ಹೆಡ್ : ಗಿಳಿಶಾಸ್ತ್ರ ನಂಬಿ 35 ಲಕ್ಷ ರೂ. ಕಳೆದುಕೊಂಡ ಐಟಿ ಅಧಿಕಾರಿ

Contributed byMANJUNATHA S|Vijaya Karnataka

ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ಗಿಳಿಶಾಸ್ತ್ರ ಹೇಳುವ ಶೇಖರ್ ಎಂಬುವವನ ಮೋಸಕ್ಕೆ ಒಳಗಾಗಿದ್ದಾರೆ. ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನ ಪಡೆಯಲು ಗಿಳಿಶಾಸ್ತ್ರದ ಮೊರೆಹೋಗಿದ್ದ ಅಧಿಕಾರಿಯಿಂದ ಶೇಖರ್ 35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದಾನೆ. ಹಣ ಮತ್ತು ಆಭರಣ ಪಡೆದ ಬಳಿಕ ಶೇಖರ್ ಪರಾರಿಯಾಗಿದ್ದಾನೆ. ಈ ಸಂಬಂಧ ಅಧಿಕಾರಿಯು ಪೊಲೀಸರಿಗೆ ದೂರು ನೀಡಿದ್ದಾರೆ.

it officer loses 35 million rupees believing in astrology
ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಮ್ಮ ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನಕ್ಕೇರಲು ಗಿಳಿಶಾಸ್ತ್ರ ದ ಮೊರೆಹೋಗಿ ಬರೋಬ್ಬರಿ 35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕಳೆದುಕೊಂಡ ಘಟನೆ ನಡೆದಿದೆ. ಸಹಾಯ ಮಾಡುವ ನೆಪದಲ್ಲಿ ಹಣ ಮತ್ತು ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿರುವ ಗಿಳಿಶಾಸ್ತ್ರ ಹೇಳುವ ಶೇಖರ್ ಎಂಬಾತನ ವಿರುದ್ಧ ಸಂತ್ರಸ್ತ ಅಧಿಕಾರಿಯಾದ ವೆಂಕಟ್ (ಹೆಸರು ಬದಲಿಸಲಾಗಿದೆ) ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶೇಖರ್‌ನನ್ನು ಬಂಧಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕೋರಮಂಗಲದ ಐಟಿ ಕಚೇರಿಯಲ್ಲಿ ಸುಮಾರು ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ವೆಂಕಟ್, ಇತ್ತೀಚೆಗೆ ಬೇರೆಡೆ ವರ್ಗಾವಣೆಯಾಗುವ ಆಸೆ ಹೊಂದಿದ್ದರು. ಈ ಸಂದರ್ಭದಲ್ಲಿ, ತರಕಾರಿ ಖರೀದಿಸಲು ಸರ್ಕಲ್‌ಗೆ ತೆರಳಿದ್ದಾಗ ರಸ್ತೆ ಬದಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್, ವೆಂಕಟ್ ಅವರನ್ನು ಕರೆದು, "ನಿಮ್ಮ ಮುಖ ನೋಡಿ ಶಾಸ್ತ್ರ ಹೇಳುತ್ತೇನೆ. ನಾನು ಹೇಳಿದಂತೆ ಕೇಳಿದರೆ ಮನಸ್ಸಿನಲ್ಲಿ ಅಂದುಕೊಂಡದ್ದು ಆಗಲಿದೆ" ಎಂದು ಹೇಳಿದ್ದ.
ಶೇಖರ್ ಮಾತು ನಂಬಿದ ವೆಂಕಟ್, ತಮ್ಮ ವರ್ಗಾವಣೆಗೆ ಅನುಕೂಲ ಮಾಡಿಕೊಡುವಂತೆ ಕೇಳಿಕೊಂಡರು. ಆಗ ಶೇಖರ್, ಇದಕ್ಕಾಗಿ ವಿಶೇಷ ಪೂಜೆ ಮಾಡಿಸಬೇಕು, ಅದಕ್ಕೆ ಐವತ್ತು ಸಾವಿರ ರೂಪಾಯಿ ಖರ್ಚಾಗಲಿದೆ ಎಂದು ಹೇಳಿದನು. ವೆಂಕಟ್ ಕೂಡ ತಕ್ಷಣವೇ 50 ಸಾವಿರ ರೂಪಾಯಿ ನೀಡಿದರು. ಬಳಿಕ ಇಬ್ಬರೂ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದರು.

ಕೆಲ ದಿನಗಳ ನಂತರ, ಶೇಖರ್ ಮತ್ತೊಂದು ಕಥೆ ಹೆಣೆದು, "ನಿಮ್ಮ ಮನೆಯಲ್ಲಿರುವ ಚಿನ್ನ ಹಾಗೂ ಬೆಳ್ಳಿ ವಸ್ತುಗಳಿಗೆ ಪೂಜೆ ಮಾಡಿಸಿದರೆ ವೃತ್ತಿ ಬದುಕಿನಲ್ಲಿ ಒಳ್ಳೆಯದಾಗಲಿದೆ. ಇಲ್ಲದಿದ್ದರೆ ಕೆಡುಕಾಗಲಿದೆ" ಎಂದು ವೆಂಕಟ್ ಅವರನ್ನು ಹೆದರಿಸಿದನು. ಇದರಿಂದ ಗಾಬರಿಗೊಂಡ ವೆಂಕಟ್, ತಮ್ಮ ಮನೆಯಲ್ಲಿದ್ದ 35 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ತಂದು ಶೇಖರ್‌ಗೆ ನೀಡಿದರು.

ಹಣ ಮತ್ತು ಆಭರಣ ಪಡೆದ ನಂತರ, ಜ್ಯೋತಿಷಿ ಶೇಖರ್ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ ಮತ್ತು ಕರೆಗಳನ್ನೂ ಸ್ವೀಕರಿಸುತ್ತಿರಲಿಲ್ಲ. ಕೊನೆಗೆ, ಹಣ ಮತ್ತು ಆಭರಣಗಳನ್ನು ವಾಪಸ್ ಕೇಳಿದಾಗ, ಕೊಲೆ ಮಾಡುವುದಾಗಿ ವೆಂಕಟ್ ಅವರಿಗೆ ಬೆದರಿಕೆ ಹಾಕಿದ್ದನು. ಈ ಕಾರಣದಿಂದಾಗಿ, ವೆಂಕಟ್ ತಡವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.