ಸಂಗಾತಿಯ ಆಯ್ಕೆಗೆ ಸ್ಥಿರತೆಯೇ ಮಾನದಂಡ
ಲವಲವಿಕೆ ಸುದ್ದಿಲೋಕ
ಇಂಟ್ರೊ: ಜೀವನ ಸಂಗಾತಿಯ ಆಯ್ಕೆಯಲ್ಲಿಯುವ ಜನತೆ ಭಾವನೆಗಳಿಗಿಂತ ವಾಸ್ತವ ಸಂಗತಿಗಳತ್ತ ಹೆಚ್ಚು ಗಮನ ಹರಿಸಿದೆ.
ಜೀವನ ಸಂಗಾತಿ ಹೀಗಿದ್ದರೆ ಚಂದ ಎಂಬುದು ಕನಸು. ಹೀಗೆ ಇರಬೇಕು ಎಂಬುದು ವಾಸ್ತವ. ಇದನ್ನೇ ತಮ್ಮ ಸಂಗಾತಿ ಆಯ್ಕೆಯ ಮಾನದಂಡವಾಗಿಸಿಕೊಂಡಿದೆ ಯುವ ಜನತೆ.
ಪ್ರೀತಿ, ಕಾಳಜಿ, ಸೌಂದರ್ಯ ಇವೆಲ್ಲವೂ ಸಂಗಾತಿಯಲ್ಲಿ ಇರಬೇಕು ಎಂಬುದು ಸಹಜ. ಆದರೆ ಇವೆಲ್ಲವನ್ನೂ ಮೀರಿದ ಕೆಲವು ನಿಗದಿತ ಗುಣಗಳಿಗಾಗಿ ಹುಡುಕಾಟ ನಡೆಸುತ್ತಿದೆ ಯುವ ಜನತೆ. ಈ ಮೂಲಕ ಸಂಗಾತಿ ಆಯ್ಕೆಯಲ್ಲಿಭಾವನಾತ್ಮಕ ಸ್ಥಿರತೆ ಮತ್ತು ಆರ್ಥಿಕ ಭದ್ರತೆ ಸದ್ಯದ ಆದ್ಯತೆ ಎಂದಿದೆ ಸಮೀಕ್ಷೆ ವರದಿ.
ಶಿಸ್ತಿಗೆ ಆದ್ಯತೆ
ಇಂದು ಡೇಟಿಂಗ್ ಕೇವಲ ಭಾವನೆಗಳ ವಿಚಾರವಲ್ಲ. ಅದೊಂದು ಹೂಡಿಕೆಯಂತೆ ಬದಲಾಗಿದೆ. ಸಮಯ ಮತ್ತು ಶ್ರಮ ವ್ಯರ್ಥವಾಗಬಾರದೆಂದು ಈಗ ಅದಕ್ಕೊಂದು ಶಿಸ್ತಿನ ನಿಯಮ ರೂಪಿಸಿಕೊಳ್ಳಲಾರಂಭಿಸಿದ್ದಾರೆ. ಅಂದರೆ ಯಾರನ್ನಾದರೂ ಭೇಟಿ ಮಾಡುವ ಮುನ್ನ ಅವರ ನೋಟ, ಮಾತು, ಹವ್ಯಾಸ ಮುಖ್ಯ ಸಂಗತಿಯಲ್ಲ. ಬದಲಿಗೆ ಅವರು ಬದುಕಿನಲ್ಲಿಅಳವಡಿಸಿಕೊಂಡ ಶಿಸ್ತು ವ್ಯಕ್ತಿತ್ವ ಅಳೆಯುವ ಅಳತೆಗೋಲು. ಇದಕ್ಕಾಗಿ ಅವರ ಸಮಯ ಪಾಲನೆಯಿಂದ ಹಿಡಿದು ಪ್ರತಿ ನಡೆನುಡಿಯಲ್ಲಿಶಿಸ್ತನ್ನು ಹುಡುಕಬಹುದು. ಶಿಸ್ತು, ಸಕಾರಾತ್ಮಕ ಗುಣಗಳೇ ಮುಂದಿನ ದಾಂಪತ್ಯ ಬದುಕಿನ ಅಡಿಪಾಯ ಎಂಬ ಲೆಕ್ಕ ಇದರ ಹಿಂದಿದೆ.
ಕೇವಲ ವೃತ್ತಿಯಲ್ಲ, ವ್ಯಕ್ತಿತ್ವದ ಗುರುತು
ಶೇ. 40ರಷ್ಟು ಜನರು ಡೇಟಿಂಗ್ ಆ್ಯಪ್ ಗಳಿಗಿಂತ ಲಿಂಕ್ ್ಡಇನ್ ಪ್ರೊಫೈಲ್ ಗಳನ್ನು ಗಮನಿಸುತ್ತಿದ್ದಾರೆ. ಇದಕ್ಕೆ ಕಾರಣ ಅವನು ಅಥವಾ ಅವಳು ವೃತ್ತಿಜೀವನದಲ್ಲಿಎಷ್ಟು ಸ್ಥಿರವಾಗಿದ್ದಾರೆ? ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆಯೇ ಎಂಬುದು ಮುಖ್ಯ. ಆರ್ಥಿಕ ಮತ್ತು ವೃತ್ತಿಪರ ಸ್ಥಿರತೆ ಇದ್ದರೆ ಮಾತ್ರ ಬದುಕು ಸುಗಮ ಎಂಬ ಪ್ರಾಯೋಗಿಕ ಚಿಂತನೆ ಇಂದಿನವರದ್ದು.
ಸಣ್ಣ ಹೆಜ್ಜೆ, ದೊಡ್ಡ ಭದ್ರತೆ
ದುಬಾರಿ ಹೋಟೆಲ್ ಗಳಲ್ಲಿಗಂಟೆಗಟ್ಟಲೆ ಕಳೆಯುವ ಬದಲು, ಈಗ ಕೇವಲ 45 ನಿಮಿಷಗಳ ಸಣ್ಣ ಕಾಫಿ ಭೇಟಿಗೆ ಒಲವು ತೋರುತ್ತಿದ್ದಾರೆ. ಇದು ಹಣದ ಉಳಿತಾಯ. ಅಷ್ಟೆ ಅಲ್ಲ, ಮನಸ್ಸಿಗೆ ಒಪ್ಪದಿದ್ದರೆ ಭಾವನಾತ್ಮಕವಾಗಿ ಅತಿಯಾಗಿ ತೊಡಗಿಸಿಕೊಳ್ಳುವುದನ್ನು ತಪ್ಪಿಸಲು ಇರುವ ಸುಲಭ ಮಾರ್ಗ ಎಂದು ಪರಿಗಣಿಸಿದ್ದಾರೆ.
ನಿಧಾನತೆ ಬ್ರೇಕಪ್ ಗೆ ಇಲ್ಲ
ಸಂಬಂಧಗಳು ಹಳಸುವಾಗ ಆಗುವ ನೋವು ಮತ್ತು ಗೊಂದಲವನ್ನು ತಪ್ಪಿಸಲು ಸೂಕ್ತ ಮಾರ್ಗ ಕಂಡುಕೊಂಡಿದ್ದಾರೆ. ಶೇ. 60ರಷ್ಟು ಜನರು ತಮ್ಮ ನಡುವೆ ಏನೂ ಸರಿಯಿಲ್ಲಎಂದಾಗ ದೀರ್ಘಕಾಲ ಎಳೆಯದೆ ಸಂಬಂಧ ಕಡಿದುಕೊಳ್ಳುತ್ತಾರೆ. ಇದು ಮಾನಸಿಕ ಶಾಂತಿ ಕಾಪಾಡಿಕೊಳ್ಳಲು ಕಂಡುಕೊಂಡ ಮಾರ್ಗ.
ಒಟ್ಟಾರೆ ಸ್ಥಿರತೆ ಸಂಬಂಧವನ್ನು ಹೆಚ್ಚು ಪ್ರಬುದ್ಧವಾಗಿಸಬಹುದು ಎನ್ನುವ ಸಂಬಂಧಗಳ ತಜ್ಞರು, ಸಂಬಂಧದಲ್ಲಿಎಲ್ಲವೂ ಕೇವಲ ಲೆಕ್ಕದಲ್ಲೇ ಮುಗಿಯುವುದಿಲ್ಲ. ಅಲ್ಲಿಹೊಂದಾಣಿಕೆ, ಸಂವಹನ, ಭಾವನಾತ್ಮಕ ಬೆಸುಗೆ ಹಾಗೂ ಪರಸ್ಪರ ಆಕರ್ಷಣೆ ಸದಾ ಜೀವಂತವಾಗಿರಬೇಕು ಎನ್ನುತ್ತಾರೆ.
ಬಾಕ್ಸ್
ಎಐ ಪ್ರೇಮ
ಇಷ್ಟಪಟ್ಟ ವ್ಯಕ್ತಿಯನ್ನು ಒಲಿಸಿಕೊಳ್ಳುವುದು ಹೇಗೆ ಎಂಬ ಸಲಹೆ ನೀಡುವುದರಿಂದ ಹಿಡಿದು ಸುಂದರ ಪ್ರೇಮ ಪತ್ರ ಬರೆಯುವ ಕೆಲಸವನ್ನು ಎಐ ಮಾಡುತ್ತದೆ. ಅದೇ ರೀತಿ ಸಂಗಾತಿಯಿಂದ ಬಂದ ಸಂದೇಶ ಓದಲು ಎಐ ಸಹಾಯ ಮಾಡುತ್ತದೆ. ಶೇ. 9.3ರಷ್ಟು ಜನರು ತಮ್ಮ ಸಂಗಾತಿ ಕಳುಹಿಸುವ ಸುದೀರ್ಘ ಸಂದೇಶಗಳನ್ನು ಓದುವ ಬದಲು, ಅದನ್ನು ಎಐ ಮೂಲಕ ಸಾರಾಂಶ ಮಾಡಿ ಓದುತ್ತಿದ್ದಾರೆ. ಆದರೆ ಪ್ರೇಮ ಪತ್ರಗಳನ್ನು ಬರೆಯಲು ಎಐ ಬಳಸುವುದು ಭಾವನಾತ್ಮಕ ವಂಚನೆ ಎಂದು ಹಲವರು ವಿರೋಧಿಸುತ್ತಾರೆ. ಮನಸ್ಸಿನ ಮಾತುಗಳನ್ನು ಹೇಳಲು ಎಐ ಬಳಸಿದರೆ ಅದರಲ್ಲಿಪ್ರಾಮಾಣಿಕತೆ ಇರುವುದಿಲ್ಲಎಂಬುದು ಅನೇಕರ ವಾದ. ಇವೆಲ್ಲದರ ನಡುವೆ ಡೇಟಿಂಗ್ ನಲ್ಲಿಕೃತಕ ಬುದ್ಧಿಮತ್ತೆಯ ಬಳಕೆ ಒಂದು ವಿಚಿತ್ರ ತಿರುವು ಪಡೆದಿದೆ.

