನು ಸೋಸಿ ಆಹ್ಲಾದಕರ ನೆರಳು ನೀಡುತ್ತದೆ.
ಬಾಕ್ಸ್
ಹೈಬ್ರೀಡ್ ರೂಫ್ ಹಾಗೂ ಸೈಡ್ ಸ್ಕ್ರೀನ್
ಮಳೆ ಮತ್ತು ಗಾಳಿ ಹೆಚ್ಚು ಬರುವ ದಿಕ್ಕಿನಲ್ಲಿರುವ ಮೆಟ್ಟಿಲುಗಳಿಗೆ ಸೈಡ್ ಸ್ಕ್ರೀನ್ ಅಳವಡಿಸಿ, ಇನ್ನುಳಿದ ಭಾಗವನ್ನು ತೆರೆದಿಡಿ. ಇದರ ಮೇಲ್ಭಾಗದಲ್ಲಿಭದ್ರವಾದ ಛಾವಣಿ ಇರುವುದರಿಂದ ಮಳೆ ನೇರವಾಗಿ ಮೆಟ್ಟಿಲುಗಳ ಮೇಲೆ ಬೀಳುವುದಿಲ್ಲ. ಜತೆಗೆ ಜಾಗವೂ ಉಸಿರಾಡುವಂತೆ ಇರುತ್ತದೆ.