ಮಕ್ಕಳ ಕಥೆ

Contributed byshubha.hegde@timesgroup.com|Vijaya Karnataka
simba lion and life lessons a story for childrens education

ಬುದ್ಧಿ ಕಲಿತ ಸಿಂಬು

ಸಂಪಿಗೆ ಕಾಡಿನಲ್ಲಿಒಂದು ಸಿಂಹ ತನ್ನ ಮಗ ಸಿಂಬು ಸಿಂಹದ ಜೊತೆ ವಾಸವಾಗಿತ್ತು. ಅಪ್ಪ ಕಾಡಿನ ರಾಜ ಎನಿಸಿಕೊಂಡಿದ್ದರಿಂದ ಸಿಂಬು ಸಿಂಹ ಯಾರ ಮಾತನ್ನೂ ಕೇಳದೆ ಮನಸಿಗೆ ಬಂದ ಹಾಗೆ ವರ್ತಿಸುತಿತ್ತು. ಅಪ್ಪ ಬೇಟೆಯ ಕಲೆಯನ್ನು ಹೇಳಿಕೊಡುತ್ತೇನೆ ನನ್ನ ಜೊತೆಗೆ ಬಾ ಎಂದು ಬಹಳಷ್ಟು ಬಾರಿ ಕರೆದರೂ ಸಿಂಬು ಸಿಂಹ ಹೋಗುತ್ತಲೇ ಇರಲಿಲ್ಲ.

ಹಾಗೆ ದಿನಗಳು ಉರುಳಿ ಸಿಂಬು ಸಿಂಹ ದೊಡ್ಡದಾಯಿತು. ಅಪ್ಪ ಸಿಂಹಕ್ಕೆ ವಯಸ್ಸಾಗುತ್ತಾ ದೇಹ ದುರ್ಬಲವಾಗತೊಡಗಿತ್ತು. ಅದೊಂದು ದಿನ ಮಗನನ್ನು ಕರೆದು, ‘ಇನ್ನು ನನ್ನ ಬಳಿ ಬೇಟೆಯಾಡಲು ಸಾಧ್ಯವಿಲ್ಲ. ನೀನು ಆಹಾರ ಸಂಪಾದನೆ ಮಾಡಿಕೊಂಡು ಬರಬೇಕು’ ಎಂದಿತು. ‘ಸರಿ’ ಎಂದು ತಲೆಯಾಡಿಸಿದ ಸಿಂಬು ಪಕ್ಕದಲ್ಲಿಯೇ ಊರ ಹೊರಗೆ ಶನಿಯಜ್ಜನ ಶೆಡ್ಡಿನಲ್ಲಿನೂರಾರು ಕುರಿಗಳಿವೆ. ರಾತ್ರಿ ಹೋಗಿ ದಿನ ಒಂದು ಕುರಿಯನ್ನು ಕದ್ದು ತಂದರೆ ಆಹಾರದ ಸಮಸ್ಯೆ ಮುಗಿಯುತ್ತದೆ ಎಂದುಕೊಂಡು ಆ ದಿನ ರಾತ್ರಿಯಿಂದಲೇ ದಿನವೂ ಶನಿಯಜ್ಜನ ಶೆಡ್ಡಿನಿಂದ ಕುರಿಯನ್ನು ಕದ್ದು ತರತೊಡಗಿತು. ಕದ್ದು ತರುತ್ತಿದ್ದ ಸಿಂಬುಗೆ ಅಪ್ಪ ಸಿಂಹ, ‘ಹೀಗೆ ಮಾಡುವುದು ಸರಿಯಲ್ಲಸಿಂಬು. ಮುಂದೆ ನಿನಗೆ ಊರ ಜನರಿಂದ ಅಪಾಯವಾಗುತ್ತದೆ. ಹಾಗೆ ಮಾಡಬೇಡ’ ಎಂದು ಬುದ್ಧಿ ಹೇಳಿತು. ಆದರೆ ಸಿಂಬು ಸಿಂಹ ಅಪ್ಪನ ಮಾತನ್ನು ಕೇಳದೆ ತನ್ನ ಕಾರ ್ಯವನ್ನು ಮುಂದುವರಿಸಿತ್ತು.

ಮನುಷ್ಯ ಲೋಕದಲ್ಲಿಕೊರೊನಾ ಎನ್ನುವ ರೋಗವೊಂದು ಬಂದು ಜನ ಸಾಯುತ್ತಿರುವ ಸುದ್ದಿ ಕಾಡಿಗೂ ತಲುಪಿತು. ಕಾಡಿನ ರಾಜ ಸಿಂಹ ಎಲ್ಲಾಪ್ರಾಣಿಗಳನ್ನು ಕರೆದು ‘ಈ ರೋಗ ಪ್ರಾಣಿಗಳಿಗೆ ಬರುತ್ತದೋ ಇಲ್ಲವೋ ಸರಿಯಾಗಿ ಮಾಹಿತಿಯಿಲ್ಲ. ಆದರೆ ಮುನ್ನೆಚ್ಚರಿಕೆ ಒಳ್ಳೆಯದು. ನಾವು ಕೂಡ ಅವರಂತೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳೋಣ. ರೋಗವನ್ನು ತಡೆಗಟ್ಟುವ ಗಿಡಮೂಲಿಕೆಗಳನ್ನು ಸೇವಿಸೋಣ’ ಎಂದು ಸಲಹೆ ನೀಡಿತು. ಎಲ್ಲಾಪ್ರಾಣಿಗಳು ಅದರಂತೆ ನಡೆಯತೊಡಗಿದವು.

ಕೆಲದಿನಗಳ ಬಳಿಕ ಕೊರೊನಾ ಕಾರಣದಿಂದಾಗಿ ಪಕ್ಕದ ಹಳ್ಳಿಯಲ್ಲೂಕೂಡ ಲಾಕ್ಡೌನ್ ಕಾರಣಕ್ಕೆ ಜನ ಹೊರಗಡೆ ಬರುತ್ತಿರಲಿಲ್ಲ. ಇದೇ ಉತ್ತಮ ಅವಕಾಶವೆಂದು ಭಾವಿಸಿದ ಸಿಂಬು ಸಿಂಹ ಬೆಳಗ್ಗೆ ಎರಡೆರಡು ಕುರಿಗಳನ್ನು ಕದ್ದು ತರತೊಡಗಿತು. ಇದರಿಂದ ಬೇಸರಗೊಂಡ ಅಪ್ಪ ಸಿಂಹ, ‘ಸಿಂಬು, ಬೇಟೆ ನಮಗೆ ಅನಿವಾರ ್ಯ. ಹಾಗೆಂದು ನಾವು ಅನವಶ್ಯಕ ಪ್ರಾಣಿಗಳನ್ನು ಕೊಲ್ಲಬಾರದು. ಈ ಕೊರೊನಾ ಸಮಯದಲ್ಲಿನೀನು ಊರೊಳಗೆ ಹೋಗುವುದು ಕೂಡ ಸರಿಯಲ್ಲ’ ಎಂದು ಬುದ್ಧಿ ಹೇಳಿತು. ಆದರೆ ಸಿಂಬು ಅಪ್ಪನ ಮಾತನ್ನು ಕೇಳಲೇ ಇಲ್ಲ.

ಅದೊಂದು ದಿನ ಶನಿಯಜ್ಜನಿಗೂ ಕೊರೊನಾ ಬಂದು ಅವನು ತೀರಿ ಹೋದ. ಅವನ ಕುರಿಗಳಲ್ಲೂಸೋಂಕು ಕಾಣಿಸಿತ್ತು. ಸಿಂಬುಗೆ ಗೊತ್ತಿರಲಿಲ್ಲ. ಎಂದಿನಂತೆ ಕುರಿಯನ್ನು ಕದ್ದು ತಂದಿತ್ತು. ಅದನ್ನು ಸೇವಿಸಿದ ಅಪ್ಪ ಸಿಂಹನಲ್ಲೂಕೊರೊನಾ ಕಾಣಿಸಿಕೊಂಡು ಅದು ಸತ್ತು ಹೋಯಿತು. ಕಾಡಿನ ವೈದ್ಯ ಚಂಪೂ ಕೋತಿ ತಿಳಿಸಿದ ಮೇಲೆ ಸಿಂಬುಗೆ ತನ್ನ ಅಪ್ಪನ ಸಾವಿಗೆ ತಾನೇ ಕಾರಣನಾದೆನಲ್ಲಎಂದು ಬೇಸರವಾಗಿ ಅತ್ತಿತ್ತು.

ಒಂದಷ್ಟು ದಿನಗಳ ನಂತರ ಹಸಿವು ಹೆಚ್ಚಾದಂತೆ ಏನಾದರಾಗಲಿ ಎಂದು ಮತ್ತೆ ಬೆಳಗ್ಗೆಯ ಹೊತ್ತಿನಲ್ಲಿಶನಿಯಜ್ಜನ ಶೆಡ್ಡಿನ ಕಡೆಗೆ ಕುರಿಯನ್ನು ಕದ್ದು ತರಲು ಹೊರಟಿತು. ಶೆಡ್ಡಿನ ಹತ್ತಿರ ಬರುತ್ತಿದ್ದಂತೆ ಸಿಂಬು ಸಿಂಹದ ನಿರಂತರ ಕಳ್ಳತನದ ಬಗೆಗೆ ತಿಳಿದು ಕೋಪಗೊಂಡಿದ್ದ ಊರಿನ ಜನರು ದೊಣ್ಣೆ ಬಡಿಗೆ ಕಲ್ಲುಗಳಿಂದ ಹೊಡೆದು ಸಿಂಬು ಸಿಂಹವನ್ನು ಹೆದರಿಸಿ ಓಡಿಸಿಬಿಟ್ಟರು. ಅವರಿಂದ ಹೇಗೋ ತಪ್ಪಿಸಿಕೊಂಡು ಬಂದ ಸಿಂಬುಗೆ ಗಾಯಗಳಾಗಿ ನರಳಿತು. ಕೊನೆಗೊಮ್ಮೆ ಹಸಿವು ತಡೆಯದಾದಾಗ ಕಾಡಿನ ಒಳಗಡೆ ಹುಲ್ಲುಮೇಯುತ್ತಿದ್ದ ಮರಿಜಿಂಕೆಯೊಂದನ್ನು ಬೇಟೆಯಾಡಲು ಅಟ್ಟಿಸಿಕೊಂಡು ಹೋಯಿತು. ಸ್ವಲ್ಪ ದೂರ ಹೋಗುವಷ್ಟರಲ್ಲೇ ಜಿಂಕೆಯ ದೊಡ್ಡ ಹಿಂಡು ಸಿಂಬುನೆದುರಿಗೆ ಬಂದು ಸುತ್ತುವರಿದು ನಿಂತು ಬಿಟ್ಟವು. ಸಿಂಬು ಸಿಂಹ ಹೆದರಿಕೊಂಡು ಅಲ್ಲಿಂದ ವಾಪಾಸು ತನ್ನ ಗುಹೆಯ ಬಳಿ ಬಂದಿತು.

ಆ ದಿನ ಸಂಜೆ ಸಿಂಬುವನ್ನು ನೋಡಲು ಅದರ ಸ್ನೇಹಿತ ಪಕ್ಕದ ಕಾಡಿನಿಂದ ಚಾಂಗಿ ಸಿಂಹವು ಬಂದಿತ್ತು. ‘ಸಿಂಬು, ದೊಡ್ಡವರು ಹೇಳಿದ ಮಾತನ್ನು ನಾವು ಕೇಳಬೇಕು. ಬದುಕಲು ಬೇಕಾದ ಕೌಶಲ ಕಲಿಯಬೇಕು. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಎಲ್ಲವೂ ಸುಭವಾಗಿ ಸಿಗುವಂತಿದ್ದರೆ ಪರಿಶ್ರಮಕ್ಕೆ ಬೆಲೆ ಇರುವುದಿಲ್ಲ. ಬದುಕಿನ ಪ್ರತಿಯೊಂದು ಏಳುಬೀಳಿನಲ್ಲಿಪಾಠಗಳಿರುತ್ತವೆ. ನಾವು ಅರ್ಥ ಮಾಡಿಕೊಳ್ಳಬೇಕು. ಭವಿಷ್ಯದ ಬಗ್ಗೆ ಆಲೋಚಿಸು. ನಿನಗೆ ನಾನು ಬೇಟೆಯಾಡುವುದನ್ನು ಹೇಳಿಕೊಡುತ್ತೇನೆ. ಕಲಿತುಕೊಳ್ಳುವೆಯಾ? ನಿನಗೆ ಒಳ್ಳೆಯದಾಗುತ್ತದೆ ಎಂದಿತು. ಸಿಂಬು ಸಿಂಹ ನಗುತ್ತಾ ಆಗಲಿ ಎಂದು ತಲೆಯಾಡಿಸಿತು.

ನರೇಂದ್ರ ಎಸ್ ಗಂಗೊಳ್ಳಿ