ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ

Contributed bysidduswami25@gmail.com|Vijaya Karnataka
instruction to immediately list non performing contractors on black list
ವಿಕ ಸುದ್ದಿಲೋಕ ಸೇಡಂ ತಾಪಂ ಸಭಾಂಗಣದಲ್ಲಿನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿಕರ್ತವ್ಯ ಲೋಪ ಎಸಗಿದ ಅಧಿಕಾರಿಗಳು ಹಾಗೂ ಕಾಮಗಾರಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಸಚಿವ ಡಾ.ಶರಣಪ್ರಕಾಶ ಪಾಟೀಲ… ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನಲ್ಲಿಕುಡಿಯುವ ನೀರಿನ ಪೂರೈಕೆ ಹಾಗೂ ಜಲಜೀವನ್ ಮಿಷನ್ ಯೋಜನೆಗಳ ಪ್ರಗತಿ ಪರಿಶೀಲಿಸುವಾಗ ಹಂದರಕಿ ಗ್ರಾಮದ ಕಾಮಗಾರಿಗಳ ಬಗ್ಗೆ ಸಚಿವರು ಮಾಹಿತಿ ಕೇಳಿದರು. ಈ ವೇಳೆ ಹಂದರಕಿ ಪಿಡಿಒಗೆ, ಇಲ್ಲಿಕತ್ತೆ ಕಾಯುತ್ತಿದ್ದೀಯಾ?, ಕಾಮಗಾರಿಗಳ ಮಂಜೂರಾದ ಅಂದಾಜು ಪತ್ರಿಕೆ ಎಲ್ಲಿದೆ, ಸುಳ್ಳು ಮಾಹಿತಿ ನೀಡಿದರೆ ಅಮಾನತು ಮಾಡಲಾಗುವುದು ಎಂದು ತರಾಟೆಗೆ ತೆಗೆದುಕೊಂಡರು. ಮದನಾ, ಮುಧೋಳ, ಯಡಗಾ, ಕೋಲಕುಂದಾ, ಕೋಡ್ಲಾ, ಸೂರವಾರ, ಹಾಬಾಳ ಟಿ, ಕಾಚೂರ, ಸಟಪಟನಹಳ್ಳಿ, ಸಂಗಾವಿ.ಟಿ ಹಾಗೂ ತರನಳ್ಳಿ ಗ್ರಾಮಗಳಲ್ಲಿಕಾಮಗಾರಿಗಳು ಮುಕ್ತಾಯಗೊಂಡಿವೆ. ಮದಕಲ ಗ್ರಾಮದ ಕೆಲಸ ಮುಗಿದು ಹ್ಯಾಂಡ್ ಓವರ್ ಮಾಡಲಾಗಿದೆ. ಕದಲಾಪುರ, ಕೆ.ಆರ್ .ಪಲ್ಲಿ, ಲಿಂಗಂಪಲ್ಲಿಹಾಗೂ ಆಡಕಿ ತಾಂಡಾಗಳಲ್ಲಿಕೆಲಸಗಳು ಪೂರ್ಣಗೊಂಡಿವೆ. ಇನ್ನುಳಿದ ಗ್ರಾಮಗಳಲ್ಲಿಬಾಕಿ ಕೆಲಸಗಳನ್ನು ಮುಂದಿನ 15 ದಿನಗಳಲ್ಲಿಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಗಡುವು ನೀಡಿದರು. ಕೆಲಸ ಮಾಡದ ಗುತ್ತಿಗೆದಾರರನ್ನು ತಕ್ಷಣವೇ ಕಪ್ಪು ಪಟ್ಟಿಗೆ ಸೇರಿಸಲು ಸೂಚನೆ ನೀಡಿದರು. ಹಾಗೂ ತಾಲೂಕಿನಲ್ಲಿಯುಜಿಡಿ ಕಾಮಗಾರಿಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಆದೇಶಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಅನುರಾಧ ಪಾಟೀಲ್ ಅವರು, ಅಂಗನವಾಡಿಗಳ ಸ್ವಂತ ಹಾಗೂ ಬಾಡಿಗೆ ಕಟ್ಟಡಗಳ ಮಾಹಿತಿ ನೀಡಿದರು. ಕಳೆದ ತಿಂಗಳ ಹಿಂದೆಯೇ ಕಡಲೆ ಬೇಳೆಯಲ್ಲಿನುಸಿ ಬಂದಿದ್ದು, ಈ ಬಗ್ಗೆ ಒಂದು ತಿಂಗಳ ಹಿಂದೆಯೇ ಮೇಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಸಚಿವರ ಗಮನಕ್ಕೆ ತಂದರು. ಸಚಿವರು ಜಿಲ್ಲಾಮಟ್ಟದ ಅಧಿಕಾರಿಗೆ ಫೋನ್ ಮಾಡಿ, ಮಕ್ಕಳ ಆರೋಗ್ಯದ ಜೊತೆ ಆಟವಾಡುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು. ಇನ್ನು ಕುಡಿಯುವ ನೀರಿನ ಯೋಜನೆಗೆ ಅರಣ್ಯ ಇಲಾಖೆಗೆ ಸೇರಿದ ಜಾಗ ಗುರುತಿಸಿ ಅಂದಾಜು ಪತ್ರಿಕೆ ಸಿದ್ಧಪಡಿಸಿದ ಎಂಜಿನಿಯರ್ ಗಳ ನಡೆಗೆ ಕೆಂಡಾಮಂಡಲರಾದ ಸಚಿವರು, ಜಾಗ ಯಾರಿಗೆ ಸೇರಿದ್ದು ಎಂದು ಕನಿಷ್ಠ ಪರಿಶೀಲನೆ ನಡೆಸದೇ ಎಸ್ಟಿಮೇಟ್ ಹೇಗೆ ಮಾಡಿದಿರಿ?, ನಿಮ್ಮ ವಿರುದ್ಧ ಕಂಪ್ಲೇಟ್ ಕೊಟ್ಟು ಒಳಗಡೆ ಹಾಕಿಸಬೇಕೆ ಎಂದು ಎಚ್ಚರಿಸಿದರು. ಸೋಮಪಲ್ಲಿಮತ್ತು ಮಲ್ಲಾಬಾದ್ ಗ್ರಾಮಗಳಲ್ಲಿನೀರಿನ ಟ್ಯಾಂಕ್ ನಿರ್ಮಾಣಕ್ಕೆ ಜಾಗದ ಕೊರತೆ ಇರುವುದನ್ನು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಸಚಿವರು ತಕ್ಷಣವೇ ಸ್ಥಳದಲ್ಲಿದ್ದ ಗ್ರಾಮಸ್ಥ ಚಂದ್ಯಪ್ಪ ಹಾಗೂ ಇತರ ಪ್ರಮುಖರೊಂದಿಗೆ ಮಾತನಾಡಿ ಮನವೊಲಿಸಿದರು. ತಕ್ಷಣವೇ ಗ್ರಾಮಸ್ಥರು ಸ್ವಪ್ರೇರಣೆಯಿಂದ ಸ್ಥಳ ಒದಗಿಸಲು ಒಪ್ಪಿಗೆ ಸೂಚಿಸಿದರು. ಸಭೆಯಲ್ಲಿರೈತರ ಆತ್ಮಹತ್ಯೆ ಪ್ರಕರಣಗಳು ಹಾಗೂ ಕುರಿಗಳ ಸಾವು ಮತ್ತು ರೋಗಬಾಧೆ ತಡೆಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ಕುರಿಗಳ ಸಾವಿಗೆ ಸಂಬಂಧಿಸಿದಂತೆ ತಕ್ಷಣವೇ ಸೊಪ್ಪಿನ ಕಣಕಿ ಪರಿಹಾರ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್ ಶ್ರೀಯಾಂಕ ಧನಶ್ರೀ, ತಾಪಂ ಇಒ ಸಯ್ಯದ್ ಪಟೇಲ್ , ತೋಟಗಾರಿಕೆ ಇಲಾಖೆಯ ಡಿಡಿ ಸಂತೋಷ ಇನಾಂದಾರ, ಲೋಕೋಪಯೋಗಿ ಇಲಾಖೆಯ ಎಇಇ ಶಿವಶರಣ ಜೇವರ್ಗಿ, ಪಂಚಾಯಿತಿ ರಾಜ್ ಎಂಜಿನಿಯರಿಂಗ್ ಇಲಾಖೆಯ ಎಇಇ ವಿಶ್ವನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ, ಕೆಡಿಪಿ ಸದಸ್ಯ ವೆಂಕಟೇಶ ಗೌಡ ನಾಡೇಪಲ್ಲಿ, ರಮೇಶ ಕಂದೂರ ಕೋನಾಪೂರ, ಶರಣಗೌಡ ನಾಚವಾರ, ಅಲಿ ಆಗ, ರಜಿಯಾಬೇಗಂ, ಮಾನ್ಯ ನಾಯಕ ಮೇದಕ, ಕೃಷಿ ಸಮಾಜದ ಅಧ್ಯಕ್ಷ ಬಸವರಾಜ ರೇವಗೊಂಡ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒ ಇದ್ದರು.