ರಿಯಾಲಿಟಿ ಚೆಕ್ ಭಾಗ 4
ದೊಡ್ಡಬಳ್ಳಾಪುರದ ಪುರಾತನ ಕಲ್ಯಾಣಿಗಳಲ್ಲಿಕಸ | ಸ್ವಚ್ಛತೆ, ಸಂರಕ್ಷಣೆ ಅಗತ್ಯ
ರವಿಶಂಕರಪ್ಪ ದೊಡ್ಡಬಳ್ಳಾಪುರ ಗ್ರಾ.
ದೇಶದ ಸಂಸ್ಕೃತಿಯಲ್ಲಿಕಲ್ಯಾಣಿಗಳು ಧಾರ್ಮಿಕ, ಸಾಮಾಜಿಕ ಮತ್ತು ಪರಿಸರ ಮಹತ್ವ ಹೊಂದಿರುವ ಪವಿತ್ರ ಜಲಮೂಲಗಳಾಗಿವೆ, ಅಂತಹ ಕಲ್ಯಾಣಿಗಳಿಗೆ ಕಸ ಕಂಟಕವಾಗಿ ಪರಿಣಮಿಸಿದೆ. ನಗರದ ಪ್ರಮುಖ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಲ್ಯಾಣಿಗಳನ್ನು ಕಸ ಹಾಕಲು ಬಳಸಲಾಗುತ್ತಿದೆ. 15ನೇ ಶತಮಾನದಲ್ಲಿನಿರ್ಮಾಣವಾದ ಕಲ್ಯಾಣಿಗಳಲ್ಲಿಕಸದ ರಾಶಿ ನೋಡಸಿಗುತ್ತಿದೆ. ಇಲ್ಲಿನ ಇಂತಹ ಅನೇಕ ಕಲ್ಯಾಣಿಗಳು ಕಸದ ತೊಟ್ಟಿಗಳಾಗಿ ಮಾರ್ಪಟ್ಟಿವೆ. ಬಸವ ಭವನದ ಸೋಮೇಶ್ವರ ಬಳಿ ಇರುವ ಕಲ್ಯಾಣಿ, ನಗರ ಹೃದಯ ಭಾಗದ 16 ಕಣ್ಣಿನ ಕಲ್ಯಾಣಿಗಳು ಕಸ ಸುರಿದು ಕಲುಷಿತವಾಗಿವೆ. ಕೆಲವು ಕಲ್ಯಾಣಿಗಳು ಈಗಾಗಲೇ ಮುಚ್ಚಲ್ಪಟ್ಟಿವೆ. ಜಲಮೂಲಗಳೇ ಇಲ್ಲದ ನಗರದಲ್ಲಿದುಸ್ಥಿತಿಯಲ್ಲಿರುವ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ, ಐತಿಹಾಸಿಕ ಕುರುಗಳ ರಕ್ಷಣೆಗೆ ಗಮನ ನೀಡಬೇಕಿದೆ.
ದುಸ್ಥಿತಿಯಲ್ಲಿರುವ ಕಲ್ಯಾಣಿಗಳು: ನಗರದಲ್ಲಿಒಟ್ಟು ಪುರಾತನ 7 ಕಲ್ಯಾಣಿಗಳಿವೆ. ಬಸವ ಭವನದ ಸೋಮೇಶ್ವರ ದೇಗುಲ ಬಳಿ ಇರುವ ಕಲ್ಯಾಣಿ, ನಗರದ ಹೃದಯ ಭಾಗದ 16 ಕಣ್ಣಿನ ಕಲ್ಯಾಣಿ, ರೋಜಿಪುರದ ನ್ಯಾಯಾಲಯ ಬಳಿ ಇರುವ ಕಲ್ಯಾಣಿ, ಟಿ.ಬಿ. ವೃತ್ತದ ನಂದಿ ಮೋರಿ ಬಳಿ ಇರುವ ಕಲ್ಯಾಣಿ, ಭಗತ್ ಸಿಂಗ್ ಕ್ರೀಡಾಂಗಣದ ಬಳಿ ಇರುವ ಕಲ್ಯಾಣಿ, ಹೇಮಾವತಿ ಪೇಟೆ ಬಳಿಯ ಕಲ್ಯಾಣಿ, ಕಾಶಿ ವಿಶ್ವೇಶ್ವರ ದೇಗುಲ ಬಳಿಯ ಕಲ್ಯಾಣಿ ದುಸ್ಥಿಯಲ್ಲಿವೆ.
ಕುರುಹಗಳ ಉಳಿವಿಗೆ ಒತ್ತಾಯ: ನಗರದ ಎಲ್ಲಾಕಲ್ಯಾಣಿಗಳು 15ನೇ ಶತಮಾನದಲ್ಲಿನಿರ್ಮಾಣವಾಗಿವೆ. ಕಲ್ಯಾಣಿಗಳನ್ನು ಸಂರಕ್ಷಿಸಬೇಕಾದ ಸರಕಾರ ದುಸ್ಥಿತಿಗೆ ದೂಡಿದೆ. ಇವುಗಳು ದೊಡ್ಡಬಳ್ಳಾಪುರದ ಪ್ರಮುಖ ಐತಿಹಾಸಿಕ ಸ್ಥಳಗಳು. ಅಂದಿನ ಕಾಲದಲ್ಲಿಕಲ್ಯಾಣಿಗಳು ದೇವಾಲಯಗಳ ಬಳಿ ನಿರ್ಮಾಣವಾಗುತ್ತಿದ್ದವು. ನಗರದ ಎಲ್ಲಾಕಲ್ಯಾಣಿಗಳಿಗೂ ಧಾರ್ಮಿಕ ಹಿನ್ನೆಲೆ ಇದೆ. ನಂದಿ ಮೋರಿ ಬಳಿ ಇರುವ ಕಲ್ಯಾಣಿಯ ನೀರು ಈಗಲೂ ಸ್ವಚ್ಛವಾಗಿದೆ. ಜಲಮೂಲಗಳೇ ಇಲ್ಲದೆ ಬಳಲುತ್ತಿರುವ ನಗರಕ್ಕೆ ಕಲ್ಯಾಣಿಗಳ ಪುನಶ್ಚೇತನಗೊಳಿಸುವುದು ಅಗತ್ಯವಿದೆ. ಸಂಸ್ಕೃತಿಯ ಪ್ರತೀಕವಾದ, ಇತಿಹಾಸದ ಪರಂಪರೆಯುಳ್ಳ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ, ರಕ್ಷಿಸುವ ಜವಾಬ್ದಾರಿ ಸರಕಾರ ಹೊರಬೇಕಿದೆ ಎಂದು ಇತಿಹಾಸಕಾರ ಡಾ. ವೆಂಕಟೇಶ್ ಒತ್ತಾಯಿಸಿದ್ದಾರೆ.
ಬೇಸಿಗೆಗೆ ಬಳಕೆಯಾಗಲಿ: ಕಲ್ಯಾಣಿಗಳನ್ನು ಸ್ವಚ್ಛಗೊಳಸಿ ಮರುಬಳಕೆ ಮಾಡುವುದರಿಂದ ಬೇಸಿಗೆಯಲ್ಲಿಅನುಕೂಲವಾಗಲಿದೆ. ಈಗಾಗಲೇ ಬೇಸಿಗೆ ತಾಪಮಾನ ಏರುತ್ತಿದೆ. ಪ್ರಾಣಿ ಪಕ್ಷಿಗಳು ದಾಹ ತೀರಿಸಲು ನೀರಿನ ಮೂಲ ಹುಡುಕಿ ಬರುತ್ತವೆ. ಆದ್ದರಿಂದ ಸಾರ್ವಜನಿಕರು ಸೇರಿದಂತೆ ಪ್ರಾಣಿ ಪಕ್ಷಿಗಳು ನೀರು ಕುಡಿಯಲು ಕಲ್ಯಾಣಿಗಳು ಉಪಯುಕ್ತವಾಗಿವೆ. ಬಿಸಿಲ ತಾಪದಿಂದ ಇರುವ ಜಲಮೂಲಗಳು ಬತ್ತಿ ಹೊಗುತ್ತವೆ. ಈ ಕಾರಣದಿಂದ ನೀರಿಗೆ ಸಮಸ್ಯೆ ಉಂಟಾಗುತ್ತದೆ. ನಗರದ ಕೆರೆಗಳು ಸಹ ಕ್ರಮೇಣ ಕಲುಷಿತಗೊಳ್ಳುತ್ತಿದ್ದು, ಸ್ಥಳೀಯವಾಗಿ ಕಲ್ಯಾಣಿಗಳ ಕಸ ಸಮಸ್ಯೆ ನಿವಾರಣೆಯಾದರೆ ಸದ್ಬಳಕೆ ಮಾಡಬಹುದು.
ಏಳರಲ್ಲಿಮೂರಕಷ್ಟೇ ಆದ್ಯತೆ: ನಗರದ 7 ಪುರಾತನ ಕಲ್ಯಾಣಿಗಳ ಪೈಕಿ ಕೇವಲ ಮೂರರ ಸ್ವಚ್ಛತಗೆ ಆದ್ಯತೆ ನೀಡಲಾಗಿದೆ. ಅವುಗಳಲ್ಲಿರಾಮಣ್ಣನ ಬಾವಿ, ಸೋಮೇಶ್ವರ ದೇಗುಲ ಬಳಿಯ ಕಲ್ಯಾಣಿ, ರೋಜಿಪುರದ ಕಲ್ಯಾಣಿಗಳನ್ನು ಅಮೃತ್ ಯೋಜನೆ 2.0 ಅಡಿ ಟೆಂಡರ್ ಕರೆದು ಸ್ವಚ್ಛಗೊಳಿಸಲು ನಗರಸಭೆ ಮುಂದಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಉಳಿದ ಕಲ್ಯಾಣಿಗಳ ಉಳಿವಿಗೆ ಯಾವ ಕ್ರಮ ಕೈಗೊಂಡಿಲ್ಲ. ಕಲ್ಯಾಣಿಗಳ ದುಸ್ಥಿತಿ ಹೀಗೆ ಮುಂದುವರೆದರೆ ಐತಿಹಾಸಿಕ ಕುರುಹುಗಳು ನಶಿಸುವ ಹಂತಕ್ಕೆ ತಲುಪಲಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕೋಟ್ ,
ಅಮೃತ್ ಯೋಜನೆ 2.0 ಅಡಿ ನಗರದ 3 ಕಲ್ಯಾಣಿಗಳ ಸ್ವಚ್ಛತೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಟೆಂಡರ್ ಮೂಲಕ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲು ಆದ್ಯತೆ ನೀಡಲಾಗಿದೆ. ಸ್ವಚ್ಛಗೊಳಿಸಿದ ಕಲ್ಯಾಣಿಗಳನ್ನು ಸ್ವಸಹಾಯ ಗುಂಪುಗಳ ಸಹಾಯದಿಂದ ನಿರ್ವಹಣೆ ಮಾಡಲಾಗುವುದು.
- ಕಾರ್ತೀಕೇಶ್ವರ್ , ಪೌರಾಯುಕ್ತ, ನಗರಸಭೆ, ದೊಡ್ಡಬಳ್ಳಾಪುರ
ಕೋಟ್ ,
ಕಲ್ಯಾಣಿಗಳ ಸ್ವಚ್ಛತೆಗೆ ಅನುದಾನ ನಿರೀಕ್ಷಿಸಲಾಗುತ್ತಿದೆ. ಸ್ವಚ್ಛಗೊಂಡ ಕಲ್ಯಾಣಿಗಳ ಸರಿಯಾದ ನಿರ್ವಹಣೆ ಇಲ್ಲದೆ ಮತ್ತೆ ಕಸ ಎಸೆಯಲಾಗುತ್ತಿದೆ. ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಅಗತ್ಯ. ಕಲ್ಯಾಣಿಗಳ ಉನ್ನತಿಗೆ ನಗರಸಭೆ ಕ್ರಮ ವಹಿಸಬೇಕಿದೆ.
- ಚಿದಾನಂದ್ , ಅಧ್ಯಕ್ಷ, ಯುವ ಸಂಚಲನ, ದೊಡ್ಡಬಳ್ಳಾಪುರ
ಫೋಟೊ: 15ಡಿಬಿಪಿ01
ದೊಡ್ಡಬಳ್ಳಾಪುರದ ಬಸ್ ನಿಲ್ದಾಣ ಬಳಿಯ 16 ಕಣ್ಣಿನ ಕಲ್ಯಾಣಿಯಲ್ಲಿಕಸ ಸುರಿಯಲಾಗಿದೆ.
ಫೋಟೊ:15ಡಿಬಿಪಿ02
ಬಸವ ಭವನ ಸೋಮೇಶ್ವರ ದೇವಾಲಯ ಬಳಿಯ ಕಲ್ಯಾಣಿ ಸಂಪೂರ್ಣ ಹಾಳಾಗಿದೆ.

