ದುಪ್ಪಟ್ಟು ದರ ನೆಪ, ಹಳೆ ಮೀಟರ್ ಜಪ | ಮನವೊಲಿಕೆಯಲ್ಲಿಜೆಸ್ಕಾಂ ಸುಸ್ತು
‘ಸ್ಮಾರ್ಟ್ ಮೀಟರ್ ’ಗೆ ಮೀನಮೇಷ
ಮಂಜುನಾಥ ಸಾಲಿ ರಾಯಚೂರು
ಘ್ಕಿಞa್ಞ್ಜ್ಠ್ಞaಠಿh.sa್ಝಜಿಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಸ್ಮಾರ್ಟ್ ಮೀಟರ್ ಅಳವಡಿಸುವುದಕ್ಕೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ದುಪ್ಪಟ್ಟು ದರವೇ ಇದಕ್ಕೆ ಕಾರಣವಾಗಿದ್ದು, ಗ್ರಾಹಕರನ್ನು ಮನವೊಲಿಸುವುದು ಜೆಸ್ಕಾಂ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.
ಸರಕಾರದ ಆದೇಶದಂತೆ ಗೃಹ ಬಳಕೆ ಮತ್ತು ವಾಣಿಜ್ಯ ಉದ್ದೇಶದ ಕಟ್ಟಡ, ಮಳಿಗೆಗಳಿಗೆ ನೂತನ ಸ್ಮಾರ್ಟ್ ಮೀಟರ್ ಅಳವಡಿಸುವುದು ಕಡ್ಡಾಯವಾಗಿದೆ. ನಾನಾ ವಿದ್ಯುತ್ ಸರಬರಾಜು ಕಂಪನಿಗಳ ಮೂಲಕ ಹೊಸ ಮೀಟರ್ ಅಳವಡಿಸುವ ಕಾರ್ಯಕ್ಕೆ ಕಳೆದ ತಿಂಗಳು ಚಾಲನೆ ನೀಡಲಾಗಿದೆ. ಹಾಗಾಗಿ, ವಿದ್ಯುತ್ ಸಂಪರ್ಕ ಪಡೆಯುತ್ತಿರುವ ನೂತನ ಗ್ರಾಹಕರಿಗೆ ಜೆಸ್ಕಾಂ ಸಿಬ್ಬಂದಿ ಸ್ಮಾರ್ಟ್ ಮೀಟರ್ ನ ಮಹತ್ವ ಹಾಗೂ ಉಪಯುಕ್ತತೆ ಕುರಿತು ತಿಳಿಸುವ ಕಾರ್ಯದಲ್ಲಿತೊಡಗಿದೆ. ಆದರೆ, ಬೆಲೆ ದುಬಾರಿ ಎಂಬುದನ್ನೇ ಪ್ರಸ್ತಾಪಿಸಿ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಲು ಜನ ಹಿಂಜರಿಯುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ.
25 ಮಾತ್ರ ಅಳವಡಿಕೆ:
ಜಿಲ್ಲೆಯ ಸಿಂಧನೂರು ಮತ್ತು ರಾಯಚೂರು ಉಪ ವಿಭಾಗ ವ್ಯಾಪ್ತಿಗೊಳಪಡುವ ನಾನಾ ತಾಲೂಕುಗಳಿಗೆ ಹಂಚಲು ಪ್ರಸ್ತುತ 1,500 ಮೀಟರ್ ಗಳನ್ನು ಜೆಸ್ಕಾಂನಿಂದ ತರಿಸಲಾಗಿದೆ. ಈ ಕುರಿತು ನೂತನ ಗ್ರಾಹಕರಿಗೆ ತಿಳಿಸುವ ಕಾರ್ಯ ಪ್ರಗತಿಯಲ್ಲಿದೆ. ಆದರೆ, ಜೆಸ್ಕಾಂನ ಸಿಂಧನೂರು ಉಪ ವಿಭಾಗ ವ್ಯಾಪ್ತಿಗೊಳಪಡುವ ಮಸ್ಕಿ ಮತ್ತು ಲಿಂಗಸುಗೂರು ತಾಲೂಕುಗಳಲ್ಲಿಇದುವರೆಗೆ 6 ಮತ್ತು ರಾಯಚೂರು ಉಪ ವಿಭಾಗ ವ್ಯಾಪ್ತಿಗೊಳಪಡುವ ಸಿರವಾರ, ದೇವದುರ್ಗ, ಮಾನ್ವಿ ತಾಲೂಕುಗಳಲ್ಲಿ19 ಸೇರಿ ಒಟ್ಟು 25 ಸ್ಮಾರ್ಟ್ ಮೀಟರ್ ಗಳನ್ನು ಮಾತ್ರ ಅಳವಡಿಸಲಾಗಿದೆ. ಪ್ರತಿ ತಿಂಗಳು ಜಿಲ್ಲಾದ್ಯಂತ ಅಂದಾಜು 800 ರಿಂದ 900 ನೂತನ ಮನೆ ನಿರ್ಮಾಣಗೊಂಡು ಹೊಸ ಮೀಟರ್ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದ್ದರೂ ನಿರೀಕ್ಷಿತ ಒಲವು ವ್ಯಕ್ತವಾಗದಿರುವುದು ಕಂಡುಬರುತ್ತಿದೆ. ಹಳೆ ಮೀಟರ್ ಮುಂದುವರಿಸಲು ಏನು ಮಾಡಲು ಸಾಧ್ಯ ಎಂದು ಪರಿಚಯವಿರುವ ಜೆಸ್ಕಾಂ ಸಿಬ್ಬಂದಿಯಿಂದಲೇ ಸಲಹೆ ಕೇಳುತ್ತಿರುವುದು ಮುಂದುವರಿದಿದೆ.
ಮನವೊಲಿಕೆ ಸವಾಲು:
ಸ್ಮಾರ್ಟ್ ಮೀಟರ್ ಗಳಿಂದ ಅನಗತ್ಯ ಸೋರಿಕೆ ತಪ್ಪಿಸುವ, ಹೆಚ್ಚು ನಿಖರ ವಿದ್ಯುತ್ ಮಾಪನ ಮಾಡುವ, ಮುಂಗಡ ಪಾವತಿ ವ್ಯವಸ್ಥೆಗೂ ಅವಕಾಶವಿರುವ, ಒಂದು ಮೀಟರ್ ಅನ್ನು ಮತ್ತೊಂದು ಮನೆಗೆ ವರ್ಗಾಯಿಸಲು ಸಾಧ್ಯವಿರದ, ಬಳಕೆ ವಿವರಗಳನ್ನು ಸುಲಭವಾಗಿ ಪತ್ತೆ ಹಚ್ಚುವ, ಪ್ರತಿ ತಿಂಗಳು ಜೆಸ್ಕಾಂ ಸಿಬ್ಬಂದಿಯೇ ಮನೆ ಬಾಗಿಲಿಗೆ ಬಂದು ಮೀಟರ್ ರೀಡಿಂಗ್ ಆಧರಿಸಿ ಬಿಲ್ ಕೊಡುವುದನ್ನು ದೂರ ಮಾಡುವ ಮುಂತಾದ ಅನುಕೂಲತೆ ಹೊಂದಿದೆ ಎನ್ನುವುದು ಜೆಸ್ಕಾಂ ವಾದ. ಸ್ಮಾರ್ಟ್ ಮೀಟರ್ ಅಳವಡಿಕೆಗೆ ಬಿಹಾರ ರಾಜ್ಯದಲ್ಲಿಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಉದಾಹರಣೆ ನೀಡುತ್ತ, ಸಾಧಕ, ಬಾಧಕಗಳ ಬಗ್ಗೆ ವಿವರಿಸುತ್ತ ಸರಕಾರದ ಆದೇಶ ಕಡ್ಡಾಯ ಪಾಲಿಸಬೇಕು ಎಂದು ಜೆಸ್ಕಾಂ ಗ್ರಾಹಕರ ಮನವೊಲಿಸುತ್ತ ಸಾಗಿದೆ. ಆದರೂ, ಶೇ.75ಕ್ಕಿಂತ ಹೆಚ್ಚು ಜನ ನಾನಾ ನೆಪ ಒಡ್ಡಿ ಹೊಸ ಮೀಟರ್ ಅಳವಡಿಸಿಕೊಳ್ಳಲು ಮೀನಮೇಷ ಎಣಿಸುತ್ತಿರುವುದು ಕಂಡುಬರುತ್ತಿದೆ.
ಕಾರಣವೇನು?:
ಸಿಂಗಲ್ ಫೇಸ್ ನ ಒಂದು ಮೀಟರ್ ಅಳವಡಿಕೆಗೆ ಈ ಹಿಂದೆ ಅಂದಾಜು 1,000-1,500 ರೂ. ಕೊಟ್ಟರೆ ಸಾಕಾಗಿತ್ತು. ಆದರೆ, ಹೊಸ ಸ್ಮಾರ್ಟ್ ಮೀಟರ್ ಗೆ 4,800 ರೂ. ಜತೆಗೆ ನೂರು ರೂ. ಬಾಕ್ಸ್ ಗೆ ಭರಿಸಬೇಕಾಗಿದೆ. ಅದೇ ರೀತಿ 3ಫೇಸ್ ನ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಲು ಬಾಕ್ಸ್ ಸೇರಿ 8,800 ರೂ. ಕೊಡಬೇಕಿದೆ. ಹಾಗಾಗಿ, ದರದ ತಕರಾರು ಮಾಡುತ್ತ, ಮುಂದಿನ ದಿನದಲ್ಲಿನೋಡೋಣ, ಹಳೆ ಮೀಟರ್ ಚಾಲ್ತಿಯಲ್ಲಿದೆಯಲ್ಲವೆ ಮತ್ತೇಕೆ ಹೊಸದು ಎಂಬಿತ್ಯಾದಿ ಪ್ರಶ್ನಿಸುತ್ತ ಜೆಸ್ಕಾಂ ಸಿಬ್ಬಂದಿಯನ್ನು ಸಾಗಹಾಕಲಾಗುತ್ತಿದೆ. ಇದರಿಂದ ಸ್ಮಾರ್ಟ್ ಮೀಟರ್ ಅಳವಡಿಕೆ ಕಾರ್ಯ ಜೆಸ್ಕಾಂಗೆ ಸವಾಲಾಗಿ ಪರಿಣಮಿಸಿದೆ.
---
ಸರಕಾರದ ಆದೇಶದಂತೆ ಹೊಸ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬೇಕಿದೆ. ಈ ಬಗ್ಗೆ ಗ್ರಾಹಕರಿಗೆ ಸ್ಪಷ್ಟಪಡಿಸಲಾಗುತ್ತಿದೆ. ಹೊಸದನ್ನು ಪರಿಚಯಿಸಿದಾಗ ಗ್ರಾಹಕರು ತಕ್ಷಣಕ್ಕೆ ಒಲವು ತೋರುವುದು ಕಷ್ಟಸಾಧ್ಯ. ಹಾಗಾಗಿ, ಆರಂಭದಲ್ಲಿನೀರಸ ಪ್ರತಿಕ್ರಿಯೆ ಎನಿಸಬಹುದು. ಆದರೆ, ನಾನಾ ಅನುಕೂಲತೆ ದೃಷ್ಟಿಯಿಂದ ಹೊಸ ಗ್ರಾಹಕರು ನಿಯಮಾನುಸಾರ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಲೇಬೇಕಾಗುತ್ತದೆ.
-ವೆಂಕಟೇಶ ಸೂಪರಿಂಟೆಂಡೆಂಟ್ ಎಂಜಿನಿಯರ್ , ಜೆಸ್ಕಾಂ, ರಾಯಚೂರು
---
ಎಐ ಚಿತ್ರ

