ಗ್ರಾಮೀಣ ಕ್ರೀಡೆ ಕಬಡ್ಡಿಗೆ ಉತ್ತೇಜನ ಅಗತ್ಯ

Contributed by: devarajuvksira@gmail.com|Vijaya Karnataka•
more encouragement for kabaddi rural talent and youth future
ವಿಕ ಸುದ್ದಿಲೋಕ ಶಿರಾ

ಗ್ರಾಮೀಣ ಭಾಗದ ಯುವಕರಲ್ಲಿಕ್ರೀಡಾ ಪ್ರತಿಭೆಯನ್ನು ಬೆಳೆಸುವಲ್ಲಿಕಬಡ್ಡಿ ಪ್ರಮುಖ ಪಾತ್ರ ವಹಿಸುತ್ತಿದೆ. ನಮ್ಮ ಮಣ್ಣಿನ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಬಡ್ಡಿಯನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಅಭಿಪ್ರಾಯಪಟ್ಟರು.
ತಾಲೂಕಿನ ತಾವರೆಕೆರೆ ಗ್ರಾಮದಲ್ಲಿವಾಗ್ಮಿನಿ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸುವುದರಿಂದ ಯುವಕರಲ್ಲಿದೈಹಿಕ ಸಾಮರ್ಥ್ಯ, ಆತ್ಮವಿಶ್ವಾಸ, ಶಿಸ್ತು ಹಾಗೂ ತಂಡದ ಮನೋಭಾವ ಬೆಳೆಸಲು ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿಆಧುನಿಕ ಕ್ರೀಡೆಗಳತ್ತ ಯುವಕರು ಹೆಚ್ಚಿನ ಆಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.

ಕಬಡ್ಡಿ ಕೇವಲ ಮನರಂಜನೆಯ ಕ್ರೀಡೆಯಲ್ಲ. ಇದು ದೈಹಿಕ ಕ್ಷಮತೆ, ಚುರುಕುತನ, ತಂತ್ರಗಾರಿಕೆ ಮತ್ತು ಏಕಾಗ್ರತೆಯನ್ನು ಬೆಳೆಸುವ ಕ್ರೀಡೆಯಾಗಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ, ಕ್ರೀಡಾಂಗಣ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಿದರೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಮೇಲ್ವಿಚಾರಕ ಅಶೋಕ್ ಮಾತನಾಡಿ, ಸ್ಥಳೀಯ ಸಂಘ-ಸಂಸ್ಥೆಗಳು, ಯುವಕ ಸಂಘಗಳು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸಬೇಕು. ಸರಕಾರವೂ ಗ್ರಾಮೀಣ ಕ್ರೀಡೆಗಳಿಗೆ ಅಗತ್ಯ ಮೂಲಸೌಕರ್ಯ ಹಾಗೂ ತರಬೇತಿ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವು ಸ್ನೇಹಪ್ರಿಯ ಮಾತನಾಡಿ, ಕಳೆದ 3 ವರ್ಷಗಳಿಂದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಯುವ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಹಾಗೂ ಉತ್ತೇಜಕರ ಬೆಂಬಲದಿಂದ ಈ ಗ್ರಾಮದಲ್ಲಿಆಯೋಜಿಸುತ್ತ ಬರುತ್ತಿದ್ದು, ಸಾರ್ವಜನಿಕರಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಗ್ರಾಮೀಣ ಕ್ರೀಡೆ ಉಳಿದರೆ ನಮ್ಮ ಗ್ರಾಮೀಣ ಪ್ರತಿಭೆ ಉಳಿಯುತ್ತದೆ. ಕಬಡ್ಡಿಗೆ ಪ್ರೋತ್ಸಾಹ ನೀಡುವುದು ಯುವಕರ ಭವಿಷ್ಯಕ್ಕೆ ಹೂಡಿಕೆ ಮಾಡಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಅವರು ಕಬಡ್ಡಿಯಲ್ಲಿವಿಜೇತರಾದವರಿಗೆ ಪ್ರಥಮ ಬಹುಮಾನ ನೀಡಿದರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಮೇಲ್ವಿಚಾರಕ ಅಶೋಕ್ ಅವರು ದ್ವಿತೀಯ ಬಹುಮಾನವನ್ನು ಹಾಗೂ ಗ್ರಾಪಂ ಮಾಜಿ ಉಪಾಧ್ಯಕ್ಷ ಶಿವು ಸ್ನೇಹಪ್ರಿಯ ಅವರು ತೃತೀಯ ಬಹುಮಾನ ನೀಡಿ ಕ್ರೀಡಾಪಟುಗಳಿಗೆ ಅಭಿನಂದಿಸಿದರು.

ಈ ಸಂದರ್ಭದಲ್ಲಿವಿಎಸ್ ಎಸ್ ಎನ್ ಅಧ್ಯಕ್ಷ ಲಕ್ಷ್ಮಿಕಾಂತ್ , ತಾವರೆಕೆರೆ ಭೀಮಣ್ಣ, ಗ್ರಾಪಂ ಮಾಜಿ ಉಪಾಧ್ಯಕ್ಷ ಶಿವಕುಮಾರ್ ನಾಯಕ, ಗ್ರಾಪಂ ಮಾಜಿ ಸದಸ್ಯರಾದ ಅಂಜನಪ್ಪ, ಮಧು ಮತ್ತು ಅನೇಕ ಮುಖಂಡರು ಹಾಜರಿದ್ದರು.

24ಶಿರಾ6: ತಾವರೆಕೆರೆ ಗ್ರಾಮದಲ್ಲಿನಡೆದ ಕಬಡ್ಡಿ ಪಂದ್ಯಾವಳಿಯನ್ನು ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಉದ್ಘಾಟಿಸಿದರು.