ಸಾಹಿತ್ಯ ಸರ್ಕಲ್

Contributed byvidyarashmi.bhat@timesgroup.com|Vijaya Karnataka
professor k keshava sharmas clear guide in the development of kannada literature

ಬರಹದ ದಾರಿ ತೋರಿದವರು

------------

-ಪ್ರೊ.ಕೆ.ಕೇಶವ ಶರ್ಮ

----

ನನಗೆ ಹೈಸ್ಕೂಲ್ ಮೇಷ್ಟಾ್ರಗಿದ್ದ ವಿ.ಗ. ನಾಯಕ ನನ್ನ ಮೊದಲ ಕವನಸಂಕಲನ ಪ್ರಕಟಿಸಿದರು. ಆಮೇಲೆ ನನ್ನ ಸಣ್ಣಕತೆ, ಲೇಖನಗಳನ್ನೂ ಅವರೇ ಪ್ರಕಟಿಸಿದ್ದು. ಅವರಿಂದ ನನಗೆ ತುಂಬಾ ಪ್ರೀತಿ ಸಿಕ್ಕಿತು. ಡಿಗ್ರಿಗೆ ಬಂದಾಗ ಅಮೃತ ಸೋಮೇಶ್ವರ ಮೇಷ್ಟು್ರ ಸಿಕ್ಕಿದರು. ಅವರು ಕೂಡ ನನ್ನಲ್ಲಿಸಾಹಿತ್ಯದ ಅಭಿರುಚಿಯನ್ನು ಮೂಡಿಸಿದರು. ಇವರೆಲ್ಲರ ಒಡನಾಟ ನನ್ನ ಬೌದ್ಧಿಕ ಬೆಳವಣಿಗೆಗೆ ಕಾರಣವಾಯಿತು.

1984ರಿಂದ ನಾನು ಕೆ.ವಿ. ನಾರಾಯಣ ಅವರ ಸಂಪರ್ಕದಲ್ಲಿದ್ದೇನೆ. ಪ್ರತಿ ತಿಂಗಳೂ ನಮ್ಮ ನಡುವೆ ಮಾತುಕತೆ, ಚರ್ಚೆ-ಸಂವಾದ ನಡೆಯುತ್ತದೆ. ನನ್ನ ಪ್ರಶ್ನೆಗಳನ್ನು ಆಲಿಸಿ ಸಂದೇಹಗಳನ್ನು ನಿವಾರಿಸುತ್ತಾರೆ. ಅಷ್ಟೇ ಅಲ್ಲ, ಸಲಹೆಗಳ ಜತೆಗೆ ಅವರು ಕೆಲವೊಂದು ಪ್ರಶ್ನೆಗಳನ್ನೂ ಎತ್ತುತ್ತಾರೆ. ಆ ಮೂಲಕ ನನ್ನ ವೈಚಾರಿಕತೆಯನ್ನು ಮತ್ತಷ್ಟು ಮೊನಚುಗೊಳಿಸುತ್ತಾರೆ. ಅವರಿಗೆ ತಾನು ಕನ್ನಡದ ಶ್ರೇಷ್ಠ ಬರಹಗಾರ ಎನ್ನುವ ಗರ್ವ ಇಲ್ಲ. ಸಜ್ಜನಿಕೆಯ ವ್ಯಕ್ತಿತ್ವ ಅವರದ್ದು. ಕೆಲವು ವಿಚಾರಗಳಲ್ಲಿಅವರ ಜತೆಗೆ ನನಗೆ ಭಿನ್ನಾಭಿಪ್ರಾಯ ಇದೆ. ಆದರೆ, ಅವರು ಅದನ್ನು ಸಹಿಸುತ್ತಾರೆ. ವೈಚಾರಿಕ ಭಿನ್ನಾಭಿಪ್ರಾಯಗಳು ಎಂದಿಗೂ ನಮ್ಮ ಸ್ನೇಹಕ್ಕೆ ಧಕ್ಕೆ ತಂದಿಲ್ಲ. ಅವರು ನನ್ನನ್ನು ತುಂಬಾ ಪ್ರೀತಿಯಿಂದ ನಡೆಸಿಕೊಂಡದ್ದು ಮಾತ್ರವಲ್ಲದೆ, ನನ್ನ ಅನೇಕ ಬರಹಗಳಿಗೂ ಕಾರಣವಾಗಿದ್ದಾರೆ.

ಒಮ್ಮೆ ಶಿವರಾಮ ಕಾರಂತರ ಬಗ್ಗೆ ಮಾತನಾಡುವಾಗ, ‘ನೋಡಿ... ಕಾರಂತರ ಬಗ್ಗೆ ಕನ್ನಡ ವಿಮರ್ಶಕರಲ್ಲಿಸಣ್ಣ ಅವಜ್ಞೆ ಇದೆ. ಅವರ ಬಗ್ಗೆ ನಾವು ತುಂಬಾ ಕೆಲಸ ಮಾಡುವುದು ಇದೆ. ನೀವು ಅದರ ಬಗ್ಗೆ ಕೆಲಸ ಮಾಡಿ’ ಎಂದು ಹೇಳಿದ್ದರು. ಅದಾದ ಬಳಿಕ ನಾನು ಕಾರಂತರ ಬಗ್ಗೆ ಮೂರು ಪುಸ್ತಕಗಳನ್ನು ಬರೆದೆ. ಇನ್ನೊಂದು ಪುಸ್ತಕ ಬರೆದಾಗಿದೆ, ಪ್ರಕಟಣೆಯ ಹಂತದಲ್ಲಿದೆ.

ಇನ್ನೊಮ್ಮೆ, ನಾನು ಕನ್ನಡದ ಕವಯಿತ್ರಿಯರ ಬಗ್ಗೆ ಪುಸ್ತಕ ಬರೆಯುವ ಯೋಚನೆ ಮಾಡಿದೆ. 70ರ ದಶಕದ ನಂತರ ಕವಯತ್ರಿಯರ ಬಗ್ಗೆ ಒಂದು ರೀತಿಯ ಮೌನ ಇದೆ. ಮುಖ್ಯ ವಿಮರ್ಶಕರು ಅವರ ಬಗ್ಗೆ ಯಾವುದೇ ಚರ್ಚೆ ಮಾಡುವುದಕ್ಕೆ ಹೋಗುತ್ತಿಲ್ಲಎಂದು ನಾನು ಈ ಯೋಚನೆ ಮಾಡಿದ್ದೆ. ಇದನ್ನು ಕೆ.ವಿ. ನಾರಾಯಣ ಅವರ ಬಳಿ ಹೇಳಿದೆ. ‘ಯಾವ ವಿಷಯದ ಮೇಲೆ ಪುಸ್ತಕ ಬರೆಯುತ್ತೀರಿ?’ ಎಂದು ಕೇಳಿದರು.

‘ಮಹಿಳಾ ಕಾವ್ಯದಲ್ಲಿಅನನ್ಯತೆ, ಹುಡುಕಾಟ, ಕಾಲ ಮತ್ತು ನಿರೂಪಣೆ’ ಎಂದೆ ನಾನು. ಆಗ ಅವರು, ‘ಹೆಚ್ಚಾಗಿ ಕವಯಿತ್ರಿಯರು ಸ್ವಂತಿಕೆಯ ಹುಡುಕಾಟವನ್ನು ಮಾಡುವುದು ಕಾವ್ಯದಲ್ಲಿ. ಅವರ ಸಾಮಾಜಿಕ ಧೋರಣೆ ವ್ಯಕ್ತವಾಗುವುದು ಕಥೆಗಳಲ್ಲಿ’ ಎಂದು ಹೇಳಿದರು. ಈ ಮಾತು ನನ್ನ ಪುಸ್ತಕ ರಚನೆಯ ಸಿದ್ಧತೆಗೆ ಬಹಳ ಅನುಕೂಲವಾಯಿತು. ಆ ದಾರಿಯಲ್ಲೇ ನಾನೀಗ ಪುಸ್ತಕಕ್ಕೆ ವಿಷಯಗಳನ್ನು ಹುಡುಕುತ್ತಿದ್ದೇನೆ.