ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್ ಐಆರ್ ) ವೇಳೆ 30,878 ಮಂದಿ ಮೃತಪಟ್ಟಿದ್ದರೂ ಅವರ ಹೆಸರು ಇನ್ನೂ ಮತಪಟ್ಟಿಯಲ್ಲಿದೆ.
ಎಸ್ ಐಆರ್ ಗಾಗಿ ಮನೆ ಮನೆಗೆ ಭೇಟಿ ನೀಡಿರುವ ಬಿಎಲ್ ಒ ಅಧಿಕಾರಿಗಳಿಗೆ, ಹಲವು ಅಂಶಗಳು ದೃಢವಾಗುತ್ತಿವೆ.
ಬೇರೆ ಊರಿಗೆ ಸ್ಥಳಾಂತರಗೊಂಡಿದ್ದರೂ, ಮೃತಪಟ್ಟಿದ್ದರೂ ಪಟ್ಟಿಯಲ್ಲಿಹೆಸರು ಇರುವುದು ಹಾಗೂ ಎರಡೆರಡು ಕಡೆ ಹೆಸರು ಇರುವುದು ಸೇರಿದಂತೆ ಕೆಲವು ನ್ಯೂನತೆಗಳು ಗೋಚರಿಸುತ್ತಿವೆ.
ಆ ಪೈಕಿ ಜಿಲ್ಲೆಯಲ್ಲಿ30,878 ಮಂದಿ ಮೃತಪಟ್ಟಿರುವವರ ಹೆಸರು ಪಟ್ಟಿಯಲ್ಲಿದೆ. ಇನ್ನು 35,140 ಮಂದಿ ಸ್ಥಳಾಂತರಗೊಂಡಿದ್ದರೂ ಅವರ ಹೆಸರಿತ್ತು ಎಂಬುದು ಗಮನಾರ್ಹ. ಅಲ್ಲದೇ 7,596 ಜನರು ಎರಡು ಕಡೆ ಬೂತ್ ವ್ಯಾಪ್ತಿಯಲ್ಲಿನೋಂದಣಿಗೊಂಡಿರುವುದು ಪತ್ತೆಯಾಗಿದೆ.
ಒಟ್ಟಾರೆಯಾಗಿ ಜಿಲ್ಲೆಯಲ್ಲಿಗುರುವಾರ ಅಂತ್ಯದವರೆಗೆ ನಡೆದಿರುವ ಎಸ್ ಐಆರ್ ಪ್ರಕ್ರಿಯೆಯಲ್ಲಿಸ್ಥಳಾಂತರಗೊಂಡವರು, ಮರಣ ಹೊಂದಿರುವವರು ಹಾಗೂ ಎರಡು ಕಡೆ ನೋಂದಣಿಯಾಗಿರುವವರು ಸೇರಿ 82,991 ಮತದಾರರನ್ನು ಗುರುತಿಸಲಾಗಿದೆ.
ಒಂದೆಡೆ ಇನ್ನು ಸಾಕಷ್ಟು ಮತದಾರರು ಅರ್ಜಿ ನಮೂನೆಗಳನ್ನೇ ನೀಡಿಲ್ಲ. ಹಲವು ಮಂದಿಗೆ 2002ರ ಮತದಾರರ ಪಟ್ಟಿ ದೊರಕಿಲ್ಲ. ಇನ್ನು ಕೆಲವರಿಗೆ ಅರ್ಜಿ ನಮೂನೆ ದೊರೆತ್ತಿಲ್ಲ. ದೊರೆತ್ತಿದ್ದರೂ ಭರ್ತಿ ಮಾಡಿ ವಾಪಸ್ ಕೊಟ್ಟಿಲ್ಲ. ಇಂಥವುಗಳ ನಡುವೆಯೂ ಎರಡೆರಡು ಕಡೆ ಹೆಸರಿರುವುದು, ಮೃತಪಟ್ಟಿರುವವರ ಮಾಹಿತಿ ದೊರೆಯುತ್ತಿರುವುದು ಪಟ್ಟಿ ಪರಿಷ್ಕರಣೆಗೆ ಅನುಕೂಲವಾಗಿದೆ.
====
ವಾಪಸ್ ಕೊಡದಿದ್ದರೆ ಡಿಲಿಟ್
ಬಿಎಲ್ ಒಗಳ ಮೂಲಕ ಮನೆಗಳಿಗೆ ತಲುಪಿರುವ ಅರ್ಜಿ ನಮೂನೆಗಳನ್ನು ಕಡ್ಡಾಯವಾಗಿ ಭರ್ತಿ ಮಾಡಿ, ವಾಪಸ್ ಕೊಡಬೇಕು. ಪೂರ್ಣ ಮಾಹಿತಿ ಲಭ್ಯ ಇಲ್ಲದಿದ್ದರೂ ಹೆಸರು ವಿಳಾಸವನ್ನಾದರೂ ಬರೆದು, ವಾಪಸ್ ನೀಡಬೇಕು. ಇಲ್ಲವಾದರೆ ಸಂಬಂಧಪಟ್ಟವರ ಹೆಸರು ಮತದಾರರ ಪಟ್ಟಿಯಿಂದ ಡಿಲಿಟ್ ಆಗಲಿದೆ. ಹೀಗಾಗಿ ಅರ್ಜಿ ನಮೂನೆಯನ್ನು ತಮ್ಮಲ್ಲೇ ಇಟ್ಟುಕೊಳ್ಳಬಾರದು ಎಂಬುದಾಗಿ ಬಿಎಲ್ ಒಗಳು ಮನವಿ ಮಾಡಿದ್ದಾರೆ.
ಸಾಕಷ್ಟು ಮಂದಿ 2002ರ ಮತಪಟ್ಟಿಯ ವಿವರ ಗೊತ್ತಿಲ್ಲಎಂಬ ಕಾರಣಕ್ಕೆ ಅರ್ಜಿ ನಮೂನೆಗಳನ್ನು ವಾಪಸ್ ಮಾಡಿಲ್ಲ. ಆದರೆ, ಆ ಮಾಹಿತಿ ತಿಳಿದಿಲ್ಲವಾದರೂ ಹಾಲಿ ಇರುವ ವಿಳಾಸ, ಬೂತ್ ಸಂಖ್ಯೆಯನ್ನು ಭರ್ತಿ ಮಾಡಿ ವಾಪಸ್ ಮಾಡಿ ಎಂಬುದು ಅವರ ಮನವಿ.
=====
7,94,521 ನಮೂನೆಗಳ ಡಿಜಿಟಲೀಕರಣ
ಜಿಲ್ಲೆಯಲ್ಲಿಒಟ್ಟು 983 ಮತಗಟ್ಟೆಗಳಿದ್ದು, 8,80,224 ಮತದಾರರಿದ್ದಾರೆ. ಈ ಪೈಕಿ ಈಗಾಗಲೇ (ಗುರುವಾರ ಅಂತ್ಯದವರೆಗೆ) 7,94,521 ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಚಾಮರಾಜನಗರ ವಿಧಾನಸಭೆ ಕ್ಷೇತ್ರದಲ್ಲಿಒಟ್ಟು 2,17,852 ಮತದಾರರಿದ್ದು, 1,97,057 ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.
ಗುಂಡ್ಲುಪೇಟೆ ಕ್ಷೇತ್ರದಲ್ಲಿ2,16,605 ಮತದಾರರಿದ್ದು, ಆ ಪೈಕಿ 1,96,476 ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿದೆ ಎಂದು ಅಧಿ ಕಾರಿಗಳು ತಿಳಿಸಿದ್ದಾರೆ.
===
ಜಿಲ್ಲೆಯಲ್ಲಿಎಸ್ ಐಆರ್ ಪ್ರಕ್ರಿಯೆ ಉತ್ತಮವಾಗಿ ನಡೆಯುತ್ತಿದೆ. ನಮೂನೆಗಳನ್ನು ಪಡೆದಿರುವವರು ತಮ್ಮ ಕುಟುಂಬ ಸದಸ್ಯರ ವಿವರಗಳನ್ನು ಭರ್ತಿ ಮಾಡಿಸಿ, ಬಿಎಲ್ ಒಗಳಿಗೆ ವಾಪಸ್ ಮಾಡಬೇಕು. ನಮೂನೆ ವಾಪಸ್ ಕೊಡದಿದ್ದರೆ ಅಂಥವರ ಹೆಸರು ಮತದಾರ ಪಟ್ಟಿಯಿಂದ ಡಿಲಿಟ್ ಆಗಲಿದೆ.