ಬಿಡುಗಡೆಯಾದ ಅನುದಾನ ಪಟ್ಟಿ ಶೀಘ್ರ ಬಿಡುಗಡೆ

Contributed bymaddurvk@gmail.com|Vijaya Karnataka

ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ಅವರು 10 ಸಾವಿರ ಕೋಟಿ ರೂ. ಅನುದಾನದ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದರು. ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಪ್ರತಿಪಕ್ಷಗಳು ಇಲ್ಲಸಲ್ಲದ ಟೀಕೆ ಮಾಡುತ್ತಿವೆ ಎಂದು ಆರೋಪಿಸಿದರು. ಗ್ಯಾಸ್ ಸಿಲಿಂಡರ್ ಕೊರತೆಗೆ ಪ್ರಧಾನಿ ನರೇಂದ್ರ ಮೋದಿಯವರೇ ಹೊಣೆಗಾರರು ಎಂದರು. ಸಚಿವ ಸ್ಥಾನದ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

10000 crore fund for district preparing for quick release

ಜಿಲ್ಲಾಉಸ್ತುವಾರಿ ಸಚಿವ ಎನ್ . ಚಲುವರಾಯಸ್ವಾಮಿ ಹೇಳಿಕೆ

ವಿಕ ಸುದ್ದಿಲೋಕ ಮದ್ದೂರು

ರಾಜ್ಯದಲ್ಲಿಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಜಿಲ್ಲೆಗೆ 10 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಇದರಿಂದಾಗಿ ಜಿಲ್ಲೆಯಾದ್ಯಂತ ಅಭಿವೃದ್ಧಿ ಕಾರ್ಯಗಳು ಜರುಗುತ್ತಿರುವುದನ್ನು ಸಹಿಸದ ಪ್ರತಿ ಪಕ್ಷದವರು ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ ಎಂದು ಜಿಲ್ಲಾಉಸ್ತುವಾರಿ ಸಚಿವ ಎನ್ . ಚಲುವರಾಯಸ್ವಾಮಿ ಆರೋಪಿಸಿದರು.

ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ188 ಕೋಟಿ ರೂ. ವೆಚ್ಚದಲ್ಲಿ220 ಕೆ.ವಿ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘‘ಸರಕಾರ ಜಿಲ್ಲೆಗೆ ಬಿಡುಗಡೆ ಮಾಡಿರುವ ಅನುದಾನದ ಬಗ್ಗೆ ಕೇಂದ್ರ ಸಚಿವರು ಲೆಕ್ಕ ಕೇಳುತ್ತಿದ್ದು , ಶೀಘ್ರದಲ್ಲಿಯೇ ಪಟ್ಟಿ ಬಿಡುಗಡೆ ಮಾಡಲಾಗುವುದು. ಜಿಲ್ಲೆಗೆ 10 ಸಾವಿರ ಕೋಟಿ ರೂ.ಅನುದಾನವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ. ಅದರ, ಅಂಕಿ ಅಂಶಗಳನ್ನು ಇಲಾಖಾವಾರು ನೀಡುವಂತೆ ಜಿಲ್ಲೆಯ ಸಂಸದ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಲೆಕ್ಕ ಕೇಳಿದ್ದಾರೆ. ಜಿಲ್ಲೆಗೆ ಬಿಡುಗಡೆ ಮಾಡಿರುವ ಅನುದಾನದ ಲೆಕ್ಕವನ್ನು ಜಿಲ್ಲೆಯ ಜನತೆ ಕೇಳಬೇಕೆ ಹೊರತು ಸಂಸದರಲ್ಲ,’’ ಎಂದು ನುಡಿದರು.

‘‘ಎಚ್ .ಡಿ. ಕುಮಾರಸ್ವಾಮಿ ಜಿಲ್ಲೆಯ ಮತದಾರರಲ್ಲಹಾಗೂ ನಮ್ಮ ಜಿಲ್ಲೆಯವರಲ್ಲ. ಜಿಲ್ಲೆಗೆ ಸಂಸದರಷ್ಟೇ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಜಿಲ್ಲೆಯ ಜನತೆ ಅವರಿಗೆ ಜವಾಬ್ದಾರಿ ನೀಡಿದ್ದು ಅವರ ನಿರೀಕ್ಷೆ ಹುಸಿಯಾಗದಂತೆ ಕೇಂದ್ರ ಸಚಿವರು ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಬೇಕು. ನಾವೇನು ಓಡುಹೋಗುವವರಲ್ಲ, ಕೊನೆಯತನಕವೂ ಇಲ್ಲೇ ಇರಲಿದ್ದು ಲೆಕ್ಕ ಕೊಡುವ ಸಮಯ ಬರಲಿದೆ. ಆಗ ಅಂಕಿ ಅಂಶಗಳ ಪ್ರಕಾರವೇ ಪಟ್ಟಿಯನ್ನು ಸಿದ್ಧಪಡಿಸಿ ಲೆಕ್ಕ ಕೊಡುತ್ತೇನೆ,’’ ಎಂದು ಹೇಳಿದರು.

‘‘ರಾಜ್ಯಾದ್ಯಂತ ಕಂಡುಬಂದಿರುವ ಗ್ಯಾಸ್ ಸಿಲೀಂಡರ್ ಕೊರತೆಗೆ ಪ್ರಧಾನಿ ನರೇಂದ್ರ ಮೋದಿಯವರೇ ಹೊಣೆಗಾರರಾಗಿದ್ದು ಅಮೆರಿಕದ ಅಧ್ಯಕ್ಷ ಟ್ರಂಪ್ ಯಾರ ಮಾತೂ ಕೇಳುವುದಿಲ್ಲಎಂಬುದು ಎಲ್ಲರಿಗೂ ಗೊತ್ತಿದ್ದು ಮೋದಿಯವರು ವಿಶ್ವಗುರು ಅಂತಾರೆ. ಪ್ರಪಂಚದ ಎಲ್ಲರ ಸ್ನೇಹ ಗೆದ್ದಿದ್ದೇನೆ ಎನ್ನುವ ಮೋದಿಯವರು ಇಂತಹ ಸಂದರ್ಭಗಳಲ್ಲಿಸಿಕ್ಕಿಹಾಕಿಕೊಳ್ಳುತ್ತಾರೆ,’’ ಎಂದು ದೂರಿದರು.

‘‘ಈಗಾಗಲೇ ಗ್ಯಾಸ್ ಸಮಸ್ಯೆ ಉಲ್ಭಣಗೊಂಡಿದ್ದು ಪರಿಹಾರ ಕಂಡುಕೊಳ್ಳಲು ಕ್ರಮ ವಹಿಸದ ಪ್ರಧಾನಿಯವರು ಮೌನವಾಗಿದ್ದಾರೆ. ಕಮರ್ಷಿಯಲ್ ಗ್ಯಾಸ್ ಗೆ ಸಮಸ್ಯೆಯಾಗಿದ್ದು 15 ದಿನದಲ್ಲಿಡೊಮೆಸ್ಟಿಕ್ ಗ್ಯಾಸ್ ಗೂ ಸಮಸ್ಯೆ ಕಂಡು ಬರಲಿದೆ. ಕೇಂದ್ರ ಸರಕಾರವೇ ಸಮಸ್ಯೆಯನ್ನು ಬಗೆಹರಿಸಲು ಕ್ರಮ ವಹಿಸಬೇಕು,’’ ಎಂದರು.

‘‘ಮೊದಲ ಬಾರಿ ಶಾಸಕರಾದವರು ಸಚಿವ ಸ್ಥಾನ ಕೇಳುವುದರಲ್ಲಿತಪ್ಪೇನಿದೆ? ಹೊಸಬರು, ಹಳಬರು ಎನ್ನುವ ಪ್ರಶ್ನೆ ಬರುವುದಿಲ್ಲ. ಯಾರಿಗೆ ಸಚಿವ ಸ್ಥಾನ ಸಿಗುತ್ತೋ ಜಿಲ್ಲೆವಾರು ಕಮ್ಯೂನಿಟಿ ನೋಡಿಕೊಂಡು ಸಚಿವ ಸ್ಥಾನ ನೀಡಬೇಕು. ಇಂತವರಿಗೆ ಕೊಡಬೇಕು ಕೊಡಬಾರದು ಎಂಬುವುದು ಏನಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀರ್ಮಾನ ಮಾಡಲಿದ್ದು ಹಳಬರಿಗೆ ಕೋಕ್ ಕೊಡುವ ಬಗ್ಗೆಯೂ ಪಕ್ಷವು ನಿರ್ಧರಿಸುತ್ತದೆ,’’ ಎಂದರು.

ಶಾಸಕರಾದ ಕೆ.ಎಂ.ಉದಯ, ದಿನೇಶ್ ಗೂಳೀಗೌಡ, ರಮೇಶ್ ಬಂಡಿಸಿದ್ಧೇಗೌಡ, ತಾಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಚಲುವರಾಜು, ರಾಜೀವ್ , ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಉದ್ಯಮಿ ಕಾಂಗ್ರೆಸ್ ಮುಖಂಡ ಸಿ.ಟಿ.ಶಂಕರ್ ಇತರರಿದ್ದರು.