ಸರಣಿ - ಮುನಿಸಿಕೊಂಡ ಮಳೆರಾಯನಿಂದ ಅನ್ನದಾತನಿಗೆ ಆತಂಕ

Contributed bymohankumard.reddy555@gmail.com|Vijaya Karnataka
drought shock in agriculture only 688 sown due to monsoon disappointment
ಜುಲೈಅಂತ್ಯಕ್ಕೆ 6.88% ಮಾತ್ರ ಬಿತ್ತನೆ | ನೆಲಗಡಲೆ, ತೊಗರಿ, ಮುಸುಕಿನ ಜೋಳಕ್ಕೆ ಮೀರಿದ ಕಾಲ

ಅಲ್ಪಾವಧಿ ರಾಗಿ, ನವಣೆ, ಹುರುಳಿ ಬೆಳೆಯಲು ಕೃಷಿ ಇಲಾಖೆ ಸಲಹೆ
ಮೋಹನ್ ಕುಮಾರ್ ಡಿ ಬೊಮ್ಮಗಾನಹಳ್ಳಿ ಗುಡಿಬಂಡೆ

ಚಿತ್ತ ನೆಟ್ಟಷ್ಟು ದೂರ ಹಳದಿ ಬಣ್ಣದ ಬತ್ತಿದ ಬಯಲು, ಉಳುಮೆ ಮಾಡಿದ ಹೊಲಗಳಲ್ಲಿಮೊಳಕೆಯೊಡೆದ ಬೆಳೆಗಳು, ಮಳೆಗೆ ಕಾಯುತ್ತಲೇ ಕಮರಿ ಹೋಗಿರುವ ದೃಶ್ಯ, ನೀರಿಲ್ಲದೆ ಬಿರುಕು ಬಿಟ್ಟ ಕೆರೆಗಳು, ಒಂದೆಡೆ ರೈತರ ಕಣ್ಣಲ್ಲಿನಿರಾಸೆ, ಮತ್ತೊಂದೆಡೆ ಜಾನುವಾರಿಗೆ ಮೇವು ನೀರಿನ ಚಿಂತೆ. ಗುಡಿಬಂಡೆ ತಾಲೂಕಿನಲ್ಲಿಈ ಬಾರಿಯ ಮುಂಗಾರು ಕೈಕೊಟ್ಟ ಪರಿಣಾಮ ಕೃಷಿ ಹಿನ್ನಡೆಯತ್ತ ಸಾಗಿದ್ದು, ಬರದ ಭೀತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ.

ಸಾಮಾನ್ಯವಾಗಿ ಜುಲೈ ಅಂತ್ಯದ ವೇಳೆಗೆ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿರಾಗಿ, ನೆಲಗಡಲೆ, ತೊಗರಿ ಹಾಗೂ ಮುಸುಕಿನ ಜೋಳದ ಹಚ್ಚ ಹಸಿರಿನ ಬೆಳೆಗಳು ಕಂಗೊಳಿಸಬೇಕಿತ್ತು, ಆದರೆ ಈ ಬಾರಿ ಮಳೆ ತೀವ್ರ ಪ್ರಮಾಣದಲ್ಲಿಕೈಕೊಟ್ಟ ಪರಿಣಾಮ ಬಿತ್ತನೆ ಕುಂಠಿತಗೊಂಡಿದ್ದು, ನಡೆದಿರುವ ಅಲ್ಪ ಪ್ರಮಾಣದ ಬಿತ್ತನೆಯೂ ಮಳೆ ಕೊರತೆಯಿಂದ ಹಾಳಾಗುತ್ತಿದೆ.

ಜೂನ್ ನಲ್ಲಿಸುರಿದ ಅಲ್ಪ ಮಳೆಗೆ ಭರವಸೆ ಇಟ್ಟು ಕೆಲವು ರೈತರು ಬಿತ್ತನೆ ನಡೆಸಿದ್ದರು. ಆದರೆ ನಂತರ ಮಳೆ ಸಂಪೂರ್ಣ ನಿಂತ ಕಾರಣ ಮೊಳಕೆಯೊಡೆದ ಬೆಳೆಗಳು ಒಣಗಿ ಹೋಗಿವೆ. ಇನ್ನೂ ಅನೇಕ ರೈತರು ಮಳೆಗಾಗಿ ಕಾಯುತ್ತಲೇ ಉಳುಮೆ ಕಾರ್ಯ ಆರಂಭಿಸಿಲ್ಲ.

ಬಿತ್ತನೆ ಗುರಿ ದೂರದ ಮಾತು: ಈ ವರ್ಷ ತಾಲೂಕಿನ 7,921 ಹೆಕ್ಟೇರ್ ಪ್ರದೇಶದಲ್ಲಿವಿವಿಧ ಬೆಳೆಗಳ ಬಿತ್ತನೆ ಗುರಿ ನಿಗದಿಯಾಗಿತ್ತು. ಆದರೆ ಜು.31ರ ವೇಳೆಗೆ ಕೇವಲ 545 ಹೆಕ್ಟೇರ್ ಪ್ರದೇಶದಲ್ಲಿಮಾತ್ರ ಬಿತ್ತನೆಯಾಗಿದ್ದು, ಇದು ಒಟ್ಟು ಗುರಿಯ 6.88% ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿಶೇ.60ಕ್ಕೂ ಅಧಿಕ ಬಿತ್ತನೆಯಾಗಿದ್ದರೆ, ಈ ಬಾರಿ ಮಳೆ ಕೊರತೆ ಕೃಷಿಗೆ ಭಾರಿ ಹೊಡೆತ ನೀಡಿದೆ.

ಮುಖ್ಯ ಬೆಳೆಗಳಿಗೆ ಮಳೆ ಮಾರಕ: ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಗಳಾದ ನೆಲಗಡಲೆ, ತೊಗರಿ ಮತ್ತು ಮುಸುಕಿನ ಜೋಳ ಬಿತ್ತನೆಗೆ ಸೂಕ್ತ ಸಮಯ ಬಹುತೇಕ ಮುಗಿದಿದೆ. 4,200 ಹೆಕ್ಟೇರ್ ಗುರಿಯಿದ್ದ ಮುಸುಕಿನ ಜೋಳ ಕೇವಲ 210 ಹೆಕ್ಟೇರ್ ಗೆ ಸೀಮಿತವಾಗಿದೆ. 3,600 ಹೆಕ್ಟೇರ್ ಗುರಿಯ ರಾಗಿ ಕೇವಲ 60 ಹೆಕ್ಟೇರ್ ನಲ್ಲಿಮಾತ್ರ ಬಿತ್ತನೆಯಾಗಿದೆ. 515 ಹೆಕ್ಟೇರ್ ಗುರಿಯ ನೆಲಗಡಲೆ ಕೇವಲ 80 ಹೆಕ್ಟೇರ್ ನಲ್ಲಿ, 155 ಹೆಕ್ಟೇರ್ ಗುರಿಯ ತೊಗರಿ 95 ಹೆಕ್ಟೇರ್ ನಲ್ಲಿಮಾತ್ರ ಬಿತ್ತನೆಯಾಗಿದೆ.

ರಾಗಿ, ನವಣೆ, ಹುರಳಿಗೆ ಮಾತ್ರ ಅವಕಾಶ: ಪ್ರಸಕ್ತ ಪರಿಸ್ಥಿತಿಯಲ್ಲಿಈಗ ಉತ್ತಮ ಮಳೆಯಾದರೂ ನೆಲಗಡಲೆ, ತೊಗರಿ ಹಾಗೂ ಮುಸುಕಿನ ಜೋಳ ಬಿತ್ತನೆಗೆ ಅವಕಾಶವಿಲ್ಲ. ಆದರೆ ಆ.25ರ ವರೆಗೆ ಎಂಎಲ್ -365, ಕೆಎಂಆರ್ -316 ಸೇರಿದಂತೆ ಅಲ್ಪಾವಧಿಯ ರಾಗಿ ತಳಿಗಳು, ನವಣೆ ಹಾಗೂ ಹುರಳಿ ಬೆಳೆಗಳನ್ನು ಬಿತ್ತಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಜುಲೈನಲ್ಲಿ82% ಮಳೆ ಕೊರತೆ: ತಾಲೂಕಿನಲ್ಲಿಜೂನ್ ಮತ್ತು ಜುಲೈ ತಿಂಗಳಲ್ಲಿಒಟ್ಟು 150.4 ಮಿ.ಮೀ. ಮಳೆಯಾಗಬೇಕಿದ್ದರೆ ಕೇವಲ 122.4 ಮಿ.ಮೀ. ಮಳೆಯಾಗಿ 18% ಕೊರತೆ ದಾಖಲಾಗಿದೆ. ಅದರಲ್ಲೂಬಿತ್ತನೆಗೆ ಅತ್ಯಂತ ಪ್ರಮುಖವಾದ ಜುಲೈ ತಿಂಗಳಲ್ಲಿ87.6 ಮಿ.ಮೀ. ಮಳೆಯಾಗಬೇಕಿದ್ದರೆ ಕೇವಲ 15.8 ಮಿ.ಮೀ. ಮಳೆಯಾಗಿ 82% ಮಳೆ ಕೊರತೆ ಉಂಟಾಗಿದೆ. ಇದೇ ಬಿತ್ತನೆ ಕುಂಠಿತಕ್ಕೆ ಪ್ರಮುಖ ಕಾರಣವಾಗಿದೆ.

ವಿಮೆಗೆ ದಾಖಲೆ ಪ್ರಮಾಣದ ಸ್ಪಂದನೆ: ಬರದ ಭೀತಿ ಹಿನ್ನೆಲೆಯಲ್ಲಿಈ ಬಾರಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ರೈತರು ದಾಖಲೆ ಪ್ರಮಾಣದಲ್ಲಿಸ್ಪಂದಿಸಿದ್ದಾರೆ. ಸುಮಾರು 7 ಸಾವಿರ ನೋಂದಣಿ ಗುರಿ ಇದ್ದರೂ ಜು.30ರ ವೇಳೆಗೆ 9,792 ರೈತರು ಬೆಳೆ ವಿಮೆಗೆ ಹೆಸರು ನೋಂದಾಯಿಸುವ ಮೂಲಕ ಗುರಿ ಮೀರಿದ್ದಾರೆ. ಮುಸುಕಿನ ಜೋಳ, ನೆಲಗಡಲೆ ಹಾಗೂ ತೊಗರಿ ವಿಮೆ ನೋಂದಣಿ ಅವಧಿ ಮುಕ್ತಾಯಗೊಂಡಿದ್ದು, ರಾಗಿ ಬೆಳೆಗೆ ಆಗಸ್ಟ್ 14ರ ವರೆಗೆ ಅವಕಾಶವಿದೆ.

ಕೆರೆ ಕಟ್ಟೆಗಳು ಖಾಲಿ: ಜಾನುವಾರಿಗೂ ನೀರಿಲ್ಲ. ತಾಲೂಕಿನ ಬಹುತೇಕ ಕೆರೆ, ಕುಂಟೆ, ಚೆಕ್ ಡ್ಯಾಂ ಹಾಗೂ ಹಳ್ಳ ಕೊಳ್ಳಗಳು ಸಂಪೂರ್ಣ ಒಣಗಿ ಹೋಗಿವೆ. ಅನೇಕ ಕೆರೆಗಳು ಆಟದ ಮೈದಾನದಂತೆ ಕಾಣುತ್ತಿದ್ದು, ಕೊಳವೆಬಾವಿಗಳಲ್ಲೂನೀರಿನ ಮಟ್ಟ ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿಸಮರ್ಪಕ ಮಳೆಯಾಗದಿದ್ದರೆ ಕುಡಿಯುವ ನೀರು ಹಾಗೂ ಜಾನುವಾರು ಮೇವಿನ ತೀವ್ರ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಜುಲೈ 31ರ ವರೆಗಿನ ಬಿತ್ತನೆ ವಿವರ: ಮುಸುಕಿನ ಜೋಳ-210 ಹೆಕ್ಟೇರ್ , ಪಾಪ್ ಕಾರ್ನ್ -95 ಹೆಕ್ಟೇರ್ , ತೊಗರಿ-95 ಹೆಕ್ಟೇರ್ , ನೆಲಗಡಲೆ-80 ಹೆಕ್ಟೇರ್ , ರಾಗಿ-60 ಹೆಕ್ಟೇರ್ , ಅಲಸಂದಿ-5 ಹೆಕ್ಟೇರ್ , ಒಟ್ಟು-545 ಹೆಕ್ಟೇರ್ (ಶೇ.6.88).

ಅಲ್ಪಾವಧಿ ಬಿತ್ತನೆ ಬೀಜ ದಾಸ್ತಾನು ಲಭ್ಯ: ರಾಗಿ-37.05 ಕ್ವಿಂಟಾಲ್ , ಮುಸುಕಿನ ಜೋಳ-57.76 ಕ್ವಿಂಟಾಲ್ , ನವಣೆ-4 ಕ್ವಿಂಟಾಲ್ ದಾಸ್ತಾನು ಲಭ್ಯವಿದೆ.

ಕೋಟ್ 1..

ಜಿಲ್ಲೆಯಲ್ಲಿಮಳೆ ಕೊರತೆಯಿಂದ ಬರ ಪರಿಸ್ಥಿತಿ ಗಂಭೀರವಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗುತ್ತಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಮೇವು ಉತ್ಪಾದನೆಗೂ ಉತ್ತೇಜನ ನೀಡಲಾಗುವುದು. ್ಜಡಿತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು.

ಧಿ - ಜಿ. ಪ್ರಭು, ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ

ಕೋಟ್ 2..

ತಾಲೂಕಿನಲ್ಲಿ6.88% ಮಾತ್ರ ಬಿತ್ತನೆಯಾಗಿದೆ. ಮುಂದಿನ ದಿನಗಳಲ್ಲಿಉತ್ತಮ ಮಳೆಯಾದರೆ ಅಲ್ಪಾವಧಿಯ ರಾಗಿ, ನವಣೆ ಹಾಗೂ ಹುರುಳಿ ಬೆಳೆಯಬಹುದು. ರೈತರು ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಪಡೆದು ಬೆಳೆ ವಿಮೆ ಮಾಡಿಸಿಕೊಳ್ಳಬೇಕು.

- ಕೇಶವರೆಡ್ಡಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ, ಗುಡಿಬಂಡೆ