ಗ್ರಾಪಂ ಮುಂಭಾಗ ಕೊಡ ಹಿಡಿದು ನೀರಿಗಾಗಿ ಮಹಿಳೆಯರ ಪ್ರತಿಭಟನೆ

Contributed bysidduvijaykarnataka@gmail.com|Vijaya Karnataka

ಉಜ್ಜನಿ ಗ್ರಾಮದ ಮಹಿಳೆಯರು ಕುಡಿಯುವ ನೀರಿನ ಸಮಸ್ಯೆಗಾಗಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು. ಜೆಜೆಎಂ ಯೋಜನೆಯ ಕಾಮಗಾರಿ ವಿಳಂಬದಿಂದಾಗಿ ನೀರು ಸರಬರಾಜು ನಿಂತಿದೆ. ಅಧಿಕಾರಿಗಳ ಭರವಸೆಯ ಬಳಿಕ ಪ್ರತಿಭಟನೆ ಕೈಬಿಡಲಾಯಿತು. ಸಮಸ್ಯೆ ಶೀಘ್ರ ಬಗೆಹರಿಸುವಂತೆ ಸೂಚನೆ ನೀಡಲಾಗಿದೆ. ಗ್ರಾಮದಲ್ಲಿ ನೀರಿನ ಕೊರತೆ ಎದುರಾಗಿದೆ.

women in huliyurudurg protest in front of village panchayat for drinking water

ವಿಕ ಸುದ್ದಿಲೋಕ ಕುಣಿಗಲ್

ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಉಜ್ಜನಿ ಗ್ರಾಮದಲ್ಲಿಕಳೆದ ಒಂದು ತಿಂಗಳಿನಿಂದ ಸರಿಯಾಗಿ ಕುಡಿಯುವ ನೀರು ಬಿಡದ ಕಾರಣ ಗ್ರಾಮದ ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಗುರುವಾರ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಒಂದು ವರ್ಷದ ಹಿಂದೆ ಗ್ರಾಮದಲ್ಲಿಜೆಜೆಎಂ ಯೋಜನೆಯಡಿ ಕಾಮಗಾರಿ ಪ್ರಾರಂಭಿಸಿ ಒಂದು ವರ್ಷ ಕಳೆದರೂ ಸಹ ಸರಿಯಾಗಿ ಕಾಮಗಾರಿ ಪೂರ್ಣಗೊಳಿಸದೆ ಗ್ರಾಮದಲ್ಲಿಹಲವು ಮನೆಗಳಿಗೆ ಸರಿಯಾಗಿ ನೀರಿಲ್ಲದಂತಾಗಿದೆ. ಗ್ರಾಮ ಪಂಚಾಯಿತಿಯಿಂದ ಈ ಹಿಂದೆ ಗ್ರಾಮದಲ್ಲಿಕುಡಿಯುವ ನೀರಿಗೆ ಸಂಪರ್ಕ ಮಾಡಿದ್ದ ಪೈಪ್ ಲೈನ್ ಗಳನ್ನು ಇತ್ತಿಚೇಗೆ ಜೆಜೆಎಂ ಕಾಮಗಾರಿ ಮಾಡುವ ಸಂದರ್ಭದಲ್ಲಿಒಡೆದು ಹಾಕಲಾಗಿದೆ. ಇದರಿಂದ ಗ್ರಾಮದಲ್ಲಿಇರುವ ನೀರಿನ ಟ್ಯಾಂಕ್ ಗಳಿಗೆ ನೀರು ಸರಬರಾಜಗದೆ ಇರುವ ಕಾರಣ ಗ್ರಾಮದಲ್ಲಿನೀರಿನ ಸಮಸ್ಯೆ ಉಲ್ಬಣವಾಗಿದೆ ಎಂದು ಪ್ರತಿಭಟನಾಕಾರರು ಹರಿಹಾಯ್ದರು.

ಈ ಬಗ್ಗೆ ಕಳೆದೊಂದು ತಿಂಗಳಿನಿಂದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರೂ ಸಮಸ್ಯೆ ಬಗೆಹರಿಸಿಲ್ಲಎಂದು ಗ್ರಾಮದ ಮಹಿಳೆಯರು ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿಚೌಡೇಶ್ವರಿ ಹಬ್ಬಕ್ಕೆ ಹದಿನೈದು ದಿನಗಳು ಬಾಕಿ ಉಳಿದಿದ್ದು, ಗ್ರಾಮದಲ್ಲಿಕುಡಿಯುವ ನೀರು ಇಲ್ಲದಂತಾಗಿದೆ. ನೀರಿಗಾಗಿ ಗ್ರಾಮದ ಸುತ್ತಮುತ್ತಲ ರೈತರ ಕೊಳವೆಬಾವಿಗಳನ್ನು ಆಶ್ರಯಿಸುವಂತಾಗಿದೆ. ಅಧಿಕಾರಿಗಳು ಸಮಸ್ಯೆ ಬಗೆಹರಿಸುವವರೆಗೂ ಸ್ಥಳದಿಂದ ತೆರಳುವುದಿಲ್ಲಎಂದರು.

ಈ ವೇಳೆ ಗ್ರಾಮೀಣ ಕುಡಿಯುವ ನೀರಿನ ಸಹಾಯಕ ಎಂಜಿನಿಯರ್ ಸಾಬಣ್ಣ ಬಂದ ಕೂಡಲೇ ತರಾಟೆಗೆ ತೆಗೆದುಕೊಂಡ ಮಹಿಳೆಯರು ನಮಗೆ ನೀರು ಕೊಟ್ಟು ನಂತರ ಇಲ್ಲಿಂದ ತೆರಳುವಂತೆ ತಾಕೀತು ಮಾಡಿದರು. ಕೋಟ್ಯಂತರ ರೂ. ವೆಚ್ಚದಲ್ಲಿಜೆಜೆಎಂ ಕಾಮಗಾರಿ ಪ್ರಾರಂಭ ಮಾಡಲಾಗಿದೆ. ಆದರೆ, ಕಾಮಗಾರಿ ಕಳಪೆಯಿಂದ ಕೂಡಿದೆ. ಹಳೆಯ ನೀರಿನ ಟ್ಯಾಂಕ್ ಗೆ ಬಣ್ಣ ಬಳಿದು ಗ್ರಾಮ ಪಂಚಾಯಿತಿಗೆ ಸೇರಿದ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಸರಿಯಾಗಿ ಪೈಪ್ ಲೈನ್ ಕಾಮಗಾರಿಯನ್ನೇ ಮಾಡಿಲ್ಲಎಂದು ತಾರಾಟೆಗೆ ತೆಗೆದುಕೊಂಡರು.

ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ವಸಂತ್ ಕುಮಾರ್ ಅವರು ಇನ್ನೆರಡು ದಿನಗಳಲ್ಲಿಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಬಳಿಕ ಮಹಿಳೆಯರು ಪ್ರತಿಭಟನೆ ಕೈಬಿಟ್ಟರು. ಬಳಿಕ ಗ್ರಾಮದಲ್ಲಿನೀರಿನ ಸಮಸ್ಯೆ ಇರುವ ಸ್ಥಳಗಳಿಗೆ ಭೇಟಿ ನೀಡಿದ ಕಾರ್ಯನಿರ್ವಹಣಾ ಅಧಿಕಾರಿಗಳು ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಈ ವೇಳೆ ಸಾವಿತ್ರಮ್ಮ, ಜಯಶೀಲಾ, ಪುಟ್ಟರಂಗಮ್ಮ, ಮಂಜುಳ, ಶಾಂತಮ್ಮ, ಪ್ರೇಮ, ಲಕ್ಷ ್ಮಮ್ಮ ಸೇರಿದಂತೆ ಗ್ರಾಮದ ಹಲವರು ಉಪಸ್ಥಿತರಿದ್ದರು

12ಕುಣಿಗಲ್ 1: ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು.