ಅಪ್ಪನ ವ್ಯಕ್ತಿತ್ವ ಮಕ್ಕಳ ಪ್ರತಿಬಿಂಬ
---
ಜೂನ್ 21 ಅಪ್ಪನ ದಿನ.
ಒಬ್ಬ ಸಾಮಾನ್ಯ ವ್ಯಕ್ತಿ ಮಕ್ಕಳ ಬಾಳಲ್ಲಿಅಪ್ಪನಾಗಿ, ದಾರಿ ತೋರುವ ಹೀರೋ ಆಗಿ ಬದಲಾಗುತ್ತಾನೆ. ಆತ ತನ್ನ ಮಕ್ಕಳ ಮೇಲೆ ಬೀರುವ ಪ್ರಭಾವ ಸಾಮಾನ್ಯವಲ್ಲ.
----
- ಡಾ. ಸಿಬಂತಿ ಪದ್ಮನಾಭ ಕೆ.ವಿ.
------
‘ನಿನ್ನ ಆತ್ಮಸಾಕ್ಷಿಗೆ ನಾನು ಅಡ್ಡಿಬರುವುದಿಲ್ಲ; ನೀನು ಹೋಗು; ಆದರೆ ಇಂದಲ್ಲ, ನಾಳೆ. ನನ್ನೊಂದಿಗೆ ಒಂದು ತುತ್ತು ಉಂಡು ಇದೊಂದು ರಾತ್ರಿ ಇದ್ದು ನಾಳೆ ಬೆಳಗ್ಗೆ ಹೊರಡು’ - ಶೋಕಸಾಗರದಲ್ಲಿಮುಳುಗಿದ್ದ ಚಕ್ರವರ್ತಿ ದಶರಥ ಈ ರೀತಿಯಾಗಿ ರಾಮನ್ನು ಬೇಡಿಕೊಂಡನಂತೆ. ರಾಮ ಒಪ್ಪಲೇ ಇಲ್ಲ. ಅವನಿಗೆ ಅದಕ್ಕಿಂತಲೂ ದೊಡ್ಡ ಬದ್ಧತೆಯಿತ್ತು- ಪಿತೃವಾಕ್ಯ ಪರಿಪಾಲನೆ. ಇಂದು ಇದ್ದು ನಾಳೆ ಹೋಗು ಎಂಬುದೂ ಪಿತೃವಾಕ್ಯವೇ. ಆದರೆ ಅಪ್ಪ ಚಿಕ್ಕಮ್ಮ ಕೈಕೇಯಿಗೆ ಕೊಟ್ಟ ಮಾತನ್ನು ನಡೆಸಿಕೊಡುವುದು ರಾಮನಿಗೆ ಇದಕ್ಕಿಂತಲೂ ಹೆಚ್ಚಿನ ಹೊಣೆಗಾರಿಕೆಯಾಗಿತ್ತು. ಹದಿನಾಲ್ಕು ವರ್ಷ ವನವಾಸ!
ರಾಮ ಎಲ್ಲಒತ್ತಾಯಗಳಿಗೂ ಬೆನ್ನು ಮಾಡಿ ಹೊರಟೇಬಿಟ್ಟ. ಎಂತಹ ಪರಮ ಆದರ್ಶ ಅದು! ಅಪ್ಪ ತನ್ನ ಮುಂದಿಟ್ಟ ಬೇಡಿಕೆಗಿಂತಲೂ ಆತ ತನ್ನ ಹೆಸರಲ್ಲಿಬೇರೆಯವರಿಗೆ ಕೊಟ್ಟ ಮಾತು ಹುಸಿಯಾಗದಂತೆ ನೋಡಿಕೊಳ್ಳುವುದು ತನ್ನ ಕರ್ತವ್ಯ ಎಂದು ಆತ ಭಾವಿಸಿದ್ದ. ಎಂಬತ್ತು ಸಾವಿರ ವರ್ಷ ಆರ್ಯಾವರ್ತವನ್ನು ಆಳಿದ ದಶರಥನ ಹೆಸರು ಭರತಖಂಡದ ಪರಂಪರೆಯಲ್ಲಿಶಾಶ್ವತವಾಗಿ ಉಳಿಯುವಂತೆ ಮಾಡಿದ್ದು ಶ್ರೀರಾಮ ಮತ್ತು ಆತನ ಸಹೋದರರು.
ಹುಟ್ಟುತ್ತಲೇ ಅಣ್ಣತಮ್ಮಂದಿರು, ಬೆಳೆಯುತ್ತಲೇ ದಾಯಾದಿಗಳು ಎಂಬ ಮಾತು ಜನಜನಿತ. ಆದರೆ ರಾಮ, ಲಕ್ಷತ್ರ್ಮಣ, ಭರತ, ಶತ್ರುಘ್ನ- ನಾಲ್ವರೂ ಇದಕ್ಕೆ ಅಪವಾದವೆಂಬಂತೆ ಬದುಕಿದರು. ರಾಮ-ಲಕ್ಷತ್ರ್ಮಣರು ಒಂದೇ ತೊಟ್ಟಿಲಲ್ಲಿಬೆಳೆದವರು, ಒಬ್ಬರ ಕಾಲ್ಗೆಜ್ಜೆ ಸದ್ದಿಗೆ ಇನ್ನೊಬ್ಬರು ನಿದ್ರಿಸುವ ಅಂತರಂಗದ ಬೆಸುಗೆ ಅವರದ್ದು. ಭರತ-ಶತ್ರುಘ್ನರಾದರೂ ಅಷ್ಟೆ, ಒಬ್ಬರನ್ನೊಬ್ಬರು ಪರಸ್ಪರ ಬಿಟ್ಟಿರಲಾರದವರು. ನಾಲ್ವರೂ ಪರಸ್ಪರ ಅಪಾರ ವಾತ್ಸಲ್ಯ ಹಾಗೂ ಗೌರವ ಉಳ್ಳವರು. ಯಾವ ಭರತನಿಗಾಗಿ ರಾಮ ವನವಾಸದ ದೀಕ್ಷೆ ಕೈಗೊಂಡನೋ ಅದೇ ಭರತ ವಿಷಯ ತಿಳಿದ ಕೂಡಲೇ ಕಾಡಿಗೆ ಧಾವಿಸಿ ರಾಮನನ್ನು ಮರಳಿ ಅಯೋಧ್ಯೆಗೆ ಕರೆತರುವ ಪ್ರಯತ್ನ ಮಾಡಿದ. ಅಪ್ಪನಿಗೆ ತಕ್ಕ ಮಕ್ಕಳು.
ಏನನ್ನು ಬಿತ್ತುತ್ತೇವೆಯೋ ಅದನ್ನು ಬೆಳೆಯುತ್ತೇವೆ. ಬೇವನ್ನು ಬಿತ್ತಿ ಮಾವನ್ನು ನಿರೀಕ್ಷಿಸುವುದು ಸಾಧ್ಯವೇ? ಅಪ್ಪ ಯೋಚಿಸಬೇಕಾದದ್ದು ಇದನ್ನು. ಕುಟುಂಬ ನಿರ್ವಹಣೆಯ ನೊಗವನ್ನು ಹೊತ್ತಿರುತ್ತಾನೆ ಅಪ್ಪ. ನನಸಾಗದ ತನ್ನ ಕನಸುಗಳನ್ನು ಮಕ್ಕಳು ನನಸು ಮಾಡಲಿ ಎಂದು ಬಯಸುತ್ತಿರುತ್ತಾನೆ. ಮಕ್ಕಳಿಗೆ ತಮ್ಮದೇ ಆದ ಕನಸುಗಳಿರುತ್ತವೆ. ಅವರ ಕನಸುಗಳನ್ನು ನನಸು ಮಾಡಲು ಆತ ಕಸುವುದು ತುಂಬಬಹುದೇ ಹೊರತು ತನ್ನ ಬರಡು ಕನಸುಗಳೇ ಅವರಲ್ಲಿಚಿಗುರಬೇಕು ಎಂದು ಬಯಸಿದರೆ ಹೇಗೆ?
ತಂದೆಯಾಗುವುದು ಕಷ್ಟವಲ್ಲ!
ಅಪ್ಪ-ಮಕ್ಕಳ ಮಧ್ಯೆ ಅಂತರವೊಂದು ಮೂಡಿ ಅದು ಬೆಳೆಯುತ್ತಾ ಹೋಗುವುದು ಹೀಗೆ. ‘ತಂದೆಯಾಗುವುದು ಕಷ್ಟವಲ್ಲ, ತಂದೆಯಾಗಿರುವುದು ಕಷ್ಟ’ ಎಂಬ ಮಾತು ಹುಟ್ಟಿಕೊಂಡದ್ದು ಇಂತಹ ಸನ್ನಿವೇಶಗಳಲ್ಲಿ. ಮಕ್ಕಳನ್ನು ಹಡೆದರೆ ಸಾಲದು, ಅವರು ಸಮಾಜಕ್ಕೆ ಸಂಪನ್ಮೂಲವಾಗಿ ಅರಳುವಂತೆ ಪೋಷಿಸಬೇಕು. ಪೋಷಕರು ಎಂಬ ಪದ ಮಕ್ಕಳು ಮೂರು ಹೊತ್ತು ಉಣ್ಣುವುದಕ್ಕೆ ದುಡಿಯುವವರು ಎಂಬ ಅರ್ಥಕ್ಕೆ ಸೀಮಿತವಾಗಬಾರದು. ಮಕ್ಕಳ ವ್ಯಕ್ತಿತ್ವವನ್ನು ಪೋಷಿಸುವ ಹೊಣೆಗಾರಿಕೆಯನ್ನು ಅವರು ಹೊತ್ತುಕೊಳ್ಳಬೇಕು.
ಕ್ಲಾಸಿಗೆ ಚಕ್ಕರ್ ಹಾಕುತ್ತಾ ತೀರಾ ಕಡಿಮೆ ಹಾಜರಾತಿ ಹೊಂದಿದ್ದ ವಿದ್ಯಾರ್ಥಿಯೊಬ್ಬನಲ್ಲಿ‘ನಿನ್ನ ಅಪ್ಪ ಅಥವಾ ಅಮ್ಮನನ್ನು ಕರೆದುಕೊಂಡು ಬಾ...’ ಎಂದು ಹೇಳಿದ್ದೆ. ‘ಅಮ್ಮನ ಆರೋಗ್ಯ ಚೆನ್ನಾಗಿಲ್ಲ, ಅಪ್ಪ ಬರೋದಿಲ್ಲ’- ಇದೊಂದೇ ಮಾತನ್ನು ಪುನರುಚ್ಚರಿಸುತ್ತಾ ಆತ ದಿನಗಟ್ಟಲೆ ಕಳೆದ. ಕೊನೆಗೊಂದು ದಿನ ಅನಿವಾರ್ಯವಾದಾಗ ಹೇಳಿದ: ‘ಅಪ್ಪನನ್ನು ಕರೆದುಕೊಂಡು ಬರೋ ಪರಿಸ್ಥಿತಿಯಲ್ಲಿಲ್ಲ; ವಿಪರೀತ ಕುಡೀತಾನೆ; ಆ ಚಟವನ್ನು ಬಿಟ್ಟಿರುವುದಕ್ಕೆ ಸಾಧ್ಯವೇ ಇಲ್ಲಎಂಬಂತಿದ್ದಾನೆ’ ಎಂದು.
ಈತ ಯಾವ ಕಾರಣಕ್ಕೆ ತರಗತಿ ತಪ್ಪಿಸಿಕೊಂಡು ಓಡಾಡುತ್ತಿದ್ದನೋ ತಿಳಿಯದು, ಆದರೆ ಇದನ್ನು ವಿಚಾರಿಸಿಕೊಳ್ಳಬೇಕಾದ ಅಪ್ಪ ಕಂಠಪೂರ್ತಿ ಕುಡಿದು ಬೀದಿಯಲ್ಲಿಬೀಳುವ ಅಸಾಮಿ. ‘ಅಪ್ಪನಾಗಿರುವುದು ಕಷ್ಟ’ ಎಂಬ ಮಾತನ್ನು ಇಲ್ಲಿಮತ್ತೆ ನೆನಪಿಸಿಕೊಳ್ಳಬೇಕು. ‘ಅತ್ಯುತ್ತಮವಾಗಿ ಬೆಳೆಸಲ್ಪಡುವ ಮಕ್ಕಳು ಯಾರೆಂದರೆ ತಮ್ಮ ತಂದೆ-ತಾಯಿಯರನ್ನು ನೋಡಿಕೊಂಡು ಬೆಳೆದವರು. ಪೋಷಕರ ಕರ್ತವ್ಯ ಬೂಟಾಟಿಕೆ ಅಲ್ಲ’ ಎನ್ನುತ್ತಾರೆ ಬರ್ನಾರ್ಡ್ ಷಾ. ತನ್ನ ಮಕ್ಕಳು ಒಳ್ಳೆಯ ಸಂಸ್ಕಾರ ಪಡೆಯಲಿ, ಚೆನ್ನಾಗಿ ಓದಲಿ, ಒಳ್ಳೆ ಉದ್ಯೋಗಕ್ಕೆ ಸೇರಲಿ, ಭರ್ಜರಿ ಸಂಬಳ ಬರಲಿ, ಮನೆಯನ್ನು ಕಾಳಜಿಯಿಂದ ನೋಡಿಕೊಳ್ಳಲಿ- ಅಪ್ಪ ಹೀಗೆ ಅಪೇಕ್ಷಿಸುವುದರಲ್ಲಿತಪ್ಪೇನೂ ಇಲ್ಲ, ಆದರೆ ಇದ್ಯಾವುದೂ ತಾನಾಗಿಯೇ ಆಗುವುದಿಲ್ಲ. ಎಲ್ಲದರ ಹಿಂದೆ ಅಪ್ಪ-ಅಮ್ಮನ ಪಾತ್ರ ಮಹತ್ವದ್ದಾಗಿದೆ. ಮಕ್ಕಳು ಎಷ್ಟು ನೈಸರ್ಗಿಕವಾಗಿ ಹುಟ್ಟಿದರೋ ಅಷ್ಟೇ ನೈಸರ್ಗಿಕವಾಗಿ ಅವರಷ್ಟಕ್ಕೇ ಬೆಳೆದು ಬದುಕುತ್ತಾರೆ ಎಂದು ಅಪೇಕ್ಷಿಸಲಾಗದು. ಹಿರಿಯರಿಗೆ ಜವಾಬ್ದಾರಿ ಇದೆ.
ಸ್ವತಃ ಶಿಸ್ತಿಲ್ಲದ ಅಪ್ಪ ಮಕ್ಕಳಿಗೆ ಯಾವ ಶಿಸ್ತನ್ನು ಕಲಿಸಿಯಾನು? ಸ್ವತಃ ಪರಿಶ್ರಮಿಯಾಗಿರದ ಅಪ್ಪ ಮಕ್ಕಳಿಗೆ ಹೇಗೆ ಶ್ರದ್ಧೆಯ ಪಾಠ ಹೇಳಿಯಾನು? ಸ್ವತಃ ಸಹನಾಶೀಲನಲ್ಲದ ಅಪ್ಪ ಮಕ್ಕಳಿಗೆ ಹೇಗೆ ತಾಳ್ಮೆ ಕಲಿಸಿಯಾನು? ಹೆಂಡತಿಯನ್ನು ಕೀಳಾಗಿ ಕಾಣುವ, ಹೊಡೆದು-ಬಡಿದು ಮಾಡುವ, ಮಕ್ಕಳೆದುರು ಹಂಗಿಸುವ ಅಪ್ಪ ತನ್ನ ಮಕ್ಕಳಿಗೆ ಯಾವ ಆದರ್ಶದ ಪಾಠ ಹೇಳಿಯಾನು? ‘ತಂದೆಯೊಬ್ಬ ತನ್ನ ಮಕ್ಕಳಿಗಾಗಿ ಮಾಡುವ ಅತ್ಯಂತ ಪ್ರಮುಖ ಕೆಲಸವೆಂದರೆ ಅವರ ಅಮ್ಮನನ್ನು ಪ್ರೀತಿಸುವುದು’ ಎನ್ನುತ್ತಾನೆ ಥಿಯೋಡರ್ ಹೆಸ್ಬರ್ಗ್ ಎಂಬ ಶಿಕ್ಷಣತಜ್ಞ. ಮಕ್ಕಳಿಗೆ ಅಪ್ಪ-ಅಮ್ಮನಿಗಿಂತ ಮಿಗಿಲಾದ ಆದರ್ಶ ಬೇರಿಲ್ಲನಿಜ, ಆದರೆ ಅವರು ಆದರ್ಶಮಯವಾಗಿ ಬದುಕಿದಾಗ ಮಾತ್ರ ಇದನ್ನು ಒಪ್ಪಬಹುದು.
----
ಬಾಕ್ಸ್ ಬರಲಿದೆ
----
ಲೇಖಕರು: ಪತ್ರಿಕೋದ್ಯಮ ಸಹಪ್ರಾಧ್ಯಾಪಕರು, ತುಮಕೂರು ವಿಶ್ವವಿದ್ಯಾನಿಲಯ

