ಧರ್ಮಸ್ಥಳ ಠಾಣೆಗೆ ಮಕ್ಕಳ ಹಕ್ಕುಗಳ ಆಯೋಗ ಅಧ್ಯಕ್ಷರ ದಿಢೀರ್ ಭೇಟಿ

Contributed byprashantha.n17@gmail.com|Vijaya Karnataka

ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ್‌ ಎಸ್‌. ಕೋಸಂಬೆ ಅವರು ಧರ್ಮಸ್ಥಳ ಠಾಣೆಗೆ ದಿಢೀರ್‌ ಭೇಟಿ ನೀಡಿದರು. ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಅವರು ಹಲವು ನಿರ್ದೇಶನಗಳನ್ನು ನೀಡಿದರು. ಪ್ರತಿ ಗುರುವಾರ ಶಾಲೆಗಳಲ್ಲಿ 'ತೆರೆದ ಮನೆ' ಕಾರ್ಯಕ್ರಮ ಕಡ್ಡಾಯಗೊಳಿಸಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಸೂಚಿಸಿದರು. ಪ್ರಕರಣಗಳ ತ್ವರಿತ ನಿರ್ವಹಣೆಗೆ ಆದೇಶಿಸಿದರು.

chairman of the child rights commission shashidhars visit to dharmasthala police station raises public awareness

ಪ್ರತಿ ಗುರುವಾರ ತೆರೆದ ಮನೆ ಕಾರ್ಯಕ್ರಮ ಕಡ್ಡಾಯ: ಶಶಿಧರ್ ಎಸ್ . ಕೋಸಂಬೆ ಸೂಚನೆ

ವಿಕ ಸುದ್ದಿಲೋಕ ಬೆಳ್ತಂಗಡಿ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಎಸ್ . ಕೋಸಂಬೆ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿ ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ನೀಡಿದರು.

ಪೊಲೀಸ್ ಠಾಣೆಯಲ್ಲಿಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳ ನಿರ್ವಹಣೆ, ದಾಖಲೆ ಸಂಗ್ರಹಣೆ ಹಾಗೂ ಮಕ್ಕಳ ವಿಶೇಷ ಪೊಲೀಸ್ ಘಟಕದ ಕಾರ್ಯವೈಖರಿ ಪರಿಶೀಲಿಸಿದ ಅವರು, ಶಾಲೆ ಮತ್ತು ಕಾಲೇಜುಗಳಲ್ಲಿಪ್ರತಿ ಗುರುವಾರ ಕಡ್ಡಾಯವಾಗಿ ‘ತೆರೆದ ಮನೆ’ ಕಾರ್ಯಕ್ರಮ ಆಯೋಜಿಸಿ ಮಕ್ಕಳಿಗೆ ಅವರ ಹಕ್ಕುಗಳು ಹಾಗೂ ಕಾನೂನುಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

ಕಾನೂನು ಸಂಘರ್ಷಕ್ಕೆ ಒಳಗಾಗುವ ಮಕ್ಕಳನ್ನು ಜುವೆನೈಲ್ ಜಸ್ಟಿಸ್ ಬೋರ್ಡ್ ಮುಂದೆ ಹಾಜರುಪಡಿಸುವಾಗ ಫಾರಂ ನಂ.1 ಅನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು. ಇದೇ ವೇಳೆ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಮಕ್ಕಳನ್ನು ಸಮಾಲೋಚನೆಗೆ ಕರೆದೊಯ್ಯುವ ಸಂದರ್ಭಗಳಲ್ಲಿಫಾರಂ ನಂ.17 ಅನ್ನು ತಪ್ಪದೇ ಭರ್ತಿ ಮಾಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಕ್ಕಳ ಅಪಹರಣ, ಪೋಕ್ಸೊ ಪ್ರಕರಣ, ಬಾಲ್ಯ ವಿವಾಹ ಸೇರಿದಂತೆ ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಮಕ್ಕಳ ನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯಿದೆ 2015ರ ಕಲಂ 107 ಹಾಗೂ ಮಕ್ಕಳ ನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಮಾದರಿ ನಿಯಮ 2016ರ ನಿಯಮ 8(6) ಮತ್ತು 86(11) ಅನ್ವಯವಾಗಿ ಪದನಿಮಿತ್ತ ಅಧಿಕಾರಿಗಳ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಗಳೊಂದಿಗೆ ಮಾಹಿತಿ ಫಲಕವನ್ನು ಪೊಲೀಸ್ ಠಾಣೆಯಲ್ಲಿಪ್ರದರ್ಶಿಸ ಬೇಕು. ಜತೆಗೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅನ್ನು ಶಾಶ್ವತ ಫಲಕದಲ್ಲಿತಕ್ಷಣ ಅಳವಡಿಸುವಂತೆ ಸೂಚನೆ ನೀಡಿದರು.

ಭೇಟಿಯ ಸಂದರ್ಭ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ ಐ ಸಮರ್ಥ ಗಾಣಿಗೇರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಫೋಟೋ :15ಕೆಎನ್ ಶಶಿಧರ್

(ಧರ್ಮಸ್ಥಳ ಪೊಲೀಸ್ ಠಾಣೆಗೆ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರ ಅಧ್ಯಕ್ಷ

ಶಶಿಧರ್ ಎಸ್ . ಕೋಸಂಬೆ ಭೇಟಿ ನೀಡಿದರು.)