Disappointment In Khadi Promotion Challenges For Weavers
ನೌಕರರ ನಿರಾಸಕ್ತಿ, ನೇಕಾರಿಕೆ ನಿಸ್ತೇಜ
Vijaya Karnataka•
ರವಿಭಾರತಿ ಗೋಸಾವಿ ಬೆಳಗಾವಿ ್ಟavಜಿ.ಜಟsavಜಿಃಠಿಜಿಞಛಿsಟ್ಛಜ್ಞಿdಜಿa.್ಚಟಞ ಸರಕಾರಿ ನೌಕರರು ಪ್ರತಿ ತಿಂಗಳ ಮೊದಲ ಶನಿವಾರ ಕಚೇರಿಗೆ ಖಾದಿ ವಸ್ತ್ರ ಧರಿಸಿ ಬರಬೇಕು ಎಂದು ಸರಕಾರ ಆದೇಶಿಸಿ ಆರು ತಿಂಗಳು ಕಳೆದರೂ, ಅನುಷ್ಠಾನವಾಗಿಲ್ಲ. ನೇಕಾರಿಕೆಗೆ ಆಸರೆಯಾಗಬೇಕು ಮತ್ತು ಸ್ವದೇಶಿ ಚಿಂತನೆಗೆ ಬಲ ಸಿಗಬೇಕು ಎಂಬ ಉದ್ದೇಶದ ಖಾದಿ ಉತ್ತೇಜನ ಕ್ರಮ ಸುತ್ತೋಲೆಗಷ್ಟೇ ಸೀಮಿತಗೊಂಡಂತಿದೆ. ಸರಕಾರಿ ಇಲಾಖೆ, ಅನುದಾನಿತ ಸಂಸ್ಥೆ, ನಿಗಮ, ಮಂಡಳಿಗಳು, ಸ್ವಾಯತ್ತ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ಪ್ರತಿ ತಿಂಗಳ ಮೊದಲ ಶನಿವಾರ ಸ್ವಯಂಪ್ರೇರಿತವಾಗಿ ಖಾದಿ ಉಡುಪು ಧರಿಸಬೇಕು ಎಂದು ಸರಕಾರ ಆದೇಶಿಸಿದ್ದರಿಂದ ಖಾದಿ ಉತ್ಪನ್ನಗಳ ಬೇಡಿಕೆ ಹೆಚ್ಚಾಗಿ ನೇಕಾರರ ಆದಾಯದಲ್ಲಿಏರಿಕೆಯಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಆದೇಶ ಹೊರಬಿದ್ದು ಅರ್ಧ ವರ್ಷ ಕಳೆದರೂ ಖಾದಿ ಖರೀದಿಯಲ್ಲಿಬದಲಾವಣೆ ಕಂಡುಬಂದಿಲ್ಲ. ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದ ಹೆಚ್ಚಿನ ಸರಕಾರಿ ಕಚೇರಿಗಳಲ್ಲಿಮೊದಲ ಶನಿವಾರ ಖಾದಿ ಧರಿಸುವ ಪರಿಪಾಠ ಕಾಣುತ್ತಿಲ್ಲ. ರಾಷ್ಟ್ರೀಯ ಹಬ್ಬಗಳು ಹಾಗೂ ಸರಕಾರಿ ಕಾರ್ಯಕ್ರಮಗಳಲ್ಲೂಖಾದಿ ಉಡುಪು ಧರಿಸುವ ಅಧಿಕಾರಿ ಮತ್ತು ಸಿಬ್ಬಂದಿ ವಿರಳ. ಕೆಲವರಿಗೆ ಸುತ್ತೋಲೆಯ ಬಗ್ಗೆ ಅರಿವೇ ಇಲ್ಲ! ಮೇಲ್ವಿಚಾರಣೆ ಇಲ್ಲ: ರಾಜ್ಯದಲ್ಲಿಒಟ್ಟು 4.50 ಲಕ್ಷಕ್ಕೂ ಹೆಚ್ಚು ನೇಕಾರರಿದ್ದು, 176ಕ್ಕೂ ಅಧಿಕ ಖಾದಿ ಸಂಘ, ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಕೋವಿಡ್ ನಂತರ ವರ್ಷಕ್ಕೆ ವ್ಯಾಪಾರ-ವಹಿವಾಟು ಕುಂಠಿತಗೊಂಡು, ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಮಾರುಕಟ್ಟೆ ಅನಿಶ್ಚಿತತೆಯಿಂದ ನೇಕಾರಿಕೆ ಕ್ಷೇತ್ರ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸಾಲದ ಹೊರೆ ತಾಳಲಾರದೇ ರಾಜ್ಯದಲ್ಲಿಈವರೆಗೆ 56 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಖಾದಿ ಉತ್ತೇಜನದ ಸರಕಾರಿ ಆದೇಶ ನೇಕಾರರಲ್ಲಿಹೊಸ ಆಶಾಭಾವನೆ ಮೂಡಿಸಿತ್ತು. ಆದರೆ, ಆದೇಶದ ಅನುಷ್ಠಾನದ ಬಗ್ಗೆ ಮೇಲ್ವಿಚಾರಣೆ ಕೊರತೆಯಿಂದ ನೇಕಾರಿಕೆ ಕಷ್ಟ ಇನ್ನಷ್ಟು ಹೆಚ್ಚಿದೆ. ‘‘ಖಾದಿ ಸ್ವದೇಶಿ ಚಳವಳಿಯ ಪ್ರತೀಕ ಹಾಗೂ ಗ್ರಾಮೀಣ ಆರ್ಥಿಕತೆಯ ಜೀವನಾಡಿ. ರಾಜ್ಯದ ಸಾವಿರಾರು ಕುಟುಂಬಗಳು ನೇಯ್ಗೆ ಹಾಗೂ ಖಾದಿ ಉತ್ಪಾದನೆಯನ್ನೇ ಅವಲಂಬಿಸಿವೆ. ಸರಕಾರಿ ನೌಕರರು ಖಾದಿ ಬಳಕೆಗೆ ಮುಂದಾದರೆ ಖಾದಿ ಉತ್ಪನ್ನಗಳಿಗೆ ಸ್ಥಿರ ಮಾರುಕಟ್ಟೆ ಸಿಗುವ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಲೆಕ್ಕಾಚಾರವಿತ್ತು. ಈ ನಿಟ್ಟಿನಲ್ಲಿಸರಕಾರದ ಉತ್ತೇಜನ ಕಾರ್ಯಕ್ರಮಗಳು ಪರಿಣಾಮಕಾರಿ ಜಾರಿಯಾದರೆ ಮಾತ್ರ ಖಾದಿ ಕ್ಷೇತ್ರಕ್ಕೆ ಹೊಸ ಚೈತನ್ಯ ಸಿಗಲಿದೆ,’’ ಎಂದು ನೇಕಾರ ಬಸವರಾಜ ಇಂಚಲ ಅಭಿಪ್ರಾಯಪಟ್ಟರು.