ಬೆನ್ನು ಮೂಳೆಯ ಸುತ್ತಮುತ್ತಲಿನ ಮಾಂಸಖಂಡಗಳಿಗೆ ಅನಗತ್ಯ ಒತ್ತಡವಾದಾಗ ಸೊಂಟ ಹಾಗೂ ಬೆನ್ನು ನೋವು ಕಾಡುತ್ತದೆ. ಕೆಳ ಬೆನ್ನಿನ ಭಾಗಕ್ಕೆ ವಿಶ್ರಾಂತಿಯನ್ನು ಕೊಡುವುದರ ಜೊತೆ ಚಟುವಟಿಕೆಯಿಂದ ಇದ್ದರೆ ನೋವಿನಿಂದ ಹೊರ ಬರಬಹುದು. ದೈಹಿಕ ಚಟುವಟಿಕೆ ಮೂಲಕ ಕೆಲವು ರೀತಿಯ ನೈಸರ್ಗಿಕ ರಾಸಾಯನಿಕಗಳನ್ನು ದೇಹ ಬಿಡುಗಡೆಗೊಳಿಸುತ್ತದೆ. ಆ ಮೂಲಕ ನೋವು ಕಡಿಮೆಯಾಗುತ್ತದೆ.
ಸಮಸ್ಯೆಯ ಕಾರಣ
ತಪ್ಪಾದ ಜೀವನಶೈಲಿ, ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವುದು, ದೈಹಿಕ ಚಟುವಟಿಕೆ ಕೊರತೆ, ನಿಂತುಕೊಂಡೇ ಕೆಲಸ ನಿರ್ವಹಣೆ, ಅಸಮರ್ಪಕ ಭಂಗಿಯಲ್ಲಿಕುಳಿತುಕೊಳ್ಳುವುದು,
ಆಹಾರ ಪದ್ಧತಿಯಲ್ಲಿವ್ಯತ್ಯಾಸ, ತಪ್ಪಾದ ಮಲಗುವ ಭಂಗಿ, ನಿರಂತರ ಕೆಮ್ಮು, ಅಲರ್ಜಿ, ದೀರ್ಘಕಾಲ ಆಟವಾಡುವುದರಿಂದ ಸೊಂಟ ಹಾಗೂ ಬೆನ್ನು ನೋವು ಕಾಣಿಸಬಹುದು.
ಯೋಗ ಚಿಕಿತ್ಸೆ
ಸೊಂಟ ಹಾಗೂ ಬೆನ್ನುನೋವು ಇದ್ದವರು ಮುಂದಕ್ಕೆ ಭಾಗುವ ಯಾವುದೇ ವ್ಯಾಯಾಮ, ಆಸನಗಳ ಅಭ್ಯಾಸ ಮಾಡುವುದು ಬೇಡ. ಮಲಗಿಕೊಂಡು ಸರಳ ವ್ಯಾಯಾಮವಾದ ಒಂದೊಂದು ಕಾಲಲ್ಲಿಸೊನ್ನೆ ಬರೆಯುವುದು, ಕೆಲವು ತಿರುಚುವಿಕೆ ವ್ಯಾಯಾಮ ಅಭ್ಯಾಸ ಮಾಡಿ. ದೀರ್ಘಕಾಲದ ಬೆನ್ನು ನೋವನ್ನು ನಿರ್ವಹಿಸಲು ಯೋಗವು ಹೆಚ್ಚು ಪರಿಣಾಮಕಾರಿ. ವೈದ್ಯಕೀಯ ಸಂಶೋಧನೆಯ ಪ್ರಕಾರ, ನಿಯಮಿತ ಅಭ್ಯಾಸವು ನೋವಿನ ತೀವ್ರತೆಯನ್ನು ಕಡಿಮೆ ಮಡುತ್ತದೆ. ದೈಹಿಕ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ನೋವು ನಿವಾರಕ ಜೌಷಧಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಯೋಗವು ಇದನ್ನು ಈ ಮೂಲಕ ಸಾಧಿಸುತ್ತದೆ. ಬೆಂಬಲ ಸ್ನಾಯುಗಳನ್ನು ಬಲಪಡಿಸುವುದು, ರಕ್ತ ಪರಿಚಲನೆ ಹೆಚ್ಚಿಸುವುದು, ನಿಯಂತ್ರಿತ ಚಲನೆಗಳು ಬೆನ್ನುಮೂಳೆಯ ಡಿಸ್ಕ್ ಗಳನ್ನು ಸಂಕುಚಿತಗೊಳಿಸುತ್ತವೆ ಮತ್ತು ವಿಸ್ತರಿಸುತ್ತವೆ. ಬೆಕ್ಕು-ಹಸುವಿನ ಭಂಗಿ, ಕಮಲದ ಭಂಗಿ ಮತ್ತು ತ್ರಿಕೋನ ಭಂಗಿಯಂತಹ ಯೋಗ ಭಂಗಿಗಳು ಸ್ನಾಯುಗಳನ್ನು ಬಲಪಡಿಸಲು ಮತ್ತು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಇದು ಬೆನ್ನು ನೋವನ್ನು ನಿಯಂತ್ರಿಸುತ್ತದೆ.
ಇಷ್ಟ ದೇವರ ಪ್ರಾರ್ಥನೆ, ತ್ರಾಟಕ ಕ್ರಿಯೆ, ಕೈಗಳ ಸಹಾಯದಿಂದ ಭುಜಗಳನ್ನು ತಿರುಗಿಸುವುದು, ಸರಳ ವ್ಯಾಯಾಮಗಳು, ತುಸು ವಿಶ್ರಾಂತಿ ಪೂರಕ. ಸುಖ ಪ್ರಾಣಾಯಾಮ, ನಾಡೀಶುದ್ಧಿ ಪ್ರಾಣಾಯಾಮ ಹಾಗೂ ಸರಳ ಧ್ಯಾನ ಸುಮಾರು ಹತ್ತು ನಿಮಿಷ ಅಭ್ಯಾಸ ನಡೆಸಿ. ಬಿಡುವಿನ ವೇಳೆಯಲ್ಲಿಮುದ್ರೆಗಳನ್ನು ಅಭ್ಯಾಸ ಮಾಡಿ. ಮುಖ್ಯವಾಗಿ ವಾಯುಮುದ್ರೆ, ಮೇರುದಂಡ ಮುದ್ರೆ. ವಾಯುಶೂನ್ಯ ಮುದ್ರೆ, ಆಕಾಶಮುದ್ರೆ, ರುದ್ರನರಸಿಂಹ ಮುದ್ರೆ, ಪ್ರಾಣಮುದ್ರೆ, ಅಭ್ಯಾಸ ನಡೆಸಿ.
ಬೆನ್ನನ್ನು ಬಲಪಡಿಸಲು ಕಟಿ ಚಕ್ರಾಸನ, ಉತ್ಥಿಥ ಏಕಪಾದಾಸನ, ಸೇತುಬಂಧ, ಮಕರಾಸನ, ಅರ್ಧ ಉಷ್ಟಾ್ರಸನ, ಮಾರ್ಜಾಲಾಸನ ಕ್ಯಾಟ್ ಕ್ಯಾಮಲ್ ಭಂಗಿ, ಸರಳ ಭುಜಂಗಾಸನ, ಶಲಭಾಸನ, ತಿರುಚುವಿಕೆಯ ಆಯ್ದ ವ್ಯಾಯಾಮಗಳು ಹಾಗೂ ಶವಾಸನ ಸಹಕಾರಿ. ಮೂಳೆಗಳ ವಿಸ್ತರಣೆಗೆ ಒತ್ತು ನೀಡುವ ಸರಳ ಚಲನೆಗಳಿಂದ ಹೆಚ್ಚು ಪ್ರಯೋಜನ ಪಡೆಯಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ. ಯೋಗವು ಹಿಂಭಾಗದ ಅಸ್ಥಿರಜ್ಜುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮಕರಾಸನ, ಏಕಪಾದ ಶಲಭಾಸನ ಇತ್ಯಾದಿ ಆಸನಗಳು ಹಾನಿಗೊಳಗಾದ ನರಬೇರುಗಳ ಮೇಲಿನ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆರಂಭದಲ್ಲಿತೀರಾ ಸರಳ ಆಸನಗಳನ್ನು ಅಭ್ಯಾಸ ಮಾಡಿ. ಬೆನ್ನು ಮೂಳೆಯ ಸುತ್ತ ಮುತ್ತಲಿನ ಮಾಂಸಖಂಡಗಳಿಗೆ ಒತ್ತಡ ನೀಡುವ ಕೆಲಸಗಳನ್ನು ಮಾಡಬೇಡಿ. ಸೊಂಟ, ಬೆನ್ನು ನೋವು ಇದ್ದವರು ದಿನಕ್ಕೆ 3 ಬಾರಿ ಮಕರಾಸನ ಭಂಗಿಯಲ್ಲಿವಿಶ್ರಮಿಸಿ.
ಗಮನಿಸಿ
ತೀವ್ರ ಬೆನ್ನು, ಸೊಂಟ ನೋವು ಇದ್ದವರು ವೈದ್ಯರ ತಪಾಸಣೆ, ಚಿಕಿತ್ಸೆ ಪಡೆದು, ಸರಳ ಯೋಗವನ್ನು ಅಳವಡಿಸಿ. ಕರಿದ ಮಸಾಲೆ ಆಹಾರ ಸೇವನೆ ಬೇಡ. ಸಾತ್ವಿಕ ಆಹಾರ ಸೇವಿಸಿ. ಕುಳಿತುಕೊಳ್ಳುವಾಗ ಬೆನ್ನು ಕುತ್ತಿಗೆ ನೇರವಾಗಿರಲಿ. ಕುರ್ಚಿಯಲ್ಲಿಕುಳಿತಾಗ ಬೆನ್ನಿನ ಹಿಂದೆ ಮೆತ್ತಗಿನ ತಲೆದಿಂಬು ಇರಿಸಿ.ತರಕಾರಿ ಸೊಪ್ಪುಗಳನ್ನು ಬಳಸಿ.