ಪುಂಜಾ ಸ್ಪಿನ್ ಮೋಡಿಗೆ ಮೈಸೂರು ಮಂಕು

Contributed byManjunathaSwamy KS|Vijaya Karnataka
shivamogga yodhas clinches 90 run victory ksca t20 tournament kickoff

ಪುಂಜಾ ಸ್ಪಿನ್ ಮೋಡಿಗೆ ಮೈಸೂರು ಮಂಕು

*90 ರನ್ ಗಳ ಭರ್ಜರಿ ಜಯದೊಂದಿಗೆ ಶಿವಮೊಗ್ಗ ಯೋಧಾಸ್ ಶುಭಾರಂಭ

ವಿಕ ಸುದ್ದಿಲೋಕ ಮೈಸೂರು

ಡಿಎಸಿಸಿಎಸ್ ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ20 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿಶಿವಮೊಗ್ಗ ಯೋಧಾಸ್ ತಂಡವು ಮೈಸೂರು ವಾರಿಯರ್ಸ್ ವಿರುದ್ಧ 90 ರನ್ ಗಳ ಭರ್ಜರಿ ಜಯ ಸಾಧಿಸಿ ಅಭಿಯಾನವನ್ನು ಶುಭಾರಂಭ ಮಾಡಿತು.

ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ಯೋಧಾಸ್ 20 ಓವರ್ ಗಳಲ್ಲಿ8 ವಿಕೆಟ್ ಗೆ 190 ರನ್ ಕಲೆಹಾಕಿತು. ಆರಂಭಿಕರಾದ ಲುವ್ ನಿತ್ ಸಿಸೋಡಿಯಾ (58) ಹಾಗೂ ತುಷಾರ್ ಸಿಂಗ್ (33) ಮೊದಲ ವಿಕೆಟ್ ಗೆ 79 ರನ್ ಸೇರಿಸಿ ಭದ್ರ ಅಡಿಪಾಯ ಹಾಕಿದರು. ನಾಯಕ ಸ್ಮರಣ್ ರವಿಚಂದ್ರನ್ (36) ಮತ್ತು ಹರ್ಷಿಲ್ ಧರ್ಮಾನಿ (36) ಮಧ್ಯಮ ಕ್ರಮಾಂಕದಲ್ಲಿಉಪಯುಕ್ತ ಕೊಡುಗೆ ನೀಡಿದರು.

191 ರನ್ ಗಳ ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್ ಆರಂಭದಲ್ಲೇ ಕುಸಿತಕ್ಕೊಳಗಾಗಿ 14.5 ಓವರ್ ಗಳಲ್ಲಿಕೇವಲ 100 ರನ್ ಗಳಿಗೆ ಆಲೌಟ್ ಆಯಿತು. ಎಸ್ .ಯು.ಕಾರ್ತಿಕ್ (16) ಹಾಗೂ ರಿತೇಶ್ ಭಟ್ಕಳ್ (17) ಮಾತ್ರ ಅಲ್ಪ ಪ್ರತಿರೋಧ ತೋರಿದರು.

ಶಿವಮೊಗ್ಗದ ಬೌಲರ್ ಗಳ ದಾಳಿಗೆ ವಾರಿಯರ್ಸ್ ತತ್ತರಿಸಿತು. ಅಭಿಲಾಷ್ ಶೆಟ್ಟಿ (2-10) ಮತ್ತು ಶ್ರೀಶ ಆಚಾರ್ (2-9) ಆರಂಭಿಕ ಆಘಾತ ನೀಡಿದರೆ, ಐಪಿಎಲ್ ನಲ್ಲಿಗಮನ ಸೆಳೆದ ಯುವ ಲೆಗ್ ಸ್ಪಿನ್ನರ್ ಯಶ್ ರಾಜ್ ಪುಂಜಾ 4 ವಿಕೆಟ್ ಗಳನ್ನು ಕಬಳಿಸಿ (4-30) ಪಂದ್ಯದ ಹೀರೋ ಎನಿಸಿದರು.

ಇನ್ನೊಂದು ಪಂದ್ಯದಲ್ಲಿ, ಬೆಂಗಳೂರು ಬ್ಲಾಸ್ಟರ್ಸ್ ತಂಡವು ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ 6 ವಿಕೆಟ್ ಗಳ ರೋಚಕ ಜಯ ದಾಖಲಿಸಿತು. 202 ರನ್ ಗಳ ಗುರಿಯನ್ನು ಬೆಂಗಳೂರು ತಂಡ ಕೊನೆಯವರೆಗೂ ಹೋರಾಡಿ 4 ವಿಕೆಟ್ ನಷ್ಟಕ್ಕೆ ತಲುಪಿತು. ಭುವನ್ ಮೋಹನ್ ರಾಜು (56) ಹಾಗೂ ಪ್ರವೀಣ್ ದುಬೆ ಅಜೇಯ 32 ರನ್ ಗಳೊಂದಿಗೆ ಗೆಲುವಿನ ರೂವಾರಿಗಳಾದರು.