Bjp Claims The State Government Is Involved In Reservations Smuggling
ಒಳ ಮೀಸಲು ವಿಚಾರದಲ್ಲಿಸಿದ್ದು ಸರಕಾರದ ಕಳ್ಳಾಟ ಎಂದ ಬಿಜೆಪಿ ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಪ್ರತಿಪಕ್ಷದ ನಾಯಕರು
Contributed by: KENCHE GOWDA|Vijaya Karnataka•
ಬಿಜೆಪಿ ರಾಜ್ಯ ಸರಕಾರದ ವಿರುದ್ಧ ಒಳ ಮೀಸಲು ವಿಚಾರದಲ್ಲಿ ಕಳ್ಳಾಟ ನಡೆಸುತ್ತಿದೆ ಎಂದು ಆರೋಪಿಸಿದೆ. ಖಾಲಿ ಹುದ್ದೆಗಳ ಭರ್ತಿ ವಿಚಾರದಲ್ಲಿ ಸರಕಾರ ನ್ಯಾಯ ಒದಗಿಸುತ್ತಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಈ ಬಗ್ಗೆ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯಾದ್ಯಂತ ಆಕ್ರೋಶ ರೂಪುಗೊಂಡಿದ್ದು, ಇದನ್ನು ದೊಡ್ಡ ಆಂದೋಲನವನ್ನಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು: ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ನ್ಯಾಯಾಲಯದ ನೆಪ ಹೇಳಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ಕಳ್ಳಾಟ ನಡೆಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಸಂಬಂಧ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಬಿಜೆಪಿ ದಲಿತ ಸಮುದಾಯದ ನಾಯಕರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವರಾದ ಬಿ. ಶ್ರೀರಾಮುಲು, ಶಿವನಗೌಡ ನಾಯಕ್, ಎನ್. ಮಹೇಶ್, ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಮಾಜಿ ಸಂಸದ ಮುನಿಸ್ವಾಮಿ ಭಾಗವಹಿಸಿದ್ದರು. ಮೀಸಲಾತಿ ಮತ್ತು ಒಳ ಮೀಸಲಾತಿ ಜಾರಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬದ್ಧತೆಯೇ ಇಲ್ಲ ಎಂದು ನಾರಾಯಣಸ್ವಾಮಿ ಆರೋಪಿಸಿದರು. ಈ ಧೋರಣೆ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ರಾಜ್ಯಾದ್ಯಂತ ಜನರಲ್ಲಿ ಆಕ್ರೋಶ ಮೂಡಿದೆ. ಇದನ್ನು ದೊಡ್ಡ ಆಂದೋಲನವನ್ನಾಗಿ ಪರಿವರ್ತಿಸುತ್ತೇವೆ ಎಂದು ಅವರು ತಿಳಿಸಿದರು.ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಪರಿಶಿಷ್ಟ ಜಾತಿಗೆ ಶೇ.15 ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ.3 ರಿಂದ 7ಕ್ಕೆ ಮೀಸಲಾತಿ ಹೆಚ್ಚಿಸಲಾಗಿತ್ತು. ನ್ಯಾ. ನಾಗಮೋಹನ್ ದಾಸ್ ಸಮಿತಿ ಎಸ್ಸಿಗೆ ಶೇ.17 ಮೀಸಲಾತಿ ಶಿಫಾರಸು ಮಾಡಿತ್ತು. ಆದರೆ, ಸರ್ಕಾರ ರಾಜಕೀಯ ಲಾಭಕ್ಕಾಗಿ ಮೂರು ಗುಂಪು ಮಾಡಿ ಗೊಂದಲ ಸೃಷ್ಟಿಸಿ, ಯಾರಿಗೂ ನ್ಯಾಯ ಸಿಗದಂತೆ ಮಾಡಿದೆ ಎಂದು ನಾರಾಯಣಸ್ವಾಮಿ ದೂರಿದರು. ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಮೇಲೆ ಒತ್ತಡ ತಂದು ಅಂಕಿತ ಹಾಕಿಸಿಕೊಂಡ ಸರ್ಕಾರ ಈಗ ನ್ಯಾಯಾಲಯದತ್ತ ಬೊಟ್ಟು ಮಾಡುತ್ತಿದೆ. ಸುಳ್ಳು ಹೇಳುವುದರಲ್ಲಿ ನಿಪುಣರಾದ ಸಿಎಂ ಈಗ ಸಿಕ್ಕಿಬಿದ್ದಿದ್ದಾರೆ ಎಂದು ಅವರು ಆರೋಪಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೊಟ್ಟಿಲು ತೂಗುವ ಜತೆಗೆ ಮಗುವನ್ನು ಚಿವುಟುವ ಕೆಲಸ ಮಾಡುತ್ತಿದ್ದಾರೆ. ಹಳೆಯ ಮೀಸಲಾತಿ ಪ್ರಕಾರವೇ ನೇಮಕ ಪ್ರಕ್ರಿಯೆ ಕೈಗೆತ್ತಿಕೊಳ್ಳಲು ಮುಂದಾಗುವ ಮೂಲಕ ರಾಜ್ಯದಲ್ಲಿ ಬೆಂಕಿ ಹಚ್ಚಲು ಹೊರಟಿದ್ದಾರೆ. 'ಅಹಿಂದ' ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರು ಅದೇ ಸಮುದಾಯದ ತಾಳ್ಮೆ ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.