ವಿಕ ಸುದ್ದಿಲೋಕ ಬಂಟ್ವಾಳ
ಬಂಟ್ವಾಳ ಪುರಸಭೆಯ 2026-27ನೇ ಸಾಲಿನ ಮುಂಗಡ ಆಯವ್ಯಯ ತಯಾರಿಸಲು ಪೂರ್ವಭಾವಿ ಸಮಾಲೋಚನಾ ಸಭೆ ಬುಧವಾರ ಸಂಜೆ ನಡೆದಿದ್ದು, ಸಲಹೆ ನೀಡುವ ಸಭೆ ಚರ್ಚಾಗೋಷ್ಠಿಯಾಗಿ ಮಾರ್ಪಟ್ಟಿತು.
ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ಬಂಟ್ವಾಳ ಪುರಸಭೆ ವ್ಯಾಪ್ತಿಯ ನಾನಾ ಸಂಘ, ಸಂಸ್ಥೆಗಳ ಮುಖ್ಯಸ್ಥರನ್ನು ಸಭೆಗೆ ಆಹ್ವಾನಿಸಿ ಬಜೆಟ್ ಕುರಿತು ಸಲಹೆ ಸೂಚನೆಗಳನ್ನು ನೀಡಲು ಕೋರಿದ್ದರು.
ಬಂಟ್ವಾಳ ವರ್ತಕರ ಸಂಘದ ಅಧ್ಯಕ್ಷ ಬಿ.ಲಕ್ಷ್ಮಣ ಬಾಳಿಗ, ಕಾರ್ಯದರ್ಶಿ ಬಿ.ಸುರೇಶ್ ಬಾಳಿಗ, ನಾನಾ ಸಂಘ, ಸಂಸ್ಥೆಗಳ ಪ್ರಮುಖರಾದ ಮೋಹನ್ ಚಂಡ್ತಿಮಾರ್ , ಪುರುಷೋತ್ತಮ ಎಸ್ . ಬಂಗೇರ, ಸಂತೋಷ್ ಬಿ., ಎ. ರವಿಸುಬ್ರಾಯ ಹೊಳ್ಳ, ನಾಗೇಶ್ ಡಿ., ಹರಿಪ್ರಸಾದ್ ಭಂಡಾರಿಬೆಟ್ಟು, ಬಿ.ಸತೀಶ್ ಕುಲಾಲ್ , ಬಿ.ಸುರೇಶ್ ಬಂಗೇರ, ದಾಮೋದರ ಸಂಚಯಗಿರಿ, ಜಗದೀಶ್ ಕುಂದರ್ , ವಸಂತಿ ಗಂಗಾಧರ್ , ರಾಜೇಶ್ ಭಂಡಾರಿ ಸಹಿತ ಪ್ರಮುಖ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಿದ್ದರು. ಅಧಿಕಾರಿಗಳ ಪರವಾಗಿ ಡೊಮಿನಿಕ್ ಡಿಮೆಲ್ಲೊ, ಉಮಾವತಿ, ರಜಾಕ್ ಮತ್ತಿತರರು ಪೂರಕ ಮಾಹಿತಿ ನೀಡಿದರು.
ಈ ವೇಳೆ ಪುರಸಭೆಯ ಆದಾಯವೆಷ್ಟು, ಆದಾಯದ ಮೂಲ ಹೇಗಾಗುತ್ತದೆ ಇತ್ಯಾದಿ ವಿಷಯವನ್ನು ಸುರೇಶ್ ಬಾಳಿಗ ಮುಖ್ಯಾಧಿಕಾರಿ ಬಳಿ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಸುದೀರ್ಘ ಮಾಹಿತಿ ಒದಗಿಸಿ, ಈ ಬಾರಿ ನಾನಾ ಮೂಲಗಳಿಂದ ಸುಮಾರು 4 ಕೋಟಿ ರೂ. ಆದಾಯ ಸಂಗ್ರಹದ ಗುರಿ ನಿರೀಕ್ಷಿಸಲಾಗಿದೆ ಎಂದರು. ಬಂಟ್ವಾಳ ಪುರಸಭೆ ವ್ಯಾಪ್ತಿಯ ಬಂಟ್ವಾಳ ಪೇಟೆಯಲ್ಲಿಸಮರ್ಪಕ ಡ್ರೈನೇಜ್ , ಶೌಚಾಲಯವಿಲ್ಲದೆ ಸಮಸ್ಯೆಯಾಗಿದ್ದು, ಬಹುತೇಕ ಕಟ್ಟಡಗಳಿಗೆ ಖಾತೆ ಆಗಿಲ್ಲ, ಮಾಡಿಸಿದರೆ ಆದಾಯ ವೃದ್ಧಿಯಾಗುತ್ತದೆ, ಮೂವತ್ತು ವರ್ಷಗಳಿಂದ ಬಂಟ್ವಾಳ ಪೇಟೆ ಸಮಸ್ಯೆಯಲ್ಲಿದೆ ಎಂದು ಹೇಳಿದರು. ಈ ವೇಳೆ ಮಾಜಿ ಸದಸ್ಯ ಜಗದೀಶ್ ಕುಂದರ್ ಪ್ರಶ್ನಿಸಿದ ರೀತಿಯನ್ನು ಮತ್ತೊಬ್ಬ ಮಾಜಿ ಸದಸ್ಯ ಹರಿಪ್ರಸಾದ್ ಆಕ್ಷೇಪಿಸಿದಾಗ ಮಾತಿನ ಚಕಮಕಿ ನಡೆಯಿತು.
ಬಜೆಟ್ ಮೀಟಿಂಗ್ ಜನವರಿಯಲ್ಲಿಮಾಡಬೇಕಿತ್ತು ಎಂದು ಹೇಳಿದ ಹರಿಪ್ರಸಾದ್ , ನೀರಿನ ಬಿಲ್ ಆದಾಯ ಹೇಗೆ ಹೊಂದಿಸುತ್ತೀರಿ, ಪುರಸಭೆಗೆ ಆದಾಯ ಹೇಗೆ ಹೊಂದಿಸುತ್ತೀರಿ, ಎಸ್ .ಸಿ.ಎಸ್ .ಟಿ. ಪೂರ್ವಭಾವಿ ಸಭೆಯನ್ನೂ ಮಾಡಿಲ್ಲಎಂದು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಅನ್ನಪೂರ್ಣೇಶ್ವರಿ ದೇವಸ್ಥಾನ ಪಕ್ಕದಿಂದ ಮುಂದಕ್ಕೆ ಕೈಕುಂಜ ರಸ್ತೆಗೆ ಅನುದಾನ ನೀಡಬೇಕು ಎಂಬ ಸಲಹೆ ಬಂತು. ಸಂಚಯಗಿರಿಯ ಸಮಸ್ಯೆಗಳನ್ನು ದಾಮೋದರ ಸಂಚಯಗಿರಿ ಮತ್ತು ಸುರೇಶ್ ಬಂಗೇರ ವಿವರಿಸಿದರು. ಮೆಲ್ಕಾರ್ ಬಸ್ ನಿಲ್ದಾಣ, ಶೌಚಾಲಯ ಕುರಿತು ವಸಂತಿ ಗಂಗಾಧರ ಗಮನ ಸೆಳೆದು, ಅದಕ್ಕೆ ಅನುದಾನ ಮೀಸಲಿಡಬೇಕು ಎಂದು ಮನವಿ ಮಾಡಿದರು. ಹಲವು ಮನವಿಗಳು ಲಿಖಿತರೂಪದಲ್ಲಿಬಂದವು.
ಚಿತ್ರ: 18ಬಿಎಚ್ ಪುರಸಭೆ
ಬಂಟ್ವಾಳ ಪುರಸಭೆಯಲ್ಲಿಬಜೆಟ್ ಪೂರ್ವಭಾವಿ ಸಭೆ ನಡೆಯಿತು

