ಮೈಸೂರು ಸಿಲ್ ್ಕ ಸುಖಾಂತ್ಯ

Contributed byKeerthi Prasad|Vijaya Karnataka

ಮೈಸೂರು ಸಿಲ್ಕ್ ಕಾರ್ಖಾನೆಯ 5 ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಪ್ರಸ್ತಾವವನ್ನು ಸರಕಾರ ಕೈಬಿಟ್ಟಿದೆ. ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕೆಎಸ್‌ಐಸಿ ಸೀರೆಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಲಾಭದಲ್ಲಿರುವ ನಿಗಮದ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸುವ ಪ್ರಸ್ತಾವ ಸರಿಯಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಸಚಿವರು ಈ ವಿಷಯವನ್ನು ವಿಧಾನಸಭೆಯಲ್ಲಿ ಪ್ರಕಟಿಸಿದರು. ಕಾರ್ಖಾನೆಗಳ ವಿಸ್ತರಣೆ ಮತ್ತು ಉತ್ಪಾದನೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

governments crucial decision to abandon sports complex construction in mysore area
ಬೆಂಗಳೂರು: ತಿ.ನರಸೀಪುರದ ಕೆಎಸ್‌ಐಸಿ ಫಿಲೇಚರ್ ಕಾರ್ಖಾನೆಯ 5 ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಆ ಯೋಜನೆಯನ್ನು ಕೈಬಿಟ್ಟಿದೆ. ಈ ಮಹತ್ವದ ನಿರ್ಧಾರವನ್ನು ರೇಷ್ಮೆ ಮತ್ತು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ವಿಧಾನಸಭೆಯಲ್ಲಿ ಪ್ರಕಟಿಸಿದರು. ‘ವಿಜಯ ಕರ್ನಾಟಕ’ ಪತ್ರಿಕೆಯೂ ಕಾರ್ಖಾನೆ ಉಳಿಸಿ ಎಂದು ನಡೆಸಿದ ಅಭಿಯಾನಕ್ಕೆ ಮಣಿದು, ಲಾಭದಲ್ಲಿರುವ ನಿಗಮದ ಜಾಗವನ್ನು ಕ್ರೀಡಾಂಗಣಕ್ಕೆ ನೀಡುವ ಪ್ರಸ್ತಾವವನ್ನು ಸರ್ಕಾರ ಕೈಬಿಟ್ಟಿದೆ. ಮುಖ್ಯಮಂತ್ರಿಯವರ ತವರು ಜಿಲ್ಲೆಯಲ್ಲೇ ನಿಗಮದ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸುವ ವಿರೋಧಕ್ಕೆ ಮಣಿದು, ಸರ್ಕಾರ ಈ ತೀರ್ಮಾನ ಕೈಗೊಂಡಿದೆ.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಬಿಜೆಪಿಯ ಟಿ.ಎಸ್‌.ಶ್ರೀವತ್ಸ, ಕೆಎಸ್‌ಐಸಿ ತಯಾರಿಸುವ ಗುಣಮಟ್ಟದ ರೇಷ್ಮೆ ಸೀರೆಗಳಿಗೆ ಭಾರೀ ಬೇಡಿಕೆಯಿದೆ. ಮಹಿಳೆಯರು ನಸುಕಿನ 3 ಗಂಟೆಯಿಂದ 6.30ರವರೆಗೆ ಸಾಲಿನಲ್ಲಿ ನಿಂತು ಟೋಕನ್ ಪಡೆಯುತ್ತಾರೆ. ನಿತ್ಯ ಕೇವಲ 250 ಸೀರೆಗಳಷ್ಟೇ ತಯಾರಾಗುತ್ತಿದ್ದು, ಉತ್ಪಾದನೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ಕೆ.ವೆಂಕಟೇಶ್‌, ಕೆಎಸ್‌ಐಸಿ ಕಾರ್ಖಾನೆಗಳಲ್ಲಿ ನಿತ್ಯ 350ರಿಂದ 400 ಸೀರೆಗಳನ್ನು ತಯಾರಿಸಲಾಗುತ್ತಿದೆ. ಗುಣಮಟ್ಟಕ್ಕೆ ಒತ್ತು ನೀಡಲಾಗಿದೆ. ಯದ್ವಾತದ್ವಾ ತಯಾರಿಸಿ ಸಣ್ಣಪುಟ್ಟ ದೋಷವಿದ್ದರೂ ಗ್ರಾಹಕರು ಖರೀದಿಸದೆ ಬಿಸಾಡಿ ಹೋಗುತ್ತಾರೆ. ಎಲ್ಲೆಂದರಲ್ಲಿಯಾವ ರೇಷ್ಮೆ ನೂಲು ತಂದು ತರಾತುರಿಯಲ್ಲಿ ನೇಯ್ಗೆ ಮಾಡಲು ಸಾಧ್ಯವಿಲ್ಲ. ಗುಣಮಟ್ಟದ ಸೀರೆ ಉತ್ಪಾದನೆ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಚಿವ ಕೆ.ವೆಂಕಟೇಶ್‌ ಅವರು, ಕೆಎಸ್‌ಐಸಿ ಸೀರೆಗಳಿಗೆ ಬಹಳ ಬೇಡಿಕೆಯಿದೆ. ಆದರೆ ಸಣ್ಣಪುಟ್ಟ ದೋಷವಿರುವ ಸೀರೆಗಳನ್ನು ಶೇ.25-30ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಇದಕ್ಕೆ ಭಾರಿ ಬೇಡಿಕೆಯಿದ್ದು, ಡಿಸ್ಕೌಂಟ್ ಇರುವ ದಿನಗಳಲ್ಲಷ್ಟೇ ಗ್ರಾಹಕರು ಮುಂಜಾನೆಯಿಂದಲೇ ಸಾಲುಗಟ್ಟಿ ನಿಲ್ಲುವುದು ಕಂಡುಬಂದಿದೆ ಎಂದು ತಿಳಿಸಿದರು.

ಇದೇ ವೇಳೆ, ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಕೆಎಸ್‌ಐಸಿ ಸೀರೆಗಳಿಗೆ ಬೇಡಿಕೆಯಿದೆ ಎಂದು ಹೇಳುವ ಸರ್ಕಾರ, ನಿಗಮದ ಕೆಲಸಗಾರರಿಗೆ ಕೇವಲ 3000 ರೂ. ನೀಡುತ್ತಿದ್ದು, ನೇಮಕಾತಿ ಮಾಡಿಕೊಂಡವರಿಗೆ 15,000 ರೂ. ವೇತನ ನೀಡುತ್ತಿದೆ. ಕಾಂಗ್ರೆಸ್ ಸರ್ಕಾರ ಮನೆಹಾಳು ಕೆಲಸ ಮಾಡಿದೆ. ಕೆಎಸ್‌ಐಸಿ ಈ ಬಾರಿ 96 ಕೋಟಿ ರೂ. ಲಾಭ ಗಳಿಸಿದ್ದರೂ ಮುಚ್ಚಲು ಮುಂದಾಗಿದೆ. ಮೈಸೂರು ಮಹಾರಾಜರು ನೀಡಿದ್ದ 12 ಎಕರೆ ಜಾಗದಲ್ಲಿ 5 ಎಕರೆಯನ್ನು ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿದೆ. ಇದರ ಅಗತ್ಯವೇನು ಎಂದು ಪ್ರಶ್ನಿಸಿದರು.

ನಿಗಮದ ರೇಷ್ಮೆ ಸೀರೆ ಖರೀದಿಗೆ ಜನ ನಸುಕಿನ ಮೂರು ಗಂಟೆಗೆ ಸಾಲುಗಟ್ಟಿ ನಿಲ್ಲುತ್ತಾರೆ. ಒಂದೇ ಗಂಟೆಯಲ್ಲಿ ಸೀರೆಗಳೆಲ್ಲಾ ಮಾರಾಟವಾಗುತ್ತವೆ. ಸರ್ಕಾರದ ಶೇ.90ರಷ್ಟು ಸಂಸ್ಥೆ, ನಿಗಮಗಳು ಲಾಭದಲ್ಲಿ ನಡೆಯುವುದಿಲ್ಲ. ಹಾಗಿದ್ದಾಗ ಲಾಭದಲ್ಲಿರುವ ಕೆಎಸ್‌ಐಸಿ ನಿಗಮವನ್ನು ಸರ್ಕಾರ ಮುಚ್ಚಲು ಮುಂದಾಗಿದೆ ಎಂದರೆ ಅದರ ಹಿಂದೆ ಲಾಬಿ ಇದೆ ಎಂಬುದು ಸ್ಪಷ್ಟ. ಚೀನಾದಿಂದ ರೇಷ್ಮೆ ಖರೀದಿಸಲು, ಖಾಸಗಿಯವರಿಗೆ ಲಾಭ ಮಾಡಿಕೊಡಲು ಸರ್ಕಾರ ಇಂತಹ ಕೃತ್ಯಕ್ಕೆ ಮುಂದಾಗಿದೆಯೇ? ಯಾವುದೇ ಕಾರಣಕ್ಕೂ ನಿಗಮದ ಕಾರ್ಖಾನೆಗಳನ್ನು ಮುಚ್ಚಬಾರದು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಸಚಿವ ಬೈರತಿ ಸುರೇಶ್‌, ಕೆಎಸ್‌ಐಸಿ ಸೀರೆ ಬಹಳ ಬೇಡಿಕೆಯಿದ್ದು, ಸೀರೆಗಾಗಿ ತಿಂಗಳು ಕಾಯಬೇಕಾದ ಸ್ಥಿತಿ ಇದೆ. ಕೆಎಸ್‌ಐಸಿ ಕಾರ್ಖಾನೆಗಳನ್ನು ಮುಚ್ಚಬಾರದು. ಬದಲಿಗೆ ಕಾರ್ಖಾನೆಗಳನ್ನು ಉದ್ಧಾರ ಮಾಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಬಳಿಕ ಮಾತನಾಡಿದ ಕೆ.ವೆಂಕಟೇಶ್‌, ನಿಗಮದ ಕಾರ್ಖಾನೆ ವಿಸ್ತರಣೆ ಯೋಜನೆಯೂ ಇದೆ. ಸೀರೆ ಮಾರಾಟ ಸರಳಗೊಳಿಸಲು ಹಾಗೂ ಗ್ರಾಹಕರಿಗೆ ಸೀರೆಗಳನ್ನು ಒದಗಿಸಲು ರೇಷ್ಮೆ ನೇಯ್ಗೆ ಕಾರ್ಖಾನೆಯ ಸಂಯೋಜಿತ ರೇಷ್ಮೆ ನೇಯ್ಗೆ, ಘಟಕ- 2ರಲ್ಲಿ 10 ಇ- ಜಕಾರ್ಡ್‌ ಮಗ್ಗಗಳನ್ನು ಮತ್ತು ಚನ್ನಪಟ್ಟಣ ಘಟಕದಲ್ಲಿ 20 ಇ- ಜಕಾರ್ಡ್‌ ಯಂತ್ರ ಸ್ಥಾಪಿಸಲಾಗಿದೆ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.