ಬೆಂಗಳೂರು: ರಾಜ್ಯದಲ್ಲಿಖಾಲಿಯಿರುವ ಸರಕಾರಿ ಹುದ್ದೆಗಳನ್ನು ಶೇ.50ರಷ್ಟು ಮೀಸಲು ಅನ್ವಯಿಸಿ ನೇಮಕಾತಿ ನಡೆಸುವ ಸಂಬಂಧ ಡಿಪಿಎಆರ್ ಹೊರಡಿಸಿರುವ ಆದೇಶವನ್ನು ಪರಿಷ್ಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿದ್ದಾರೆ ಎಂದು ಸಚಿವ ಕೆ.ಎಚ್ . ಮುನಿಯಪ್ಪ ತಿಳಿಸಿದ್ದಾರೆ. ‘‘ಸರಕಾರದ ಆದೇಶದಲ್ಲಿಒಳ ಮೀಸಲು ಅಳವಡಿಸುವ ಪ್ರಸ್ತಾಪವೇ ಇಲ್ಲ. ಇದರಿಂದ ಪರಿಶಿಷ್ಟರ ಎಡಗೈ ಸಮುದಾಯಕ್ಕೆ ಆಘಾತವಾಗಿದೆ. ಪರಿಶಿಷ್ಟ ಜಾತಿಯ ಶೇ.15ರಷ್ಟು ಮೀಸಲಿನಲ್ಲಿಒಳ ಮೀಸಲು ಅಳವಡಿಸಲೇಬೇಕು, ಈ ಸಂಬಂಧ ಮಾ.5ರಂದು ನಡೆಯಲಿರುವ ಸಂಪುಟ ಸಭೆಯಲ್ಲಿಚರ್ಚಿಸಿ ತೀರ್ಮಾನಿಸುವುದಾಗಿ ಸಿಎಂ ಅವರು ಭರವಸೆ ನೀಡಿದ್ದಾರೆ,’’ ಎಂದು ತಿಳಿಸಿದರು. ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಆಗ್ರಹಿಸಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ ಪರಿಣಾಮ ಕಳೆದ ಫೆ.26ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿಈ ಹಿಂದಿನಂತೆ ಶೇ.50ರಷ್ಟು ಮೀಸಲು ಅನ್ವಯಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಒಪ್ಪಿಗೆ ನೀಡಿದೆ. ಈ ವಿಚಾರವಾಗಿ ಅಡ್ವೊಕೇಟ್ ಜನರಲ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದು, ಒಳ ಮೀಸಲು ಅನುಷ್ಠಾನಕ್ಕೆ ಯಾವುದೇ ಅಡ್ಡಿ ಇಲ್ಲಎಂದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೂ ಚರ್ಚಿಸಿದ್ದೇವೆ ಎಂದು ತಿಳಿಸಿದರು.

