ಆಪರೇಷನ್ ಬಾರ್ಬರೋಸಾ
ಜೂನ್ 22, 1941
ಅಡಾಲ್ ್ಫ ಹಿಟ್ಲರ್ ನೇತೃತ್ವದ ನಾಜಿ ಜರ್ಮನಿಯು ಸೋವಿಯತ್ ಒಕ್ಕೂಟದ ವಿರುದ್ಧ 1941ರ ಜೂನ್ 22ರಂದು ‘ಆಪರೇಷನ್ ಬಾರ್ಬರೋಸಾ’ ಎಂಬ ಸಂಕೇತ ನಾಮದೊಂದಿಗೆ ಇತಿಹಾಸದಲ್ಲೇ ಬೃಹತ್ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಜರ್ಮನಿ ಮತ್ತು ಸೋವಿಯತ್ ಒಕ್ಕೂಟದ ನಡುವೆ ಹಿಂದೆ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನು ಗಾಳಿಗೆ ತೂರಿ, ಹಿಟ್ಲರ್ ಈ ದಿಢೀರ್ ದಾಳಿಗೆ ಆದೇಶ ನೀಡಿದ್ದನು. ಈ ಒಂದು ನಿರ್ಧಾರವು ಮಹಾಯುದ್ಧದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸಿತು ಮತ್ತು ಹಿಟ್ಲರ್ ನ ಪತನಕ್ಕೆ ಮುನ್ನುಡಿ ಬರೆಯಿತು.
ಹಿಟ್ಲರ್ ಸೋವಿಯತ್ ಒಕ್ಕೂಟವನ್ನು ಆಕ್ರಮಿಸಲು ಮುಖ್ಯವಾಗಿ ಮೂರು ಕಾರಣಗಳಿದ್ದವು. ಮೊದಲನೆಯದಾಗಿ, ಜರ್ಮನ್ ಜನಸಂಖ್ಯೆಯ ಬೆಳವಣಿಗೆಗೆ ರಷ್ಯಾದ ವಿಶಾಲವಾದ ಭೂಪ್ರದೇಶ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು ಆತನ ಉದ್ದೇಶವಾಗಿತ್ತು. ಎರಡನೆಯದಾಗಿ, ಸೋವಿಯತ್ ಒಕ್ಕೂಟದ ಕಮ್ಯುನಿಸಂ ಸಿದ್ಧಾಂತವನ್ನು ಸಂಪೂರ್ಣವಾಗಿ ನಾಶಪಡಿಸುವುದು ಮತ್ತು ಮೂರನೆಯದಾಗಿ, ಕಾಕಸಸ್ ಪ್ರದೇಶದಲ್ಲಿನ ಹೇರಳವಾದ ತೈಲ ನಿಕ್ಷೇಪಗಳನ್ನು ವಶಪಡಿಸಿಕೊಳ್ಳುವುದು ಜರ್ಮನಿಯ ತಂತ್ರವಾಗಿತ್ತು. ಈ ಗುರಿಗಳನ್ನು ತಲುಪಲು ಜರ್ಮನಿಯು ಸುಮಾರು 1,800 ಮೈಲಿಗಳಷ್ಟು ವಿಸ್ತಾರವಾದ ಗಡಿಯಲ್ಲಿಏಕಕಾಲಕ್ಕೆ ದಾಳಿ ಮಾಡಲು ಸರ್ವಸನ್ನದ್ಧವಾಯಿತು.
ಸುಮಾರು 30 ಲಕ್ಷಕ್ಕೂ ಹೆಚ್ಚು ಆಕ್ಸಿಸ್ ಅಂದರೆ ಜರ್ಮನಿ ಮತ್ತು ಅದರ ಮಿತ್ರರಾಷ್ಟ್ರಗಳ ಸೈನಿಕರು, ಸಾವಿರಾರು ಟ್ಯಾಂಕುಗಳು ಮತ್ತು ಯುದ್ಧವಿಮಾನಗಳೊಂದಿಗೆ ರಷ್ಯಾದ ಗಡಿಯೊಳಗೆ ನುಗ್ಗಿದರು. ಜರ್ಮನಿಯು ತನ್ನ ಸುಪ್ರಸಿದ್ಧ ‘ಬ್ಲಿಟ್ ್ಜಕ್ರಿಗ್ ’ ಎಂಬ ಮಿಂಚಿನ ದಾಳಿಯ ತಂತ್ರವನ್ನು ಬಳಸಿಕೊಂಡು ಸೋವಿಯತ್ ಪಡೆಗಳನ್ನು ದಿಗ್ಭ್ರಮೆಗೊಳಿಸಿತು. ಕಾರ್ಯಾಚರಣೆಯ ಆರಂಭಿಕ ವಾರಗಳಲ್ಲಿಜರ್ಮನ್ ಪಡೆಗಳು ಅದ್ಭುತ ಯಶಸ್ಸನ್ನು ಸಾಧಿಸಿದವು. ಲಕ್ಷಗಟ್ಟಲೆ ಸೋವಿಯತ್ ಸೈನಿಕರನ್ನು ಸೆರೆಹಿಡಿಯಲಾಯಿತು.
ಆದರೆ, ಈ ಆಕ್ರಮಣವು ಜರ್ಮನಿ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಸೋವಿಯತ್ ಒಕ್ಕೂಟದ ನಾಯಕ ಜೋಸೆಫ್ ಸ್ಟಾಲಿನ್ ಮತ್ತು ರಷ್ಯಾದ ಜನತೆ ತಾಯ್ನಾಡಿನ ರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧರಾದರು. ಜರ್ಮನ್ ಸೈನಿಕರಿಗೆ ಯಾವುದೇ ಆಹಾರ ಅಥವಾ ಆಶ್ರಯ ಸಿಗದಂತೆ ತಾವು ಹಿಮ್ಮೆಟ್ಟುವಾಗ ಹಳ್ಳಿಗಳು, ಬೆಳೆಗಳು ಮತ್ತು ಕಾರ್ಖಾನೆಗಳನ್ನು ತಾವೇ ನಾಶಪಡಿಸಿದರು. ಇದರೊಂದಿಗೆ ರಷ್ಯಾದ ರಸ್ತೆಗಳ ಕೊರತೆ ಮತ್ತು ವಿಶಾಲವಾದ ಭೂಪ್ರದೇಶವು ಜರ್ಮನಿಯ ಸರಬರಾಜು ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿತು.
ರಷ್ಯಾವನ್ನು ಕೆಲವೇ ವಾರಗಳಲ್ಲಿಮಣಿಸಬಹುದು ಎಂಬ ಹಿಟ್ಲರ್ ನ ಅತಿಯಾದ ಆತ್ಮವಿಶ್ವಾಸವು ಸುಳ್ಳಾಯಿತು. ಏಕಕಾಲದಲ್ಲಿಪಶ್ಚಿಮದಲ್ಲಿಬ್ರಿಟನ್ ಮತ್ತು ಪೂರ್ವದಲ್ಲಿರಷ್ಯಾ ಯುದ್ಧ ಮಾಡಬೇಕಾಗಿ ಬಂದಿದ್ದರಿಂದ ಜರ್ಮನಿಯ ಸಂಪನ್ಮೂಲಗಳು ಕ್ಷೀಣಿಸಿದವು. ಅಂತಿಮವಾಗಿ, ಈ ಕಾರ್ಯಾಚರಣೆಯ ವೈಫಲ್ಯವೇ ನಾಜಿ ಜರ್ಮನಿಯ ಪತನಕ್ಕೆ ಕಾರಣವಾಯಿತು.

