ಮಳೆ ಕೈಕೊಟ್ಟರೆ ಮುಂದಿನ ಹಂತ ಟ್ಯಾಂಕರ್ ನೀರು ಅವಲಂಬನೆ ಅನಿವಾರ್ಯ | ತುಮಕೂರು ಆ ಸ್ಥಿತಿಯತ್ತ ಸಾಗುತ್ತಿದೆಯೇ?ಸಿರಾಜ್ ಅಹಮ್ಮದ್ ಕೆ.ಎ., ಕೊಡಿಗೇನಹಳ್ಳಿ
ಬರದ ತೀವ್ರತೆ ಹೆಚ್ಚಾದಾಗ ಸರಕಾರ ಮೊದಲು ಕೈಗೊಳ್ಳುವ ಕ್ರಮವೇ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ. ಅಂದರೆ, ಒಂದು ಗ್ರಾಮದ ಸ್ವಂತ ನೀರಿನ ಮೂಲಗಳು ಜನರ ದಾಹ ನೀಗಿಸಲು ಸಾಕಾಗದ ಹಂತಕ್ಕೆ ತಲುಪಿವೆ ಎಂಬುದರ ಸಂಕೇತ ಅದು.
ತುಮಕೂರು ಜಿಲ್ಲೆಯಲ್ಲಿಸದ್ಯ ಟ್ಯಾಂಕರ್ ನೀರಿನ ವ್ಯಾಪಕ ಅವಶ್ಯಕತೆ ಎದುರಾಗಿಲ್ಲ. ಆದರೆ ಮಳೆ ಕೊರತೆ ಮುಂದುವರಿದರೆ, ಅಂತರ್ಜಲ ಮತ್ತಷ್ಟು ಕುಸಿದರೆ ಹಾಗೂ ಕೊಳವೆಬಾವಿಗಳ ಇಳುವರಿ ಕಡಿಮೆಯಾದರೆ, ಹಲವು ಗ್ರಾಮಗಳು ಟ್ಯಾಂಕರ್ ಅವಲಂಬನೆಯತ್ತ ಸಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಜಿಲ್ಲಾಡಳಿತ ಈಗಾಗಲೇ ಟ್ಯಾಂಕರ್ ಪೂರೈಕೆ, ಖಾಸಗಿ ಬೋರ್ ವೆಲ್ ಬಳಕೆ ಹಾಗೂ ಪರ್ಯಾಯ ಕುಡಿಯುವ ನೀರಿನ ಮೂಲಗಳ ಬಗ್ಗೆ ತಾಲೂಕುವಾರು ಸಿದ್ಧತೆ ಆರಂಭಿಸಿದೆ.
ಜಿಲ್ಲೆಯ ಬಹುತೇಕ ಗ್ರಾಮಗಳು ಕೊಳವೆಬಾವಿಗಳನ್ನೇ ಅವಲಂಬಿಸಿವೆ. ಭೂಗರ್ಭದ ನೀರಿನ ಮಟ್ಟ ಕುಸಿದಂತೆ ಮೊದಲು ಬೋರ್ ವೆಲ್ ಗಳ ಇಳುವರಿ ಕಡಿಮೆಯಾಗುತ್ತದೆ. ನಂತರ ಕೆಲವು ಬೋರ್ ವೆಲ್ ಗಳು ಸಂಪೂರ್ಣ ವಿಫಲವಾಗುತ್ತವೆ. ಆಗ ಪಂಚಾಯಿತಿಗಳಿಗೆ ಉಳಿಯುವ ಆಯ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸುವುದಷ್ಟೇ.
ಟ್ಯಾಂಕರ್ ವ್ಯವಸ್ಥೆ ತಾತ್ಕಾಲಿಕ ಪರಿಹಾರ. ಆದರೆ ಅದಕ್ಕೆ ಭಾರೀ ವೆಚ್ಚ ತಗುಲುತ್ತದೆ. ಒಂದು ಕಡೆ ಸರಕಾರಕ್ಕೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ಮತ್ತೊಂದೆಡೆ ಜನರಿಗೆ ಸಮಯಕ್ಕೆ ನೀರು ತಲುಪಿಸುವುದು ದೊಡ್ಡ ಆಡಳಿತಾತ್ಮಕ ಸವಾಲಾಗುತ್ತದೆ. ಆದ್ದರಿಂದ ತಜ್ಞರು ‘ಟ್ಯಾಂಕರ್ ಬರದ ಪರಿಹಾರವಲ್ಲ; ಅದು ಬರದ ಲಕ್ಷಣ‘ ಎಂದು ಹೇಳುತ್ತಾರೆ.
ಈಗ ಜಿಲ್ಲಾಡಳಿತದ ಮುಂದಿರುವ ದೊಡ್ಡ ಸವಾಲು, ಟ್ಯಾಂಕರ್ ಅವಲಂಬನೆ ಇನ್ನೂ ದೊಡ್ಡ ಪ್ರಮಾಣದಲ್ಲಿಆರಂಭವಾಗುವ ಮೊದಲೇ ನೀರಿನ ಮೂಲಗಳನ್ನು ಉಳಿಸುವುದು. ಕೆರೆಗಳಿಗೆ ನೀರು ಹರಿಸುವುದು, ಮಳೆ ನೀರು ಸಂಗ್ರಹಿಸುವುದು, ಕೊಳವೆ ಬಾವಿಗಳ ಮರುಪೂರೈಕೆಗೆ ಕ್ರಮ ಕೈಗೊಳ್ಳುವುದು ಹಾಗೂ ಅಗತ್ಯವಿದ್ದಲ್ಲಿಪರ್ಯಾಯ ಮೂಲಗಳನ್ನು ಸಜ್ಜುಗೊಳಿಸುವುದು ಈಗಿನ ಆದ್ಯತೆಯಾಗಿದೆ.
ಒಂದು ಗ್ರಾಮ ಟ್ಯಾಂಕರ್ ನೀರನ್ನು ಅವಲಂಬಿಸಿದೆ ಎಂದರೆ, ಅದು ಕೇವಲ ನೀರಿನ ಕೊರತೆಯಲ್ಲ; ಆ ಗ್ರಾಮದ ಸ್ವಾಭಾವಿಕ ನೀರಿನ ವ್ಯವಸ್ಥೆ ದುರ್ಬಲವಾಗಿದೆ ಎಂಬ ಎಚ್ಚರಿಕೆಯ ಸಂಕೇತ.
ತುಮಕೂರಿನಂತಹ ಅರೆ-ಬರ ಪ್ರದೇಶದಲ್ಲಿಟ್ಯಾಂಕರ್ ವ್ಯವಸ್ಥೆ ಅನಿವಾರ್ಯವಾಗಬಹುದು. ಆದರೆ ಪ್ರತಿವರ್ಷ ಅದನ್ನೇ ಪರಿಹಾರವಾಗಿ ಬಳಸುವುದು ಶಾಶ್ವತ ಮಾರ್ಗವಲ್ಲ. ಕೆರೆಗಳ ಪುನರುಜ್ಜೀವನ, ಮಳೆ ನೀರು ಸಂಗ್ರಹ, ಅಂತರ್ಜಲ ಮರುಪೂರೈಕೆ ಮತ್ತು ನೀರಿನ ಮಿತಬಳಕೆ ಇವುಗಳಿಗೆ ಆದ್ಯತೆ ನೀಡಿದರೆ ಮಾತ್ರ ಟ್ಯಾಂಕರ್ ಗಳ ಅವಲಂಬನೆ ಕಡಿಮೆಯಾಗುತ್ತದೆ.
ಬಾಕ್ಸ್
ಒಂದು ಗ್ರಾಮದಲ್ಲಿಟ್ಯಾಂಕರ್ ಯಾವಾಗ ಬರುತ್ತದೆ?
- ಬೋರ್ ವೆಲ್ ವಿಫಲವಾದಾಗ
- ಬಾವಿಗಳು ಒಣಗಿದಾಗ
- ಕೆರೆಗಳಲ್ಲಿನೀರು ಇಲ್ಲದಾಗ
- ಪರ್ಯಾಯ ನೀರಿನ ಮೂಲ ಲಭ್ಯವಿಲ್ಲದಾಗ
- ಕುಡಿಯುವ ನೀರಿನ ಪೂರೈಕೆ ಸ್ಥಗಿತವಾದಾಗ
... ಟ್ಯಾಂಕರ್ ಮೂಲಕ ನೀರು ಪೂರೈಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಫ್ಯಾಕ್ಟ್ ಫೈಲ್ ...
ಜಿಲ್ಲಾಡಳಿತದ ಮುಂಜಾಗ್ರತಾ ಕ್ರಮಗಳು..
* ಸಮಸ್ಯೆ ಇರುವ ಗ್ರಾಮಗಳ ಗುರುತಿಸುವಿಕೆ
* ಟ್ಯಾಂಕರ್ ನೀರು ಪೂರೈಕೆಗೆ ಸಿದ್ಧತೆ
* ಖಾಸಗಿ ಬೋರ್ ವೆಲ್ ಗಳ ಪಟ್ಟಿ
* ಪರ್ಯಾಯ ಕುಡಿಯುವ ನೀರಿನ ಮೂಲಗಳ ಪರಿಶೀಲನೆ
* ಗ್ರಾಮವಾರು ಮೇಲ್ವಿಚಾರಣೆ
ಬಾಕ್ಸ್
ಜಿಲ್ಲೆಯಲ್ಲಿಕುಡಿಯುವ ನೀರಿನ ಪೂರೈಕೆ ಧಿಅಂಕಿ-ಅಂಶಗಳ ನೋಟ
* ಸಮಸ್ಯೆ ಎದುರಿಸುತ್ತಿರುವ ತಾಲೂಕುಗಳು : 8
* ಸಮಸ್ಯೆ ಎದುರಿಸುತ್ತಿರುವ ಒಟ್ಟು ಗ್ರಾಮಗಳು : 67
* ನೀರು ಪೂರೈಕೆಯಾಗುತ್ತಿರುವ ಒಟ್ಟು ಗ್ರಾಮಗಳು : 28 ಗ್ರಾಮಗಳಿಗೆ ಟ್ಯಾಂಕರ್ ಹಾಗೂ 39 ಗ್ರಾಮಗಳಿಗೆ ಖಾಸಗಿ ಬೋರ್ ವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ.
ಬಾಕ್ಸ್
ಕಾಮಗಾರಿಗಳ ಪ್ರಗತಿ :
ನೀರಿನ ಅಭಾವ ಎದುರಿಸಲು ಟಾಸ್ಕ್ ಫೋರ್ಸ್ ಅನುದಾನದಡಿ ಕೊಳವೆಬಾವಿ ಕೊರೆಯುವುದು, ಪೈಪ್ ಲೈನ್ ಹಾಗೂ ಪಂಪ್ /ಮೋಟರ್ ಅಳವಡಿಕೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
* ಅನುಮೋದನೆಗೊಂಡ ಒಟ್ಟು ಕಾಮಗಾರಿಗಳು: 124
* ಪೂರ್ಣಗೊಂಡ ಕಾಮಗಾರಿಗಳು: 87 (ಶೇ. 29.84 ರಷ್ಟು ಕಾಮಗಾರಿಗಳು ಪ್ರಗತಿಯಲ್ಲಿವೆ/ಬಾಕಿ ಇವೆ)
* ಪ್ರಗತಿಯಲ್ಲಿರುವ/ಬಾಕಿ ಇರುವ ಕಾಮಗಾರಿಗಳು: 37
* ಹೆಚ್ಚು ಕಾಮಗಾರಿ ನಡೆದ ತಾಲೂಕುಗಳು: ಕೊರಟಗೆರೆ (31 ಕಾಮಗಾರಿಗಳು - 22 ಪೂರ್ಣ), ಶಿರಾ (26 ಕಾಮಗಾರಿಗಳು - 12 ಪೂರ್ಣ) ಹಾಗೂ ಚಿಕ್ಕನಾಯಕನಹಳ್ಳಿ (14 ಕಾಮಗಾರಿಗಳು - 14 ಪೂರ್ಣ).
ಕೋಟ್ :
ಇತ್ತೀಚಿಗೆ ಸಭೆ ಕರೆದಿದ್ದು, 18 ಹಳ್ಳಿಗಳಲ್ಲಿಸಣ್ಣ ಪುಟ್ಟ ಸಮಸ್ಯೆಗಳಿವೆ. ಟಾಸ್ಕ್ ಫೋರ್ಸ್ ಸಭೆಯಲ್ಲಿಚರ್ಚಿಸಿ ಹಂತ ಹಂತವಾಗಿ ಸಮಸ್ಯೆ ಬಗೆಹರಿಸಿದ್ದೇವೆ. ಪ್ರಸ್ತುತ ಯಾವುದೇ ಸಮಸ್ಯೆ ಇಲ್ಲ. 3 ಕಡೆ ಖಾಸಗಿ ಕೊಳವೆ ಬಾವಿಯಿಂದ ನೀರು ಪಡೆಯುತ್ತಿದ್ದೇವೆ. ಮೂರು ಕಡೆ ಹೊಸ ಬೋರ್ ವೆಲ್ ಗೆ ಸಿದ್ಧತೆ ಮಾಡಲಾಗಿದೆ. ಸಧ್ಯದ ಪರಿಸ್ಥಿತಿಯಲ್ಲಿಯಾವುದೇ ಸಮಸ್ಯೆ ಕಂಡು ಬಂದಿಲ್ಲ.
- ಉತ್ತಮ್ , ತಾಪಂ ಇಒ, ಮಧುಗಿರಿ
ನಾಳೆಯ ಸಂಚಿಕೆಯಲ್ಲಿ... (ಭಾಗ-10)
‘ನಗರಕ್ಕೂ ನೀರಿನ ನೆರಳು’ ತುಮಕೂರು ನಗರ ಸೇರಿದಂತೆ ನಗರ, ಪಟ್ಟಣಗಳ ಕುಡಿಯುವ ನೀರಿನ ಸ್ಥಿತಿ ಹೇಗಿದೆ? ನಗರ ಪ್ರದೇಶಗಳು ಬರವನ್ನು ಹೇಗೆ ಎದುರಿಸಲು ಸಜ್ಜಾಗಿವೆ?